ಐರ್ಲೆಂಡ್ ಎದುರಿನ ಎರಡನೇ T20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಮೇಜರ್ ಚೇಂಜ್..? ಸಂಭಾವ್ಯ ತಂಡ ಇಲ್ಲಿದೆ
ಡಬ್ಲಿನ್: ಭಾರತ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಎರಡನೇ ಟಿ20 ಪಂದ್ಯವು ಇಂದು ಸಂಜೆ 7.30ರಿಂದ ಆರಂಭವಾಗಲಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದು ಬೀಗಿರುವ ಜಸ್ಪ್ರೀತ್ ಬುಮ್ರಾ ನೇತೃತ್ವದ ಟೀಂ ಇಂಡಿಯಾ, ಎರಡನೇ ಟಿ20 ಪಂದ್ಯದಲ್ಲಿ ಒಂದು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಎರಡನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ ನೋಡಿ:
1. ಯಶಸ್ವಿ ಜೈಸ್ವಾಲ್:
ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಜೈಸ್ವಾಲ್, ಮೊದಲ ಪಂದ್ಯದಲ್ಲಿ 23 ಎಸೆತಗಳಲ್ಲಿ 24 ರನ್ ಸಿಡಿಸಿದ್ದರು. ಎರಡನೇ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಲು ಎಡಗೈ ಬ್ಯಾಟರ್ ಎದುರು ನೋಡುತ್ತಿದ್ದಾರೆ.
2. ಋತುರಾಜ್ ಗಾಯಕ್ವಾಡ್:
ಚೆನ್ನೈ ಸೂಪರ್ ಕಿಂಗ್ಸ್ ಪರ ಮಿಂಚಿ, ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿರುವ ಗಾಯಕ್ವಾಡ್ ಮೊದಲ ಪಂದ್ಯದಲ್ಲಿ ಅಜೇಯ 19 ರನ್ ಸಿಡಿಸಿದ್ದರು. ಎರಡನೇ ಪಂದ್ಯದಲ್ಲೂ ಗಾಯಕ್ವಾಡ್ ಜವಾಬ್ದಾರಿಯುತ ಆಟವಾಡಲು ಎದುರು ನೋಡುತ್ತಿದ್ದಾರೆ.
3. ತಿಲಕ್ ವರ್ಮಾ:
ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಮಿಂಚಿದ್ದ ತಿಲಕ್ ವರ್ಮಾ, ಐರ್ಲೆಂಡ್ ಎದುರು ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದರು. ಇಂದು ತಿಲಕ್ ಐರ್ಲೆಂಡ್ ನೆಲದಲ್ಲಿ ರನ್ ಖಾತೆ ತೆರೆಯಲು ಸಜ್ಜಾಗಿದ್ದಾರೆ.
4. ಸಂಜು ಸ್ಯಾಮ್ಸನ್:
ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ಎರಡನೇ ಟಿ20 ಪಂದ್ಯದಲ್ಲಿ ಅಜೇಯ 1ರನ್ ಗಳಿಸಿದ್ದರು. ಇದೀಗ ಎರಡನೇ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕುವ ಕನಸು ಕಾಣುತ್ತಿದ್ದಾರೆ ಕೇರಳ ಮೂಲದ ಕ್ರಿಕೆಟಿಗ.
5. ರಿಂಕು ಸಿಂಗ್:
2023ರ ಐಪಿಎಲ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿ ಮಿಂಚಿದ್ದ ಎಡಗೈ ಬ್ಯಾಟರ್ ರಿಂಕು, ಐರ್ಲೆಂಡ್ ಎದುರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ರಿಂಕುಗೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ.
6. ಶಿವಂ ದುಬೆ:
30 ವರ್ಷದ ನೀಳಕಾಯದ ಆಲ್ರೌಂಡರ್ ಶಿವಂ ದುಬೆಗೂ ಕೂಡಾ ಬ್ಯಾಟಿಂಗ್ ಮಾಡಲು ಮೊದಲ ಪಂದ್ಯದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇನ್ನು ಬೌಲಿಂಗ್‌ನಲ್ಲಿ ಕೇವಲ ಒಂದು ಓವರ್ ಮಾಡಿದ್ದರು. ಎರಡನೇ ಪಂದ್ಯದಲ್ಲಿ ದುಬೆ ಮಿಂಚಲು ಎದುರು ನೋಡುತ್ತಿದ್ದಾರೆ.
7. ವಾಷಿಂಗ್ಟನ್ ಸುಂದರ್:
ತಮಿಳುನಾಡು ಮೂಲದ 23 ವರ್ಷದ ಆಲ್ರೌಂಡರ್ ಸುಂದರ್, ಮೊದಲ ಟಿ20 ಪಂದ್ಯದಲ್ಲಿ 3 ಓವರ್ ಬೌಲಿಂಗ್ ಮಾಡಿ ಕೇವಲ 19 ರನ್ ನೀಡಿದ್ದರು. ಆದರೆ ವಿಕೆಟ್ ಕಬಳಿಸಲು ಯಶಸ್ವಿಯಾಗಿರಲಿಲ್ಲ. ಇಂದು ಸುಂದರ್‌ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.
8. ಪ್ರಸಿದ್ಧ್ ಕೃಷ್ಣ:
ಕರ್ನಾಟಕದ ನೀಳಕಾಯದ ವೇಗಿ ಪ್ರಸಿದ್ದ್ ಟಿ20 ಪಾದಾರ್ಪಣೆ ಪಂದ್ಯದಲ್ಲೇ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಮತ್ತೊಮ್ಮೆ ಬುಮ್ರಾ ಜತೆಗೂಡಿ ಮಾರಕ ದಾಳಿ ನಡೆಸಲು ಪ್ರಸಿದ್ಧ್ ಕೃಷ್ಣ ಎದುರು ನೋಡುತ್ತಿದ್ದಾರೆ.
9. ರವಿ ಬಿಷ್ಣೋಯ್:
22 ವರ್ಷದ ಬಲಗೈ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯ್, ಐರ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲಿ 23 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಮತ್ತೊಮ್ಮೆ ರವಿ ಬಿಷ್ಣೋಯ್ ಮಾರಕ ದಾಳಿ ನಡೆಸಲು ರಣತಂತ್ರ ಹೆಣೆಯುತ್ತಿದ್ದಾರೆ.
10. ಮುಕೇಶ್ ಕುಮಾರ್:
ಮೊದಲ ಟಿ20 ಪಂದ್ಯದಲ್ಲಿ ಎಡಗೈ ವೇಗಿ ಆರ್ಶದೀಪ್ ಸಿಂಗ್ 4 ಓವರ್ ಬೌಲಿಂಗ್ ಮಾಡಿ 35 ರನ್ ಬಿಟ್ಟುಕೊಟ್ಟಿದ್ದರು. ಹೀಗಾಗಿ ಆರ್ಶದೀಪ್‌ಗೆ ವಿಶ್ರಾಂತಿ ನೀಡಿ ಮುಕೇಶ್ ಕುಮಾರ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ದೊರೆಯುವ ಸಾಧ್ಯತೆಯಿದೆ.
11.ಜಸ್ಪ್ರೀತ್ ಬುಮ್ರಾ:
ಟೀಂ ಇಂಡಿಯಾ ನಾಯಕರಾಗಿ, ಮೊದಲ ಪಂದ್ಯದಲ್ಲೇ 2 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ್ದ ಬುಮ್ರಾ, ತಮ್ಮ ಲಯವನ್ನು ಎರಡನೇ ಟಿ20 ಪಂದ್ಯದಲ್ಲೂ ಮುಂದುವರೆಸಿಕೊಂಡು ಹೋಗಲು ಸಜ್ಜಾಗಿದ್ದಾರೆ.