ಐಪಿಎಲ್‌ನಲ್ಲಿ ಮತ್ತೆ ಚಾನ್ಸ್ ಸಿಕ್ಕರೆ ಚೆನ್ನಾಗಿ ಆಡ್ತೇನೆಂದ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ..!
ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರ್ಜರಿ ಸಿದ್ದತೆಗಳು ಆರಂಭವಾಗಿವೆ. ಫೆಬ್ರವರಿ 18ನೇ ತಾರೀಕಿನಂದು ಮಿನಿ ಆಟಗಾರರ ಹರಾಜು ಕೂಡಾ ನಡೆಯಲಿದ್ದು, ಯಾವೆಲ್ಲಾ ಆಟಗಾರರು ಎಷ್ಟು ಮೊತ್ತಕ್ಕೆ ಹರಾಜಾಗಬಹುದು ಎನ್ನುವ ಕುತೂಹಲ ಜೋರಾಗಿದೆ.
ಹೀಗಿರುವಾಗಲೇ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಇದೀಗ ಹರಾಜಿನಲ್ಲಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುವ ಮುನ್ಸೂಚನೆ ನೀಡಿದ್ದಾರೆ.
ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಇತ್ತೀಚೆಗಷ್ಟೇ ಮುಕ್ತಾಯವಾದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಭಾರತ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
33 ವರ್ಷದ ಸೌರಾಷ್ಟ್ರ ಮೂಲದ ಬ್ಯಾಟ್ಸ್‌ಮನ್ ಪೂಜಾರ ಮುಂಬರುವ ಆಟಗಾರರ ಹರಾಜಿನಲ್ಲಿ ತಮ್ಮ ಹೆಸರನ್ನು ಮತ್ತೊಮ್ಮೆ ನೋಂದಾಯಿಸಲು ಮುಂದಾಗಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಹರಾಜಿನಲ್ಲಿ ಪೂಜಾರ ಹೆಸರು ನೋಂದಾಯಿಸಿದ್ದರೂ ಸಹಾ ಯಾವುದೇ ಫ್ರಾಂಚೈಸಿ ಪೂಜಾರ ಅವರನ್ನು ಖರೀದಿಸಲು ಮನಸ್ಸು ಮಾಡಿಲ್ಲ.
ಐಪಿಎಲ್‌ನಲ್ಲಿ ನಾನು ಮತ್ತೊಮ್ಮೆ ಆಡುವ ಆಸೆ ಇದೆ. ನನಗೆ ಐಪಿಎಲ್ ಆಡುವ ಅವಕಾಶ ಸಿಕ್ಕರೆ, ಅಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಪೂಜಾರ ಹೇಳಿದ್ದಾರೆ.
ಇದುವರೆಗೂ ಒಟ್ಟು 30 ಐಪಿಎಲ್ ಪಂದ್ಯಗಳನ್ನಾಡಿರುವ ಚೇತೇಶ್ವರ್ ಪೂಜಾರ 20.53ರ ಸರಾಸರಿಯಲ್ಲಿ 99.74ರ ಸ್ಟ್ರೈಕ್‌ರೇಟ್‌ನಲ್ಲಿ 390 ರನ್ ಬಾರಿಸಿದ್ದಾರೆ.
ಚೇತೇಶ್ವರ್ ಪೂಜಾರ 2010ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಮೊದಲ ಐಪಿಎಲ್ ಪಂದ್ಯವನ್ನಾಡಿದ್ದರು. ಅದಾದ ಬಳಿಕ 2011ರಿಂದ 2013ರ ಅವಧಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು.
ಇನ್ನು 2014ರಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಕೂಡಿಕೊಂಡಿದ್ದರು. ಇದಾದ ಬಳಿಕ ಯಾವ ಫ್ರಾಂಚೈಸಿಯೂ ಪೂಜಾರ ಅವರನ್ನು ಖರೀದಿಸಲು ಮನಸು ಮಾಡಲಿಲ್ಲ.
ಟೆಸ್ಟ್ ಕ್ರಿಕೆಟ್‌ನಲ್ಲಿ ಚೇತೇಶ್ವರ್ ಪೂಜಾರ 81 ಟೆಸ್ಟ್ ಪಂದ್ಯಗಳನ್ನಾಡಿ 47.74ರ ಸರಾಸರಿಯಲ್ಲಿ 6,111 ರನ್ ಬಾರಿಸಿದ್ದು, ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ.
ಮುಂಬರುವ ಆಟಗಾರರ ಹರಾಜಿನಲ್ಲಾದರೂ ಚೇತೇಶ್ವರ್ ಪೂಜಾರ ಅವರನ್ನು ಯಾವುದಾದರೂ ಐಪಿಎಲ್ ಫ್ರಾಂಚೈಸಿ ಖರೀದಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
14ನೇ ಆವೃತ್ತಿಯ ಐಫಿಎಲ್ ಆಟಗಾರರ ಹರಾಜು ಫೆಬ್ರವರಿ 18ರಂದು ನಡೆಯಲಿದ್ದು, ಈ ಬಾರಿ ಚೆನ್ನೈ ಹರಾಜಿಗೆ ಆತಿಥ್ಯವನ್ನು ವಹಿಸಿದೆ