Quinton de Kock Retires: ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಹೇಳಿದ ಡಿ ಕಾಕ್!
ಸೆಂಚೂರಿಯನ್: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಮುಕ್ತಾಯವಾಗುತ್ತಿದ್ದಂತೆಯೇ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ (Quinton de Kock) ದಿಢೀರ್ ಎನ್ನುವಂತೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ (Retirement) ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕುಟುಂಬದೊಟ್ಟಿಗೆ ಹೆಚ್ಚು ಸಮಯಾವಕಾಶ ಕಳೆಯುವ ಉದ್ದೇಶದಿಂದ ಡಿ ಕಾಕ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಗುರುವಾರ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಭಾರತ ವಿರುದ್ಧ ಮೊದಲ ಟೆಸ್ಟ್ ಮುಕ್ತಾಯಗೊಂಡ ಬಳಿಕ ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಭಾರತ ವಿರುದ್ದ ಮೊದಲ ಇನಿಂಗ್ಸ್‌ನಲ್ಲಿ 100 ನಿಮಿಷಗಳ ಕ್ರೀಸ್‌ನಲ್ಲಿದ್ದು 34 ರನ್ ಗಳಿಸಿದ್ದ ಡಿ ಕಾಕ್, ಎರಡನೇ ಇನಿಂಗ್ಸ್‌ನಲ್ಲಿ 21 ರನ್‌ಗಳಿ ಮೊಹಮ್ಮದ್ ಸಿರಾಜ್ ಬೌಲಿಂಗ್ ಬೌಲ್ಡ್ ಆಗಿ ನಿರಾಸೆಯಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ದರು.
ಸದ್ಯದಲ್ಲೇ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕ್ವಿಂಟನ್ ಡಿ ಕಾಕ್, 2ನೇ ಟೆಸ್ಟ್‌ಗೆ ಅಲಭ್ಯರಾಗುವುದಾಗಿ ಸುದ್ದಿಯಾಗಿತ್ತು. ಆದರೆ ಅವರು ನಿವೃತ್ತಿ ಘೋಷಿಸಿರುವುದು ಅಚ್ಚರಿಗೆ ಕಾರಣವಾಗಿದೆ.
‘ನಾನು ಹಾಗೂ ನನ್ನ ಪತ್ನಿ ಸದ್ಯದಲ್ಲೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬೇಕು ಎನ್ನುವ ಉದ್ದೇಶದಿಂದ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ’ ಎಂದು ಡಿ ಕಾಕ್ ತಿಳಿಸಿದ್ದಾರೆ.
ರೆಡ್ ಬಾಲ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಕ್ವಿಂಟನ್ ಡಿ ಕಾಕ್ ತಾವು ದಕ್ಷಿಣ ಆಫ್ರಿಕಾ ಪರ ಏಕದಿನ, ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಡಿ ಕಾಕ್ ಇನ್ನು ಮುಂದೆ ಬಣ್ಣದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಾನು ಟೆಸ್ಟ್ ಕ್ರಿಕೆಟ್ ಹಾಗೂ ದೇಶವನ್ನು ಪ್ರತಿನಿಧಿಸಲು ಹೆಚ್ಚು ಇಷ್ಟ ಪಡುತ್ತೇನೆ. ಕ್ರಿಕೆಟ್ ವೃತ್ತಿಬದುಕಿನ ಎಲ್ಲಾ ಏರಿಳಿತಗಳನ್ನು ನಾನು ಎಂಜಾಯ್ ಮಾಡಿದ್ದೇನೆ. ಆದರೆ ನಾನೀಗ ಅದಕ್ಕಿಂತಲೂ ಮಿಗಿಲಾದ ಖುಷಿಯನ್ನು ಪಡೆಯುವತ್ತ ಮುಖ ಮಾಡಿದ್ದೇನೆ ಎಂದು ಡಿ ಕಾಕ್ ತಿಳಿಸಿದ್ದಾರೆ.
ಕ್ವಿಂಟನ್ ಡಿ ಕಾಕ್ ದಕ್ಷಿಣ ಆಫ್ರಿಕಾ ಪರ 54 ಟೆಸ್ಟ್ ಪಂದ್ಯಗಳನ್ನಾಡಿ 38.82ರ ಬ್ಯಾಟಿಂಗ್ ಸರಾಸರಿಯಲ್ಲಿ 6 ಶತಕ ಹಾಗೂ 22 ಅರ್ಧಶತಕ ಸಹಿತ ಒಟ್ಟು 3,300 ರನ್ ಗಳಿಸಿದ್ದಾರೆ.
29 ವರ್ಷದ ಕ್ವಿಂಟನ್ ಡಿ ಕಾಕ್ 2014ರಲ್ಲಿ ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಮಾರ್ಕ್ ಬೌಷರ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಲಿ(232) ಪಡೆದ ದಕ್ಷಿಣ ಆಫ್ರಿಕಾದ ಎರಡನೇ ವಿಕೆಟ್ ಕೀಪರ್ ಎನ್ನುವ ಕೀರ್ತಿಗೆ ಡಿ ಕಾಕ್ ಪಾತ್ರರಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.