ಇಡೀ ಶಾಲೆಗೆ ಗೊತ್ತಿತ್ತು ನಾನವರ ಕ್ರಶ್ ಎಂದು..! ಕ್ರಿಕೆಟಿಗ ಅಶ್ವಿನ್ ಪತ್ನಿಯ ಇಂಟ್ರೆಸ್ಟಿಂಗ್ ಲವ್ ಸ್ಟೋರಿ
ನವದೆಹಲಿ:ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಬಾಲ್ಯದ ಗೆಳತಿ ಪ್ರೀತಿಯನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ. ಇದೀಗ ರವಿಚಂದ್ರನ್ ಅಶ್ವಿನ್ ಅವರ ಪತ್ನಿ ಪ್ರೀತಿ ಅಶ್ವಿನ್, ತಮ್ಮ ಇಂಟ್ರೆಸ್ಟಿಂಗ್ ಲವ್ ಸ್ಟೋರಿ ಬಗ್ಗೆ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕಳೆದೊಂದು ದಶಕದಿಂದಲೂ ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ತಮಿಳುನಾಡು ಮೂಲದ ರವಿಚಂದ್ರನ್ ಅಶ್ವಿನ್, ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಾದ ಐಪಿಎಲ್‌ನಲ್ಲೂ ಮಿಂಚುತ್ತಲೇ ಬಂದಿದ್ದಾರೆ.
36 ವರ್ಷದ ರವಿಚಂದ್ರನ್ ಅಶ್ವಿನ್ ಅವರ ಯಶಸ್ಸಿನ ಹಿಂದೆ ಅವರ ಪತ್ನಿ ಪ್ರೀತಿಯವರ ಕೈವಾಡವೂ ಇದೆ. ಅಶ್ವಿನ್ ಏಳು-ಬೀಳಿನ ಜತೆ ಪ್ರೀತಿ ಆಧಾರಸ್ತಂಭವಾಗಿ ನಿಲ್ಲುತ್ತಾ ಬಂದಿದ್ದು, ಇದೇ ಮೊದಲ ಬಾರಿಗೆ ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟಿದ್ದಾರೆ.
ಜಿಯೋಸಿನಿಮಾದ ಹ್ಯಾಂಗೌಟ್ ಕಾರ್ಯಕ್ರಮದಲ್ಲಿ ಪ್ರೀತಿ ಅಶ್ವಿನ್, ತಮ್ಮ ಪತಿಯ ಕುರಿತಾದ ಹಲವಾರು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾನಿಯಾ ಮಿರ್ಜಾ, ವೇದಾ ಕೃಷ್ಣಮೂರ್ತಿ ಹಾಗೂ ಡ್ಯಾನಿಶ್ ಶೇಠ್ ಕೂಡಾ ಪಾಲ್ಗೊಂಡಿದ್ದರು.
ಪ್ರೀತಿ ಅಶ್ವಿನ್, ತಮ್ಮ ಆ ದಿನಗಳನ್ನು ಈ ಕಾರ್ಯಕ್ರಮದಲ್ಲಿ ಮೆಲುಕು ಹಾಕಿದ್ದು, ರವಿಚಂದ್ರನ್ ಅಶ್ವಿನ್ ಹಾಗೂ ತಾವು ಒಂದೇ ಶಾಲೆಗೆ ಹೋಗುತ್ತಿದ್ದಿದ್ದಾಗಿ ಹಾಗೂ ಮದುವೆಗೂ ಮುನ್ನ ನಮ್ಮಿಬ್ಬರ ಪರಿಚಯವಿತ್ತು ಎಂದು ಅಶ್ವಿನ್ ಪತ್ನಿ ಹೇಳಿದ್ದಾರೆ.
ಶಾಲಾ ದಿನಗಳಿಂದ ಹಿಡಿದು ವಯಸ್ಕರಾಗುವವರೆಗೂ ನಾವು ಜತೆಯಾಗಿಯೇ ಬೆಳೆದೆವು. ನಾನೊಂದು ಇವೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಅವರಿಗೆ ನನ್ನ ಮೇಲೆ ಸಿಕ್ಕಾಪಟ್ಟೆ ಕ್ರಶ್ ಇತ್ತು. ಇದು ಇಡೀ ಶಾಲೆಗೆ ಗೊತ್ತಿತ್ತು. ಆಮೇಲೆ ಅವರು ಕ್ರಿಕೆಟ್ ಕನಸು ನನಸಾಗಿಸಿಕೊಳ್ಳಲು ಬೇರೆಡೆ ತೆರಳಿದರು. ಆದರೆ ನಾವಿಬ್ಬರು ಹುಟ್ಟುಹಬ್ಬ, ಇನ್ನಿತರ ಕಾರ್ಯಕ್ರಮದಲ್ಲಿ ಸಂಪರ್ಕದಲ್ಲಿದ್ದೆವು.
ಇನ್ನು ನಾನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಕೌಂಟ್ ನಿರ್ವಹಿಸುವಾಗ ಮತ್ತೆ ಅವರು ನನ್ನನ್ನು ಭೇಟಿಯಾದರು. ನಾವಿಬ್ಬರು 7ನೇ ತರಗತಿಯಿದ್ದಾಗಲೇ ಚಿರಪರಿಚಿತರು ಎಂದು ಪ್ರೀತಿ ಅಶ್ವಿನ್ ಹೇಳಿದ್ದಾರೆ.
ಒಮ್ಮೆ ಅವರು ನನ್ನನ್ನು ನೇರವಾಗಿ ಕ್ರಿಕೆಟ್ ಗ್ರೌಂಡ್‌ಗೆ ಕರೆದುಕೊಂಡು ಹೋದರು. ನಾನು ನಿನ್ನನ್ನು ಜೀವನ ಪರ್ಯಾಂತ ಇಷ್ಟಪಡಲು ಬಯಸುತ್ತೇನೆ. ನಮ್ಮಿಬ್ಬರ ಪರಿಚಯವಾಗಿ 10 ವರ್ಷಗಳಾದರೂ ನಮ್ಮಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಪ್ರೇಮ ನಿವೇದನೆ ಮಾಡಿದರು ಎಂದು ಪ್ರೀತಿ ಅಶ್ವಿನ್ ಹೇಳಿದ್ದಾರೆ.
ರವಿಚಂದ್ರನ್ ಅಶ್ವಿನ್, ನವೆಂಬರ್ 13, 2011ರಂದು ತಮ್ಮ ಬಾಲ್ಯದ ಗೆಳತಿ ಪ್ರೀತಿ ನಾರಾಯಣನ್ ಅವರನ್ನು ವಿವಾಹವಾಗಿದ್ದರು. ಅವರಿಗೆ ಈಗ ಅಖಿರಾ ಹಾಗೂ ಆಧ್ಯಾ ಎನ್ನು ಇಬ್ಬರು ಮಕ್ಕಳಿದ್ದಾರೆ.