ಭಾರತ ಕೊನೆಯ ಬಾರಿಗೆ ಐಸಿಸಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ಸೋಲಿಸಿದ್ದಾಗ ಕೊಹ್ಲಿಗೆ ಕೇವಲ 14 ವರ್ಷ..!
ಬೆಂಗಳೂರು: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಬಹುನಿರೀಕ್ಷಿತ ಮತ್ತೊಂದು ಹೈವೋಲ್ಟೇಜ್ ಕದನಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಧರ್ಮಶಾಲಾದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಡಲಿವೆ. ಭಾರತ ತಂಡವು ಎರಡು ದಶಕಗಳಿಂದ ಕಿವೀಸ್ ಎದುರು ಐಸಿಸಿ ಟೂರ್ನಿಯಲ್ಲಿ ಗೆಲ್ಲಲು ಹೆಣಗಾಡುತ್ತಿದೆ. ಭಾರತ ಕೊನೆಯ ಬಾರಿಗೆ ಕಿವೀಸ್ ಎದುರು ಐಸಿಸಿ ಟೂರ್ನಿಯಲ್ಲಿ ಗೆದ್ದಾಗ ಏನೆಲ್ಲಾ ಆಗಿತ್ತು ಎನ್ನುವ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಐಸಿಸಿ ಟೂರ್ನಿಯ ಬದ್ದ ಎದುರಾಳಿಗಳಾದ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ಈ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ.
ಉಭಯ ತಂಡಗಳು ಟೂರ್ನಿಯಲ್ಲಿ ತಲಾ 4 ಪಂದ್ಯಗಳನ್ನಾಡಿ ನಾಲ್ಕೂ ಪಂದ್ಯಗಳಲ್ಲೂ ಗೆಲುವಿನ ನಗೆ ಬೀರಿವೆ. ನೆಟ್ ರನ್‌ರೇಟ್ ಆಧಾರದಲ್ಲಿ ಕಿವೀಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ.
ಐಸಿಸಿ ಟೂರ್ನಿಯಲ್ಲಿ ಹಲವು ಬಲಾಢ್ಯ ತಂಡಗಳಿಗೆ ಮಣ್ಣುಮುಕ್ಕಿಸಿರುವ ಟೀಂ ಇಂಡಿಯಾ, ನ್ಯೂಜಿಲೆಂಡ್ ಎದುರು ಗೆಲ್ಲಲು ಹೆಣಗಾಡುತ್ತಿದೆ. ಭಾರತ ತಂಡವು ಕಳೆದ ಎರಡು ದಶಕದಿಂದ ಐಸಿಸಿ ಟೂರ್ನಿಯಲ್ಲಿ ಕಿವೀಸ್ ತಂಡವನ್ನು ಸೋಲಿಸಲು ಸಾಧ್ಯವಾಗಿಲ್ಲ.
2003ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾ, ಐಸಿಸಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು. ಇದಾದ ಬಳಿಕ ದ್ರಾವಿಡ್, ಧೋನಿ, ಕೊಹ್ಲಿ ಸೇರಿದಂತೆ ಹಲವು ನಾಯಕರಿಗೆ ಐಸಿಸಿ ಟೂರ್ನಿಯಲ್ಲಿ ಕಿವೀಸ್ ಮಣಿಸಲು ಸಾಧ್ಯವಾಗಿಲ್ಲ.
ಟೀಂ ಇಂಡಿಯಾ, ಐಸಿಸಿ ಟೂರ್ನಿಯಲ್ಲಿ ಕೊನೆಯ ಬಾರಿಗೆ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ್ದಾಗ, ಭಾರತದ ರನ್ ಮಷೀನ್ ವಿರಾಟ್ ಕೊಹ್ಲಿಗೆ 14 ವರ್ಷ ಹಾಗೂ ರೋಹಿತ್ ಶರ್ಮಾಗೆ 16 ವರ್ಷಗಳಾಗಿತ್ತು.
ಇನ್ನು ಟೀಂ ಇಂಡಿಯಾದ ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಎರಡು ವಿಶ್ವಕಪ್(ಟಿ20& ಏಕದಿನ) ಫೈನಲ್ ಹೀರೋ ಗೌತಮ್ ಗಂಭೀರ್ ಇನ್ನೂ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿರಲಿಲ್ಲ.
ಇನ್ನು ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಇಂದು ಕ್ರಿಕೆಟ್ ಅಭಿಮಾನಿಗಳನ್ನು ಹೊಡಿಬಡಿಯಾಟದ ಮೂಲಕ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿರುವ ಟಿ20 ಕ್ರಿಕೆಟ್ ಅಧಿಕೃತವಾಗಿ ಪರಿಚಿತವೇ ಆಗಿರಲಿಲ್ಲ.
ಇದಷ್ಟೇ ಅಲ್ಲ, ಇಂದು ಅತಿಹೆಚ್ಚು ಟೆಸ್ಟ್ ಪಂದ್ಯ ಹಾಗೂ ಅತಿಹೆಚ್ಚು ಟೆಸ್ಟ್ ರನ್ ಬಾರಿಸಿದ ಸರದಾರ ಎನಿಸಿಕೊಂಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಆಗ ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನೂ 9 ಸಾವಿರ ರನ್ ಕೂಡಾ ಬಾರಿಸಿರಲಿಲ್ಲ.
2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ರೋಚಕ ಸೋಲು ಹಾಗೂ 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಸೋಲಿಗೆ ಇಂದು ಟೀಂ ಇಂಡಿಯಾ, ಕಿವೀಸ್‌ಗೆ ತಕ್ಕ ಉತ್ತರ ಕೊಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.