ಟಿ20 ವಿಶ್ವಕಪ್: ಇಂಗ್ಲೆಂಡ್ ಮೇಲೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ರೆಡಿ; ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಗಯಾನ: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಮಾಜಿ ಚಾಂಪಿಯನ್ ಭಾರತ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಟೀಂ ಇಂಡಿಯಾ ಪಾಲಿಗೆ ಸೇಡಿನ ಕದನ ಎನಿಸಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲಿ ಹಾಗೂ ಸೂಪರ್ 8 ಹಂತದಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ಟೀಂ ಇಂಡಿಯಾ, ಇಂದು ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಕಳೆದೊಂದು ದಶಕದಿಂದಲೂ ಐಸಿಸಿ ಟ್ರೋಫಿ ಬರ ಎದುರಿಸುತ್ತಾ ಬಂದಿರುವ ಟೀಂ ಇಂಡಿಯಾ, ಈ ಬಾರಿ ಶತಾಯಗತಾಯ ಕಪ್ ಗೆದ್ದೇ ತೀರಬೇಕೆನ್ನುವ ಛಲದೊಂದಿಗೆ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದೆ.
ಅದರಲ್ಲೂ ಈ ಸೆಮಿಫೈನಲ್ ಪಂದ್ಯವು ಟೀಂ ಇಂಡಿಯಾ ಪಾಲಿಗೆ ಕಳೆದ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಒದಗಿಬಂದ ಸುವರ್ಣಾವಕಾಶ ಎನಿಸಿದೆ.
ಯಾಕೆಂದರೆ 2022ರ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿಯೂ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಅಡಿಲೇಡ್‌ನಲ್ಲಿ ನಡೆದಿದ್ದು, ಆ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎದುರು ಇಂಗ್ಲೆಂಡ್ 10 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು.
ಮೇಲ್ನೋಟಕ್ಕೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್‌ಗಿಂತ ಬಲಿಷ್ಠವಾಗಿ ಗುರುತಿಸಿಕೊಂಡಿದ್ದು, ಹಾಲಿ ಚಾಂಪಿಯನ್‌ಗೆ ಸೋಲಿನ ರಿವೇಂಜ್ ತೀರಿಸಿಕೊಳ್ಳಲು ಎದುರು ನೋಡುತ್ತಿದೆ.
ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆ ತಂಡದ ತಲೆನೋವು ಹೆಚ್ಚುವಂತೆ ಮಾಡಿದೆ. ಆದರೆ ರೋಹಿತ್ ಶರ್ಮಾ ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದು, ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.
ಇದರ ಜತೆಗೆ ಟೀಂ ಇಂಡಿಯಾ ವೇಗಿಗಳಾದ ಆರ್ಶದೀಪ್ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ಮಾರಕ ದಾಳಿ ನಡೆಸುತ್ತಿದ್ದು, ಇಂದು ಇಂಗ್ಲೆಂಡ್ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಲು ರೆಡಿಯಾಗಿದ್ದಾರೆ.
ಇನ್ನು ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಸೂಪರ್ 8 ಹಂತದಲ್ಲಿ ದಕ್ಷಿಣ ಆಫ್ರಿಕಾ ಎದುರು ಮುಗ್ಗರಿಸಿ, ಸೂಪರ್ 8 ಹಂತದಲ್ಲೇ ಹೊರಬೀಳುವ ಭೀತಿಗೆ ಸಿಲುಕಿತ್ತು. ಹೀಗಿದ್ದು, ಆ ಬಳಿಕ ಎಚ್ಚೆತ್ತುಕೊಂಡು ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿದೆ.