ವಿರಾಟ್ ಕೊಹ್ಲಿಗೆ ಬಿತ್ತು ಬಲವಾದ ದಂಡದ ಬರೆ; ನಿಷೇಧದ ಭೀತಿಯಲ್ಲಿ ಕಿಂಗ್ ಕೊಹ್ಲಿ..!
ಬೆಂಗಳೂರು(ಏ.25): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡು ಗೆಲುವು ದಾಖಲಿಸುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಅದರೆ ಇದೇ ವೇಳೆ ವಿರಾಟ್ ಕೊಹ್ಲಿ, ಇನ್ನೊಂದು ತಪ್ಪು ಮಾಡಿದರೆ ನಿಷೇಧದ ಶಿಕ್ಷೆಗೆ ಒಳಗಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮಾರ್ಚ್ 23ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ತಂಡವು 7 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿದೆ.
ಇದು 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದಾಖಲಿಸಿದ 4ನೇ ಗೆಲುವಾಗಿದ್ದು, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಇನ್ನು ವಿರಾಟ್ ಕೊಹ್ಲಿ, ಹಂಗಾಮಿ ನಾಯಕರಾಗಿ ಕೆಲ ಪಂದ್ಯಗಳ ಮಟ್ಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿದ್ದು, ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿ ಭಾರೀ ತಂಡ ತೆತ್ತಿದ್ದಾರೆ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎರಡನೇ ಬಾರಿಗೆ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದೆ. ಹೀಗಾಗಿ ನಾಯಕರಾಗಿದ್ದ ವಿರಾಟ್ ಕೊಹ್ಲಿಗೆ 24 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ.
ಇನ್ನು ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದಲ್ಲಿ ಕಣಕ್ಕಿಳಿದ ಆರ್‌ಸಿಬಿ ತಂಡದ ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಉಳಿದೆಲ್ಲಾ ಆಟಗಾರರಿಗೆ ಸ್ಲೋ ಓವರ್ ರೇಟ್ ಹೊಂದಿದ ತಪ್ಪಿಗಾಗಿ ತಲಾ 6 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ.
ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಬಾರಿಗೆ ನಿಧಾನಗತಿಯ ಬೌಲಿಂಗ್ ಮಾಡುವ ಮೂಲಕ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ. ಈ ಹಿಂದೆ ಮುಂಬೈ ಇಂಡಿಯನ್ಸ್ ಎದುರಿನ ಮೊದಲ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡವು ನಿಧಾನಗತಿಯಲ್ಲಿ ಬೌಲಿಂಗ್ ಮಾಡಿತ್ತು. ಆಗ ಫಾಫ್ 12 ಲಕ್ಷ ರುಪಾಯಿ ದಂಡ ತೆತ್ತಿದ್ದರು.
ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡವು ಮುಂಬರುವ ಪಂದ್ಯಗಳಲ್ಲಿ ಇದೇ ರೀತಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದರೆ, ಅದು ಮೂರನೇ ಬಾರಿಗೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದಂತಾಗುತ್ತದೆ. ಆಗ ನಾಯಕರಾದವರಿಗೆ 30 ಲಕ್ಷ ರುಪಾಯಿ ದಂಡ ಹಾಗೂ ಮುಂದಿನ ಒಂದು ಪಂದ್ಯದ ಮಟ್ಟಿಗೆ ಅವರನ್ನು ತಂಡದಿಂದ ಬ್ಯಾನ್ ಮಾಡಲಾಗುತ್ತದೆ.