ಐಪಿಎಲ್‌ನಲ್ಲಿ ಮಿಂಚಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫೇಲ್ ಆದ ಟಾಪ್ 5 ಕ್ರಿಕೆಟಿಗರಿವರು..!
ಬೆಂಗಳೂರು: ಭಾರತ ಕ್ರಿಕೆಟ್ ತಂಡ ಬಲಿಷ್ಠವಾಗಲು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮಹತ್ತರವಾದ ಪಾತ್ರವನ್ನು ನಿಭಾಯಿಸಿದೆ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಐಪಿಎಲ್ ಉತ್ತಮ ವೇದಿಕೆಯಾಗಿ ಪರಿಣಮಿಸಿದೆ. ಐಪಿಎಲ್‌ನಲ್ಲಿ ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡ ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶನ್, ರಿಷಭ್ ಪಂತ್, ಪಾಂಡ್ಯ ಬ್ರದರ್ಸ್, ಯುಜುವೇಂದ್ರ ಚಹಲ್ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದಾರೆ. ನಾವಿಂದು ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ತೋರಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಫಲವಾದ ಟಾಪ್ 5 ಕ್ರಿಕೆಟಿಗರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

1. ಜಯದೇವ್ ಉನಾದ್ಕತ್
ಸೌರಾಷ್ಟ್ರದ ಎಡಗೈ ವೇಗಿ ಜಯದೇವ್ ಉನಾದ್ಕತ್ 2015 ಹಾಗೂ 2016ನೇ ಸಾಲಿನ ಐಪಿಎಲ್‌ನಲ್ಲಿ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ 2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ 12 ಪಂದ್ಯಗಳನ್ನಾಡಿ ಕೇವಲ 7.03 ಎಕಾನಮಿಯಲ್ಲಿ ರನ್ ನೀಡಿ 24 ವಿಕೆಟ್ ಕಬಳಿಸುವ ಮೂಲಕ ಪುಣೆ ತಂಡ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದರ ಬೆನ್ನಲ್ಲೇ ರಾಷ್ಟ್ರೀಯ ತಂಡಕ್ಕೆ ಎಂಟ್ರಿಕೊಟ್ಟ ಉನಾದ್ಕತ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. 2018ರಲ್ಲಿ ಭಾರತ ಪರ 6 ಟಿ20 ಪಂದ್ಯಗಳನ್ನಾಡಿ ಕೇವಲ 10 ವಿಕೆಟ್ ಪಡೆಯಲಷ್ಟೇ ಶಕ್ತರಾದರು. 9.88ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟ ಪರಿಣಾಮ ಉನಾದ್ಕತ್ ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ವಿಫಲರಾದರು.
2. ಮೋಹಿತ್ ಶರ್ಮಾ
ನೀಳಕಾಯದ ವೇಗಿ ಮೋಯಿತ್ ಶರ್ಮಾ 2013ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮೊನಚಾದ ದಾಳಿ ನಡೆಸುವ ಮೂಲಕ ಮಿಂಚಿದ್ದರು. ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲೇ 20 ವಿಕೆಟ್ ಕಬಳಿಸುವ ಮೂಲಕ ಮೋಹಿತ್ ಶರ್ಮಾ ಟೀಂ ಇಂಡಿಯಾ ಆಯ್ಕೆಗಾರರ ಗಮನ ಸೆಳೆದಿದ್ದರು. 2014ನೇ ಆವೃತ್ತಿಯ ಐಪಿಎಲ್‌ನಲ್ಲಿ ಮತ್ತದೇ ಮಿಂಚಿನ ಪ್ರದರ್ಶನ ತೋರಿ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಐಪಿಎಲ್‌ನಲ್ಲಿ ತೋರಿದ ಅಮೋಘ ಪ್ರದರ್ಶನದ ನೆರವಿನಿಂದ ಮೋಹಿತ್ ಶರ್ಮಾ 2014ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮೋಹಿತ್ ವೈಫಲ್ಯ ಅನುಭವಿಸಿದರು. ಟೀಂ ಇಂಡಿಯಾ ಪರ 8 ಪಂದ್ಯಗಳನ್ನಾಡಿ ಕೇವಲ 6 ವಿಕೆಟ್ ಕಬಳಿಸಲಷ್ಟೇ ಶಕ್ತರಾದರು. ಅದರಲ್ಲೂ 8ಕ್ಕೂ ಹೆಚ್ಚಿನ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದರಿಂದ ಮೋಹಿತ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಯಶಸ್ವಿಯಾಗಲಿಲ್ಲ.
3. ಕರ್ಣ್ ಶರ್ಮಾ
ನೀಳಕಾಯದ ಲೆಗ್ ಸ್ಪಿನ್ನರ್ ಕರ್ಣ್ ಶರ್ಮಾ 2013ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೇವಲ 6.60 ಎಕಾನಮಿಯಂತೆ ಶಿಸ್ತುಬದ್ದ ಬೌಲಿಂಗ್ ದಾಳಿ ನಡೆಸಿ 11 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು 2014ರಲ್ಲಿ ಸಹಾ 14 ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿ ಟೀಂ ಇಂಡಿಯಾ ಆಯ್ಕೆಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಇದರ ಬೆನ್ನಲ್ಲೇ ಕರ್ಣ್ ಶರ್ಮಾ ಲಂಕಾ ಎದುರಿನ ಏಕದಿನ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಲಂಕಾ ಎದುರಿನ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಕಬಳಿಸಲು ಕರ್ಣ್ ಶರ್ಮಾಗೆ ಸಾಧ್ಯವಾಗಲಿಲ್ಲ. ಇನ್ನು 2014ರಲ್ಲೇ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಂಡರು. ಆದರೆ ಟೆಸ್ಟ್‌ನಲ್ಲೂ ಕರ್ಣ್ ಶರ್ಮಾ ವಿಫಲವಾಗಿದ್ದರಿಂದ ಟೀಂ ಇಂಡಿಯಾ ಪಾಳಯದಿಂದ ಹೊರಬಿದ್ದರು.
4. ಸಂದೀಪ್ ಶರ್ಮಾ
ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರ 2014 ಹಾಗೂ 2015ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಒಟ್ಟಾರೆ 31 ವಿಕೆಟ್ ಕಬಳಿಸುವ ಮೂಲಕ ಮಧ್ಯಮ ವೇಗದ ಬೌಲರ್ ಸಂದೀಪ್ ಶರ್ಮಾ ಮಿಂಚಿದ್ದರು. ಅದರಲ್ಲೂ 6 ಮೇಡನ್ ಓವರ್ ಬೌಲಿಂಗ್ ಮಾಡಿ ಟೀಂ ಇಂಡಿಯಾ ಆಯ್ಕೆಗಾರರ ಮನ ಸೆಳೆಯುವಲ್ಲಿ ಸಂದೀಪ್ ಶರ್ಮಾ ಯಶಸ್ವಿಯಾಗಿದ್ದರು.
ಪರಿಣಾಮ 2015ರಲ್ಲಿ ಜಿಂಬಾಬ್ವೆ ವಿರುದ್ದದ ಟಿ20 ಸರಣಿಗೆ ಸಂದೀಪ್ ಶರ್ಮಾ ಆಯ್ಕೆಯಾದರು. ಆದರೆ ಐಪಿಎಲ್‌ನಲ್ಲಿ ತೋರಿದ ಝಲಕ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ತೋರಿಸಲು ಸಂದೀಪ್ ಶರ್ಮಾಗೆ ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ಪರ 2 ಪಂದ್ಯಗಳನ್ನಾಡಿ ಕೇವಲ ಒಂದು ವಿಕೆಟ್ ಕಬಳಿಸಲಷ್ಟೇ ಯಶಸ್ವಿಯಾದ ಸಂದೀಪ್ ಶರ್ಮಾ 10.43ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಹೀಗಾಗಿ ತಂಡದಿಂದ ಹೊರಬಿದ್ದರು.
5. ಮುರುಳಿ ವಿಜಯ್
2009, 2010 ಹಾಗೂ 2011ನೇ ಸಾಲಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನ ಹಿಂದೆ ಮುರುಳಿ ವಿಜಯ್ ಪಾತ್ರ ಪ್ರಮುಖವಾಗಿತ್ತು. ಮೂರು ಐಪಿಎಲ್ ಆವೃತ್ತಿಗಳಿಂದ ವಿಜಯ್ 1,228 ರನ್ ಬಾರಿಸಿದ್ದರು.
ವಿಜಯ್ 2010ರಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಸಾಕಷ್ಟು ಅವಕಾಶ ದೊರೆತರೂ ಅದನ್ನು ಸದುಪಯೋಗ ಪಡಿಸಿಕೊಳ್ಳಲು ವಿಜಯ್ ವಿಫಲರಾದರು. 2010ರಲ್ಲಿ 6 ಪಂದ್ಯಗಳಿಂದ ಕೇವಲ 108 ರನ್ ಗಳಿಸಲಷ್ಟೇ ವಿಜಯ್ ಶಕ್ತರಾದರು. ಇನ್ನು 2011ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಏಕೈಕ ಪಂದ್ಯವನ್ನಾಡಿದರಾದರೂ 12 ಎಸೆತಗಳಲ್ಲಿ 14 ರನ್ ಅಷ್ಟೇ ಗಳಿಸಿದರು. ಆ ಬಳಿಕ ಬಹುತೇಕ ಸೀಮಿತ ಓವರ್‌ಗಳಲ್ಲಿ ವಿಜಯ್ ಭವಿಷ್ಯ ಅಂತ್ಯವಾದಂತೆ ಆಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.