ಕ್ರಿಕೆಟ್ ಕ್ರೀಡಾಂಗಣ ಶಿಲನ್ಯಾಸ ನೇರವೇರಿಸಿದ ಮೋದಿಗೆ ವಿಶೇಷ ಉಡುಗೊರೆ ನೀಡಿದ ತೆಂಡುಲ್ಕರ್!
ಢಮರುಗ, ತ್ರಿಶೂಲ ಸೇರಿದಂತೆ ಹಲವು ವಿಶೇಷತೆ ಇರುವ ವಿನ್ಯಾಸದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲನ್ಯಾಸ ನೆರವೇರಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ವಿಶೇಷ ಉಡುಗೊರೆ ನೀಡಿದ್ದಾರೆ.
ಭಾರತದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಅತ್ಯಾಧುನಿಕ ಸೌಲಭ್ಯ, ಅಂತಾರಾಷ್ಟ್ರೀಯ ದರ್ಜೆ ಹಾಗೂ ವಿಶೇಷ ವಿನ್ಯಾಸದ ಕ್ರೀಡಾಂಗಣ ಇದಾಗಿದೆ. ಈ ಕ್ರೀಡಾಂಗಣ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಿರ್ಮಾಣವಾಗುತ್ತಿದೆ.
ಈ ವಿಶೇಷ ವಿನ್ಯಾಸದ ಕ್ರಿಕೆಟ್ ಕ್ರೀಡಾಂಗಣದ ಶಿಲನ್ಯಾಸ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಾಡಿನಲ್ಲಿ ಈ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ.
ಶಿಲನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಶೇಷ ಉಡುಗೊರೆ ನೀಡಿದ್ದಾರೆ. ಮೋದಿಗೆ ಟೀಂ ಇಂಡಿಯಾ ಜರ್ಸಿಯನ್ನು ಉಡುಗೊರೆಯಾಗಿ ನೀಡಲಾಗಿದೆ.
ಮೋದಿಗೆ ಉಡುಗೊರೆ ನೀಡಿದ ಜರ್ಸಿ ಹಿಂಭಾಗದಲ್ಲಿ ನಮೋ ಎಂದು ಬರೆಯಲಾಗಿದೆ. ಈ ವಿಶೇಷ ಉಡುಗೊರೆ ಸ್ವೀಕರಿಸಿದ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ರವಿ ಶಾಸ್ತ್ರಿ, ಸುನಿಲ್ ಗವಾಸ್ಕರ್, ದಿಲೀಪ್ ವೆಂಗರ್ಕರ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ಈ ವಾರಣಾಸಿ ಕ್ರಿಕೆಟ್ ಕ್ರೀಡಾಂಗಣ ಶಿಲನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಾರಣಾಸಿ ಕ್ರೀಡಾಂಗಣದಲ್ಲಿ ಹಲವು ವಿಶೇಷತೆಗಳಿವೆ. ಪ್ರಮುಖವಾಗಿ ಇದರ ವಿನ್ಯಾಸ. ಶಿವನ ತ್ರಿಶೂಲ, ಶಿವನ ಡಮರುಗ, ಶಿವನ ತಲೆಯ ಮೇಲಿನ ಚಂದ್ರನ ಆಕೃತಿಯಲ್ಲಿ ಈ ಕ್ರೀಡಾಂಗಣ ವಿನ್ಯಾಸಮಾಡಲಾಗಿದೆ.
ವಾರಣಾಸಿ ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರ. ಕಾಶಿ ವಿಶ್ವನಾಥ ದೇವಸ್ಥಾನವಿರುವ ಈ ಮಣ್ಣಿನಲ್ಲಿ ಶಿವ ನೆಲೆಸಿದ್ದಾನೆ ಅನ್ನೋದು ನಂಬಿಕೆ. ಹೀಗಾಗಿ ಶಿವನ ತ್ರಿಶೂಲ, ಡಮರುಗ, ಚಂದ್ರನ ಆಕೃತಿ ವಿನ್ಯಾಸದಲ್ಲಿ ಈ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ.