RCB vs RR ಒನ್ ಸೈಡ್ ಮ್ಯಾಚ್ ಆಗುತ್ತೆ, ಇದೇ ತಂಡ ಗೆಲ್ಲುತ್ತೆ: ಎಲಿಮಿನೇಟರ್ ಪಂದ್ಯದ ಭವಿಷ್ಯ ನುಡಿದ ಸನ್ನಿ
ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಂದು ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಡಲಿವೆ. ಈ ಪಂದ್ಯದಲ್ಲಿ ಗೆಲುವು ಯಾರ ಪಾಲಾಗಲಿದೆ ಎನ್ನುವುದನ್ನು ಕ್ರಿಕೆಟಿಗ ದಿಗ್ಗಜ ಸುನಿಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ.
17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮಾಡು ಇಲ್ಲವೇ ಮಡಿ ಕದನಕ್ಕೆ ಸಜ್ಜಾಗಿದ್ದು, ಗೆಲ್ಲುವ ತಂಡ ಎರಡನೇ ಕ್ವಾಲಿಫೈಯರ್‌ಗೆ ಲಗ್ಗೆಯಿಟ್ಟರೆ, ಸೋಲುವ ತಂಡದ ಹೋರಾಟ ಅಂತ್ಯವಾಗಲಿದೆ.
ರಾಜಸ್ಥಾನ ರಾಯಲ್ಸ್ ಹಾಗೂ ಆರ್‌ಸಿಬಿ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಇಂದಿನ ಪಂದ್ಯ ಜಯಿಸಿದವರು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದ್ದಾರೆ.
ಒಂದು ಕಡೆ ರಾಜಸ್ಥಾನ ರಾಯಲ್ಸ್ ತಂಡವು ಕಳೆದ 5 ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ಕಂಡಿಲ್ಲ. 4 ಪಂದ್ಯದಲ್ಲಿ ಸೋಲುಂಡರೆ, ಕಳೆದ ಪಂದ್ಯ ಮಳೆಯಿಂದ ರದ್ದಾಯಿತು. ಇನ್ನೊಂದೆಡೆ ಆರ್‌ಸಿಬಿ ತಂಡವು ಸತತ 6 ಪಂದ್ಯ ಗೆದ್ದು ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ.
ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಇದೀಗ ಅಂಡರ್‌ಡಾಗ್ ಎನಿಸಿಕೊಂಡಿದ್ದರೆ, ಆರ್‌ಸಿಬಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಬದಲಾಗಿದೆ.
ನಾಕೌಟ್ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರಿಲ್ಲದೇ ರಾಜಸ್ಥಾನ ಕಣಕ್ಕಿಳಿಯುತ್ತಿದೆ. ಇದೀಗ ರಾಜಸ್ಥಾನ ತಂಡವು ಬ್ಯಾಟಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್(348), ಸಂಜು ಸ್ಯಾಮ್ಸನ್(504) ಹಾಗೂ ರಿಯಾನ್ ಪರಾಗ್(531) ಅವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ.
ಇನ್ನು ಇದೆಲ್ಲದರ ನಡುವೆ ಭಾರತ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್, ಇಂದು ನಡೆಯಲಿರುವ ಎಲಿಮಿನೇಟರ್ ಪಂದ್ಯವು ಒನ್ ಸೈಡೆಡ್ ಪಂದ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ ಕೆಲದಿನಗಳಲ್ಲಿ ಆಡಿದ ಆಟ ಅತ್ಯಮೋಘವಾದದ್ದು. ಅವರು ನಾವು ಬೌನ್ಸ್ ಬ್ಯಾಕ್ ಮಾಡಬಹುದು ಎನ್ನುವ ನಂಬಿಕೆಯನ್ನು ನಿಜ ಮಾಡಿದ್ದಾರೆ. ತಂಡದ ಪ್ರಮುಖ ಆಟಗಾರರಾದ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಇನ್ನಿತ್ತರ ಹಿರಿಯ ಆಟಗಾರರು ಉಳಿದ ಆಟಗಾರರಿಗೆ ಧೈರ್ಯ ತುಂಬಿದ್ದಾರೆ.
ಬೇರೆ ತಂಡಗಳಿಗೆ ಈ ಥರದ ಪರಿಸ್ಥಿತಿ ಎದುರಾಗಿದ್ದರೆ, ಖಂಡಿತಾ ಓಹ್ ನಾವೆಲ್ಲ ಕಳೆದುಕೊಂಡೆವು ಎಂದು ಕೈಹೊತ್ತು ಕೂರುತ್ತಿದ್ದರು ಎಂದು ಸುನಿಲ್ ಗವಾಸ್ಕರ್ ಆರ್‌ಸಿಬಿ ತಂಡದ ಕಮ್‌ಬ್ಯಾಕ್ ಅನ್ನು ಗುಣಗಾನ ಮಾಡಿದ್ದಾರೆ.
ಆರ್‌ಸಿಬಿ ತಂಡವು ಮೊದಲ 8 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಇದಾದ ಬಳಿಕ ಸತತ 6 ಪಂದ್ಯಗಳನ್ನು ಗೆದ್ದು ಪವಾಡ ಸದೃಶ ರೀತಿಯಲ್ಲಿ ಫಾಫ್ ಡು ಪ್ಲೆಸಿಸ್ ಪಡೆ ನಾಕೌಟ್‌ಗೆ ಲಗ್ಗೆಯಿಟ್ಟಿದೆ.
ರಾಜಸ್ಥಾನ ರಾಯಲ್ಸ್ ತಂಡವು ಕಳೆದ 5 ಪಂದ್ಯಗಳಲ್ಲಿ 4 ಪಂದ್ಯ ಸೋತಿದ್ದಾರೆ. ಕಳೆದ ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಸರಿಯಾಗಿ ಅವರಿಗೆ ಅಭ್ಯಾಸವೇ ಆಗಿಲ್ಲ. ಕಳೆದ 11 ದಿನಗಳಿಂದ ಅವರು ಪಂದ್ಯವನ್ನಾಡಿಲ್ಲ. ಹೀಗಾಗಿ ಎಲಿಮಿನೇಟರ್ ಪಂದ್ಯ ಕೂಡಾ ಏಕಪಕ್ಷೀಯವಾಗಿ ನಡೆಯುವ ಸಾಧ್ಯತೆಯಿದೆ ಎಂದು ಸನ್ನಿ ಅಭಿಪ್ರಾಯ ಪಟ್ಟಿದ್ದಾರೆ.
ಮೊದಲ ಕ್ವಾಲಿಫೈಯರ್ ಪಂದ್ಯದಂತೆ ನನಗ್ಯಾಕೋ ಎಲಿಮಿನೇಟರ್ ಪಂದ್ಯವು ಕೂಡಾ ಏಕಪಕ್ಷೀಯವಾಗಿ ಸಾಗುತ್ತದ್ದೆ ಎಂದು ಭಯವಾಗುತ್ತದೆ. ಈ ಪಂದ್ಯದಲ್ಲಿ ಖಂಡಿತ ರಾಜಸ್ಥಾನ ರಾಯಲ್ಸ್ ಎದುರು ಆರ್‌ಸಿಬಿ ಗೆಲುವು ಸಾಧಿಸಲಿದೆ. ಒಂದು ವೇಳೆ ಹೀಗಾಗದಿದ್ದರೇ ಖಂಡಿತ ನನಗೆ ಅದು ಆಶ್ಚರ್ಯವೆನಿಸಲಿದೆ ಎಂದು ಸನ್ನಿ ಹೇಳಿದ್ದಾರೆ.