ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್‌ನಲ್ಲೇ ಉಳೀತಾರಾ? ಇಲ್ವಾ? ಕೊನೆಗೂ ಹೊಸ ಅಪ್‌ಡೇಟ್ ಬಹಿರಂಗ
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಇದೀಗ 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಎಲ್ಲಾ ಫ್ರಾಂಚೈಸಿಗಳು ಸಿದ್ದತೆ ಆರಂಭಿಸಿವೆ. ಇದರ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಕುರಿತಂತೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ.

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಫ್ರಾಂಚೈಸಿಯು ಟ್ರೇಡ್ ಮಾಡುವ ಸಾಧ್ಯತೆಯಿದೆ ಎನ್ನುವಂತಹ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಈ ಕುರಿತಂತೆ ಈಗ ಹೊಸ ಅಪ್‌ಡೇಟ್ ಹೊರಬಿದ್ದಿದೆ.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್, ರಾಜಸ್ಥಾನ ರಾಯಲ್ಸ್ ಪರ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಇದರ ಜತೆಗೆ ಗಾಯದ ಸಮಸ್ಯೆ ಕೂಡಾ ಆವರನ್ನು ಇನ್ನಿಲ್ಲದಂತೆ ಕಾಡಿತ್ತು.
ಹೀಗಾಗಿ ಸಂಜು ಸ್ಯಾಮ್ಸನ್ ಅವರ ಬದಲಿಗೆ ಕೆಲವು ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ಆಲ್ರೌಂಡರ್ ರಿಯಾನ್ ಪರಾಗ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು.
ಇನ್ನು ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸಂಜು ಸ್ಯಾಮ್ಸನ್ ಅವರನ್ನು ಟ್ರೇಡಿಂಗ್ ಮೂಲಕ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಒಲವು ತೋರಿದೆ ಎಂದು ವರದಿಯಾಗಿತ್ತು.
ಇದೀಗ ಈ ಗಾಳಿ ಸುದ್ದಿಗೆ ಬ್ರೇಕ್ ಬಿದ್ದಿದ್ದು, ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಯಾವುದೇ ಆಟಗಾರರನ್ನು ಟ್ರೇಡ್ ಮಾಡದೇ ಇರಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.
ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದು, ಅವರು ತಂಡದ ನಾಯಕರಾಗಿಯೇ ಮುಂದುವರೆಯಲಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ.
2024ರ ಐಪಿಎಲ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಅದ್ಭುತ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್ ಪ್ರವೇಶಿಸಿತ್ತು. ಆದರೆ ಎರಡನೇ ಕ್ವಾಲಿಫೈಯರ್‌ನಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿತು.
ಇನ್ನು 2025ರ ಐಪಿಎಲ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿತ್ತು. ಇನ್ನು ಸಂಜು ಸ್ಯಾಮ್ಸನ್ 9 ಪಂದ್ಯಗಳನ್ನಾಡಿ 285 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.