T20 World Cup ಬಳಿಕ ಟೀಂ ಇಂಡಿಯಾ ಏಕದಿನ & ಟಿ20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್ ಬೈ..?
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೀಮಿತ ಓವರ್‌ಗಳ ಟೀಂ ಇಂಡಿಯಾ ನಾಯಕತ್ವದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ. ಭಾರತೀಯ ಕ್ರಿಕೆಟ್ ಪಾಳಯದಲ್ಲಿ ಈ ಸುದ್ದಿ ಹೊಸ ಸಂಚಲನವನ್ನೇ ಹುಟ್ಟುಹಾಕಿದೆ. ಅಷ್ಟಕ್ಕೂ ಟಿ20 ವಿಶ್ವಕಪ್ ಟೂರ್ನಿ ಕೆಲವೇ ದಿನಗಳು ಬಾಕಿ ಇರುವಾಗ ಇಂತಹದ್ದೊಂದು ಸುದ್ದಿ ಸಾಕಷ್ಟು ವೈರಲ್ ಆಗಿದೆ. ಈ ಸುದ್ದಿಯ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

ಮುಂಬರುವ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಭಾರತ ಸೀಮಿತ ಓವರ್‌ಗಳ ತಂಡದ ನಾಯಕತ್ವದಿಂದ ಕೆಳಗಿಳಿಯಲಿದ್ದು, ರೋಹಿತ್ ಶರ್ಮಾ ನಾಯಕತ್ವ ಪಟ್ಟ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಹೌದು, ವಿರಾಟ್ ಕೊಹ್ಲಿ ಸೀಮಿತ ಓವರ್‌ಗಳ ನಾಯಕತ್ವ ಟಿ20 ವಿಶ್ವಕಪ್ ಟೂರ್ನಿ ನಂತರ ಮುಕ್ತಾಯವಾಗಲಿದೆ, ಆದರೆ ಟೆಸ್ಟ್ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಮುಂದುವರೆಯಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವಿರಾಟ್ ಕೊಹ್ಲಿ ಬ್ಯಾಟಿಂಗ್‌ನತ್ತ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಈ ತೀರ್ಮಾನಕ್ಕೆ ಬಂದಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸ್ವತಃ ವಿರಾಟ್ ಕೊಹ್ಲಿಯೇ ಈ ತೀರ್ಮಾನಕ್ಕೆ ಬಂದಿದ್ದಾರೆಂದು ವರದಿಯಾಗಿದೆ. ಆದರೆ ಈ ಕುರಿತಂತೆ ಬಿಸಿಸಿಐ ಆಗಲಿ, ವಿರಾಟ್ ಕೊಹ್ಲಿಯಾಗಲೀ ಯಾವುದೇ ಪ್ರತಿಕ್ರಿಯೆಯನ್ನು ಇದುವರೆಗೂ ನೀಡಿಲ್ಲ
ವಿರಾಟ್ ಕೊಹ್ಲಿ ಟೀಂ ಇಂಡಿಯಾ ಪರ 65 ಟೆಸ್ಟ್ ಪಂದ್ಯಗಳನ್ನು ಮುನ್ನಡೆಸಿ 38 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಇನ್ನು 95 ಏಕದಿನ ಪಂದ್ಯಗಳಲ್ಲಿ ನಾಯಕರಾಗಿ 65 ಪಂದ್ಯಗಳಲ್ಲಿ ತಂಡಕ್ಕೆ ಜಯ ದಕ್ಕಿಸಿಕೊಟ್ಟಿದ್ದಾರೆ. 45 ಟಿ20 ಪಂದ್ಯಗಳ ಪೈಕಿ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 29ರಲ್ಲಿ ಗೆಲುವಿನ ನಗೆ ಬೀರಿದೆ.
2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಬಳಿಕ ಕೊಹ್ಲಿ ನಾಯಕರಾಗಿ ಆಯ್ಕೆಯಾಗಿದ್ದರು. ಇನ್ನು 2017ರಲ್ಲಿ ಕೊಹ್ಲಿ ಮೂರು ಮಾದರಿಯ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಹಲವು ಸ್ಮರಣೀಯ ಗೆಲುವುಗಳನ್ನು ದಾಖಲಿಸಿದೆ.
32 ವರ್ಷದ ವಿರಾಟ್ ಕೊಹ್ಲಿ ಸದ್ಯ ಟೀಂ ಇಂಡಿಯಾದ ಮೂರು ಮಾದರಿಯಲ್ಲೂ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಆದರೆ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿಯನ್ನು ಜಯಿಸಿಲ್ಲ ಎನ್ನುವ ಅಪವಾದವಿದೆ.
ಇನ್ನು ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ 10 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಮುನ್ನೆಡೆಸಿ 8 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಇನ್ನು ಭಾರತ ಪರ 19 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಹಿಟ್‌ಮ್ಯಾನ್ 15 ಬಾರಿ ಟೀಂ ಇಂಡಿಯಾ ಗೆಲುವಿನ ನಗೆ ಬೀರುವಂತೆ ಮಾಡಿದ್ದಾರೆ.
ಐಪಿಎಲ್‌ನಲ್ಲೂ ಯಶಸ್ವಿ ನಾಯಕನಾಗಿ ಹೊರಹೊಮ್ಮಿರುವ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.