ಟಿ20 ವಿಶ್ವಕಪ್ ಫೈನಲ್‌ಗೆ ಬಂದು ಕಪ್ ಗೆಲ್ಲದ ನತದೃಷ್ಟ ತಂಡ ಇದೊಂದೇ...!
ಬೆಂಗಳೂರು: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಇದೀಗ ನಿರ್ಣಾಯಕ ಹಂತ ತಲುಪಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಒಂದು ತಂಡವನ್ನು ಹೊರತುಪಡಿಸಿ ಉಳಿದೆಲ್ಲಾ ಫೈನಲ್ ತಲುಪಿದ ತಂಡಗಳು ಟ್ರೋಫಿ ಜಯಿಸಿದೆ. ಅಷ್ಟಕ್ಕೂ ಫೈನಲ್ ಪ್ರವೇಶಿಸಿ ಟ್ರೋಫಿ ಗೆಲ್ಲದ ತಂಡ ಯಾವುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ 20 ತಂಡಗಳು ಪಾಲ್ಗೊಂಡಿದ್ದವು. ಈ ಪೈಕಿ ಸೂಪರ್ 8 ಹಂತದ ಪಂದ್ಯಾಟಗಳ ಅಂತ್ಯದ ವೇಳೆಗೆ 4 ತಂಡಗಳು ಪ್ರಶಸ್ತಿ ರೇಸ್‌ನಲ್ಲಿ ಉಳಿದುಕೊಂಡಿವೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್, ಮಾಜಿ ಚಾಂಪಿಯನ್ ಭಾರತ, ಹಾಗೂ ಚೊಚ್ಚಲ ಟ್ರೋಫಿ ಗೆಲ್ಲುವ ಕನವರಿಯಲ್ಲಿರುವ ದಕ್ಷಿಣ ಆಫ್ರಿಕಾ ಹಾಗೂ ಆಫ್ಘಾನಿಸ್ತಾನ ತಂಡಗಳು ಸದ್ಯ ಸೆಮಿಫೈನಲ್ ಕಾದಾಟಕ್ಕೆ ಸಜ್ಜಾಗಿವೆ.
2007ರಲ್ಲಿ ಆರಂಭವಾಗದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಇದುವರೆಗೂ 8 ಆವೃತ್ತಿಗಳು ಪೂರ್ಣಗೊಂಡಿವೆ. ಆರು ತಂಡಗಳು ಇದುವರೆಗೂ ಟಿ20 ಟ್ರೋಫಿಗೆ ಮುತ್ತಿಕ್ಕಿವೆ.
ಈ ಪೈಕಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ತಲಾ ಎರಡು ಬಾರಿ ಟಿ20 ವಿಶ್ವಕಪ್ ಜಯಿಸಿದ್ದರೇ, ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ತಲಾ ಒಮ್ಮೊಮ್ಮೆ ಚುಟುಕು ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿವೆ.
ಕಳೆದ ಎಂಟು ಸೀಸನ್ ಟಿ20 ವಿಶ್ವಕಪ್ ಟೂರ್ನಿಗಳ ಪೈಕಿ 7 ತಂಡಗಳು ಫೈನಲ್ ಪಂದ್ಯವನ್ನಾಡಿವೆ. ಈ ಪೈಕಿ 6 ತಂಡಗಳು ಚಾಂಪಿಯನ್ ಆಗಿದ್ದರೇ, ಒಂದು ತಂಡ ಮಾತ್ರ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.
ಹೌದು, ಫೈನಲ್ ಆಡಿಯು ಇದುವರೆಗೂ ಕಪ್ ಗೆಲ್ಲದ ನತದೃಷ್ಟ ತಂಡವೆಂದರೆ ಅದು ನ್ಯೂಜಿಲೆಂಡ್ ತಂಡವೊಂದೇ. 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಕಿವೀಸ್ ತಂಡವು ಆಸ್ಟ್ರೇಲಿಯಾ ಎದುರು ಮುಗ್ಗರಿಸಿ ರನ್ನರ್ ಅಪ್ ಸ್ಥಾನ ಪಡೆದಿತ್ತು.
ಇನ್ನು ಪ್ರಸಕ್ತ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಗ್ರೂಪ್ ಹಂತದಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವವಿಸಿದೆ.