ಭಾರತ ತಂಡ ಪ್ರತಿನಿಧಿಸಿರುವುದೇ ನನ್ನ ಭಾಗ್ಯ, ವಿದಾಯ ಘೋಷಿಸಿದ ಆರ್‌ಸಿಬಿ ಆಲ್ರೌಂಡರ್!
ಟೀಂ ಇಂಡಿಯಾ ಕ್ರಿಕೆಟಿಗ, ಆರ್‌ಸಿಬಿ ಆಲ್ರೌಂಡರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಆರ್‌ಸಿಬಿ, ಕೋಲ್ಕತಾ ನೈಟ್ ರೈಡರ್ಸ್ ಸೇರಿದಂತೆ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ ಕ್ರಿಕೆಟಿಗ ಇದೀಗ ವಿದಾಯ ಘೋಷಿಸಿದ್ದಾರೆ.
ಆಲ್ರೌಂಡರ್ ಕ್ರಿಕೆಟಿಗನಾಗಿ ಮಿಂಚಿ ಟೀಂ ಇಂಡಿಯಾ, ಐಪಿಎಲ್ ಟೂರ್ನಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಕ್ರಿಕೆಟಿಗ ಗುರುಕೀರತ್ ಸಿಂಗ್ ಮಾನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ರೌಂಡರ್ ಆಟಗಾರನಾಗಿ ಮಿಂಚಿದ ಗುರುಕೀರತ್ ಇದೀಗ ಇನ್‌ಸ್ಟಾಗ್ರಾಂ ಮೂಲಕ ತಮ್ಮ ವಿದಾಯ ಘೋಷಿಸಿದ್ದಾರೆ.
ಟೀಂ ಇಂಡಿಯಾ ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದೇ ನನಗೆ ಹೆಮ್ಮೆಯ ವಿಚಾರ. ನನ್ನ ಕ್ರಿಕೆಟ್ ಕರಿಯರ್‌ನಲ್ಲಿ ನಿರಂತರ ಪ್ರೋತ್ಸಾಹ ನೀಡಿದ ಪೋಷಕರು, ಕೋಚ್, ಪಂಜಾಬ್ ಕ್ರಿಕೆಟ್ ಸಂಸ್ಥೆ, ಬಿಸಿಸಿಐಗೆ ಕೃತಜ್ಞನಾಗಿದ್ದೇನೆ ಎಂದು ಮಾನ್ ಹೇಳಿದ್ದಾರೆ.
2016ರಲ್ಲಿ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಗುರುಕೀರತ್ ಸಿಂಗ್ ಕೇವಲ 3 ಪಂದ್ಯ ಮಾತ್ರ ಆಡಿದ್ದಾರೆ. ಈ ಮೂಲಕ 13 ರನ್ ಸಿಡಿಸಿದ್ದಾರೆ. ಇನ್ನು ವಿಕೆಟ್ ಕಬಳಿಸುವಲ್ಲಿ ವಿಫಲರಾಗಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ 41 ಪಂದ್ಯ ಆಡಿದ್ದಾರೆ. 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ಲಕ್ಷ ರೂಪಾಯಿ ನೀಡಿ ಮಾನ್ ಖರೀದಿಸಿತ್ತು. ಆದರೆ ಕೇವಲಲ 3 ಪಂದ್ಯದೊಂದಿಗೆ ಆರ್‌ಸಿಬಿ ಪಯಣ ಅಂತ್ಯಗೊಂಡಿತ್ತು.
2020ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ ಗುರುಕೀರತ್, ಬಳಿಕ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ. 2016ರಲ್ಲೇ ಟೀಂ ಇಂಡಿಯಾ ಪರ ಕೊನೆಯ ಏಕದಿನ ಪಂದ್ಯ ಆಡಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡದಲ್ಲೂ ಗುರುಕೀರತ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಐಪಿಎಲ್ ಟೂರ್ನಿಯಲ್ಲೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಗುರುಕೀರತ್ ವಿಫಲರಾಗಿದ್ದಾರೆ.