Ind vs WI ಇಂದು ನಡೆಯಲಿರುವ 3ನೇ T20I ಪಂದ್ಯ ಆರಂಭದ ಸಮಯ ಕೂಡಾ ಬದಲು..!
ಬಾಸೆಟೆರೆ: ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯ ಪೈಕಿ ಮೊದಲೆರಡು ಪಂದ್ಯಗಳು ಮುಕ್ತಾಯವಾಗಿದ್ದು, ಇದೀಗ ಮೂರನೇ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಎರಡನೇ ಟಿ20 ಪಂದ್ಯ ಮುಕ್ತಾಯವಾಗಿ 24 ಗಂಟೆ ತುಂಬುವುದರೊಳಗಾಗಿ ಉಭಯ ತಂಡಗಳು ಮೂರನೇ ಟಿ20 ಪಂದ್ಯಕ್ಕೆ ಸಜ್ಜಾಗಿವೆ. ಆದರೆ ಮೂರನೇ ಪಂದ್ಯ ಕೂಡಾ ಈ ಹಿಂದೆ ನಿಗದಿಯಾಗಿದ್ದ ಸಮಯಕ್ಕಿಂತ ಕೊಂಚ ತಡವಾಗಿ ಆರಂಭವಾಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ...
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳು ಮುಕ್ತಾಯದ ವೇಳೆಗೆ ಉಭಯ ತಂಡಗಳು 1-1ರ ಸಮಬಲ ಸಾಧಿಸಿದ್ದು, ಮೂರನೇ ಪಂದ್ಯದ ಮೇಲೆ ಇದೀಗ ಎಲ್ಲರ ಚಿತ್ತ ನೆಟ್ಟಿದೆ.
ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 68 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದರೇ, ಎರಡನೇ ಟಿ20 ಪಂದ್ಯದಲ್ಲಿ ನಿಕೋಲಸ್ ಪೂರನ್ ನೇತೃತ್ವದ ವೆಸ್ಟ್ ಇಂಡೀಸ್ ತಂಡವು 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದ್ದು, ಮೂರನೇ ಪಂದ್ಯ ಸಾಕಷ್ಟು ಜಿದ್ದಾಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಇನ್ನು ಎರಡನೇ ಟಿ20 ಪಂದ್ಯವು ತಾಂತ್ರಿಕ ಅಡಚಣೆಯಿಂದಾಗಿ 8 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯವು 10 ಗಂಟೆಗೆ ಪಂದ್ಯ ಆರಂಭವಾಗುವುದಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ತಿಳಿಸಿತ್ತು. ಭಾರತ ಕ್ರಿಕೆಟ್ ತಂಡದ ಕಿಟ್ ಬ್ಯಾಗ್‌ಗಳು ಮೈದಾನಕ್ಕೆ ಬರುವುದು ತಡವಾಗಿದ್ದರಿಂದ ಪಂದ್ಯದ ಆರಂಭಿಕ ಸಮಯವನ್ನು ಬದಲಿಸಲು ತೀರ್ಮಾನಿಸಲಾಗಿತ್ತು.
ಹೀಗಾಗಿ 10 ಗಂಟೆಗೆ ಪಂದ್ಯ ಆರಂಭವಾಗಬಹುದು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಕಿಟ್‌ಗಳು ಭಾರತೀಯ ಕಾಲಮಾನ 10 ಗಂಟೆಯಾದರೂ ಮೈದಾನ ತಲುಪದ ಕಾರಣ ರಾತ್ರಿ 11 ಗಂಟೆಗೆ(ಭಾರತೀಯ ಕಾಲಮಾನ) ಎರಡನೇ ಟಿ20 ಪಂದ್ಯವು ಆರಂಭವಾಗಿತ್ತು.
ಇದೀಗ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಟಿ20 ಪಂದ್ಯ ಮುಕ್ತಾಯವಾಗಿ ಕೆಲವೇ ಗಂಟೆಗಳ ಅಂತರದಲ್ಲಿ ಮೂರನೇ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿವೆ. ಮೂರನೇ ಟಿ20 ಪಂದ್ಯ ಕೂಡಾ ಭಾರತೀಯ ಕಾಲಮಾನ 8 ಗಂಟೆಯಿಂದ ಆರಂಭವಾಗಬೇಕಿತ್ತು. ಆದರೆ ಇದೀಗ ಮೂರನೇ ಟಿ20 ಪಂದ್ಯದ ಆರಂಭಿಕ ಸಮಯ ಕೂಡಾ ಬದಲಾಗಿದೆ.
ಹೌದು, ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ20 ಪಂದ್ಯವು 1.5 ಗಂಟೆ ತಡವಾಗಿ ಆರಂಭವಾಗಲಿದೆ. ಅಂದರೆ ಇಂದಿನ ಮೂರನೇ ಟಿ20 ಪಂದ್ಯವು ಸಂಜೆ 8 ಗಂಟೆಯ ಬದಲಿಗೆ 9.30ಕ್ಕೆ ಆರಂಭವಾಗಲಿದೆ. ಎರಡನೇ ಟಿ20 ಪಂದ್ಯವು ಕೊಂಚ ತಡವಾಗಿ ಮುಗಿದಿದ್ದರಿಂದ ಉಭಯ ತಂಡಗಳಿಗೂ ಕೊಂಚ ವಿಶ್ರಾಂತಿ ಸಿಗಲಿ ಎನ್ನುವ ಉದ್ದೇಶದಿಂದ ಈ ತೀರ್ಮಾನವನ್ನು ವಿಂಡೀಸ್ ಮಂಡಳಿ ತೆಗೆದುಕೊಂಡಿದೆ.