ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ ಟೀಂ ಇಂಡಿಯಾ ಆಲ್ರೌಂಡರ್..!
ಬೆಂಗಳೂರು: ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪರ ವೈಯುಕ್ತಿಕ ಶ್ರೇಷ್ಠ ಬೌಲಿಂಗ್ ಪ್ರದರ್ಶನದ ದಾಖಲೆ ಹೊಂದಿರುವ ಟೀಂ ಇಂಡಿಯಾ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಅಂತಾರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಪುತ್ರ ಸ್ಟುವರ್ಟ್ ಬಿನ್ನಿ ದೇಶಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಭಾರತ ಪರ ಮೂರು ಮಾದರಿಯ ಕ್ರಿಕೆಟ್ ಪಂದ್ಯವನ್ನಾಡಿದ್ದ ಬಿನ್ನ ಕ್ರಿಕೆಟ್ ವೃತ್ತಿ ಬದುಕಿಗೆ ತೆರೆ ಬಿದ್ದಿದೆ. ಸ್ಟುವರ್ಟ್ ಬಿನ್ನಿ ಕ್ರಿಕೆಟ್ ವೃತ್ತಿಜೀವನದ ಒಂದು ಝಲಕ್ ಇಲ್ಲಿದೆ ನೋಡಿ.
ಕರ್ನಾಟಕ ಮೂಲದ ಟೀಂ ಇಂಡಿಯಾ ಆಲ್ರೌಂಡರ್ ಸ್ಟುವರ್ಟ್ ಬಿನ್ನ ಅಂತರರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಭಾರತ ಪರ ಸ್ಟುವರ್ಟ್ ಬಿನ್ನಿ 6 ಟೆಸ್ಟ್, 14 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಿ ಕ್ರಮವಾಗಿ 194, 230 ಹಾಗೂ 29 ರನ್ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ 24 ವಿಕೆಟ್ ಕಬಳಿಸಿದ್ದಾರೆ.
37 ವರ್ಷದ ಬಿನ್ನಿ ಕರ್ನಾಟಕ, ನಾಗಾಲ್ಯಾಂಡ್ ಹಾಗೂ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2016ರಲ್ಲಿ ಸ್ಟುವರ್ಟ್ ಬಿನ್ನಿ ಟೀಂ ಇಂಡಿಯಾ ಜೆರ್ಸಿ ತೊಟ್ಟು ಮೈದಾನಕ್ಕೆ ಇಳಿದಿದ್ದರು. ಇದೀಗ ದಿಢೀರ್ ಎನ್ನುವಂತೆ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ.
2014ರ ಜೂನ್‌ನಲ್ಲಿ ಢಾಕಾದಲ್ಲಿ ನಡೆದ ಬಾಂಗ್ಲಾದೇಶ ವಿರುದ್ದದ ಏಕದಿನ ಪಂದ್ಯದಲ್ಲಿ ಸ್ಟುವರ್ಟ್ ಬಿನ್ನಿ ಕೇವಲ 4 ರನ್ ನೀಡಿ 6 ವಿಕೆಟ್ ಕಬಳಿಸುವ ಮೂಲಕ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ್ದರು. ಇಂದಿಗೂ ಏಕದಿನ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದ ಭಾರತೀಯ ಬೌಲರ್ ಎನ್ನುವ ದಾಖಲೆ ಸ್ಟುವರ್ಟ್ ಬಿನ್ನಿ ಹೆಸರಿನಲ್ಲಿದೆ.
ನಾನು ಪ್ರಥಮ ದರ್ಜೆ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದೇನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನನ್ನ ದೇಶವನ್ನು ಪ್ರತಿನಿಧಿಸಿದ್ದು ನನಗೆ ಹೆಚ್ಚು ಖುಷಿ ಹಾಗೂ ಹೆಮ್ಮೆಯನ್ನು ತಂದುಕೊಟ್ಟಿದೆ ಎಂದು ಬಿನ್ನಿ ಹೇಳಿದ್ದಾರೆ. ಇದೇ ವೇಳೆ ಬಿಸಿಸಿಐ, ಕರ್ನಾಟಕ ತಂಡದ ಸಹ ಆಟಗಾರರಿಗೆ, ಐಪಿಎಲ್‌ನಲ್ಲಿ ಅವಕಾಶ ನೀಡಿದ ತಂಡಗಳಿಗೆ ಬಿನ್ನಿ ಕೃತಜ್ಞತೆ ಸಲ್ಲಿಸಿದ್ದಾರೆ
17 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಸ್ಟುವರ್ಟ್ ಬಿನ್ನಿ 95 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 34.25ರ ಸರಾಸರಿಯಲ್ಲಿ 4,796 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಸ್ಟುವರ್ಟ್ ಬಿನ್ನಿ 148 ವಿಕೆಟ್ ಕಬಳಿಸಿದ್ದಾರೆ.
2013-14, 2014-15ರ ಕರ್ನಾಟಕ ರಣಜಿ ಟ್ರೋಫಿ ಗೆಲುವಿನಲ್ಲಿ ಬಿನ್ನಿ ತನ್ನದೇ ಆದ ಪಾತ್ರ ನಿಭಾಯಿಸಿದ್ದರು. ಸ್ಟುವರ್ಟ್ ಬಿನ್ನಿ 100 ಲಿಸ್ಟ್ 'ಎ' ಪಂದ್ಯಗಳನ್ನಾಡಿದ್ದಾರೆ. ಇದಷ್ಟೇ ಅಲ್ಲದೇ 95 ಐಪಿಎಲ್ ಪಂದ್ಯಗಳು ಸೇರಿದಂತೆ 150 ಟಿ20 ಪಂದ್ಯಗಳನ್ನಾಡಿದ್ದಾರೆ.
ಐಪಿಎಲ್‌ನಲ್ಲಿ ಸ್ಟುವರ್ಟ್ ಬಿನ್ನ ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ 95 ಪಂದ್ಯಗಳನ್ನಾಡಿ 880 ರನ್ ಹಾಗೂ 22 ವಿಕೆಟ್ ಕಬಳಿಸಿದ್ದಾರೆ.
ಫ್ಲೋರಿಡಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದದ ಟಿ20 ಪಂದ್ಯದಲ್ಲಿ ಬಿನ್ನಿ ಒಂದೇ ಓವರ್‌ನಲ್ಲಿ 31 ರನ್ ನೀಡಿದ್ದರು. ಎವಿನ್ ಲೆವಿಸ್ ಬಿನ್ನಿ ಓವರ್‌ನಲ್ಲಿ 5 ಸಿಕ್ಸರ್ ಚಚ್ಚಿದ್ದರು. ಇದಾದ ಬಳಿಕ ಬಿನ್ನಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಮಸುಕಾಗತೊಡಗಿತು. ಇದೇ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟು ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ಭಾರತ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.