IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಆಡುವ ಹನ್ನೊಂದರ ಬಳಗ ಆಯ್ಕೆ ಮಾಡಿದ ಆರ್ ಅಶ್ವಿನ್..!
ಬೆಂಗಳೂರು: ಮುಂಬರುವ 16ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೊಸ ರಣತಂತ್ರದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಬಲಿಷ್ಠ ಆಡುವ ಹನ್ನೊಂದರ ಬಳಗವನ್ನು ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಯ್ಕೆ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
1. ಫಾಫ್ ಡು ಪ್ಲೆಸಿಸ್:
ಆರ್‌ಸಿಬಿ ತಂಡದ ನಾಯಕ. ಇತ್ತೀಚೆಗಷ್ಟೇ SA20 ಲೀಗ್ ಟೂರ್ನಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿರುವ ಫಾಫ್, ನಾಯಕನಾಗಿ ಮಾತ್ರವಲ್ಲದೇ ಆರಂಭಿಕನಾಗಿಯೂ ತಂಡಕ್ಕೆ ಉತ್ತಮ ಆರಂಭ ಒದಗಿಸಬೇಕಿದೆ.
2. ವಿರಾಟ್ ಕೊಹ್ಲಿ:
ಆರ್‌ಸಿಬಿ ತಂಡದ ಅತ್ಯಂತ ನಂಬಿಗಸ್ಥ ಬ್ಯಾಟರ್ ವಿರಾಟ್ ಕೊಹ್ಲಿ, ಸದ್ಯ ಭರ್ಜರಿಯಾಗಿಯೇ ಫಾರ್ಮ್‌ಗೆ ಮರಳಿದ್ದು, ಫಾಫ್ ಜತೆ ಆರಂಭಿಕನಾಗಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡಬೇಕಿದೆ.
3. ರಜತ್ ಪಾಟೀದಾರ್:
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯ ದ್ವಿತಿಯಾರ್ಧದಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ್ದ ಪಾಟೀದಾರ್ ಮೇಲೆ ತಂಡವು ಸಾಕಷ್ಟು ನಿರೀಕ್ಷೆಯಿಟ್ಟಿದೆ.
4. ಗ್ಲೆನ್ ಮ್ಯಾಕ್ಸ್‌ವೆಲ್:
ಆಸ್ಟ್ರೇಲಿಯಾ ಮೂಲದ ತಾರಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ಆರ್‌ಸಿಬಿ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಆಟವನ್ನು ಆಡಬೇಕಿದೆ. ಇನ್ನು ಅಗತ್ಯ ಸಂದರ್ಭದಲ್ಲಿ ಬೌಲಿಂಗ್‌ನಲ್ಲೂ ನೆರವು ನೀಡುವ ಕ್ಷಮತೆ ಮ್ಯಾಕ್ಸ್‌ವೆಲ್‌ಗಿದೆ.
5. ಶಹಬಾಜ್ ಅಹಮ್ಮದ್:
ಆರ್‌ಸಿಬಿ ತಂಡದ ಮತ್ತೋರ್ವ ತಾರಾ ಆಲ್ರೌಂಡರ್ ಶಹಬಾಜ್ ಅಹಮ್ಮದ್ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು.
6. ದಿನೇಶ್ ಕಾರ್ತಿಕ್:
ಆರ್‌ಸಿಬಿ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿರುವ ದಿನೇಶ್ ಕಾರ್ತಿಕ್, ಮ್ಯಾಚ್ ಫಿನಿಶರ್ ಆಗಿಯೂ ಸೈ ಎನಿಸಿಕೊಂಡಿದ್ದಾರೆ. ಡಿಕೆ ಆರನೇ ಕ್ರಮಾಂಕದಲ್ಲಿ ಮೈಚಳಿ ಬಿಟ್ಟು ಬ್ಯಾಟ್ ಬೀಸಬೇಕಿದೆ.
7. ಮಹಿಪಾಲ್ ಲೋಮ್ರರ್:
ಆರ್‌ಸಿಬಿ ತಂಡವು ಮತ್ತೋರ್ವ ಆಲ್ರೌಂಡರ್ ರೂಪದಲ್ಲಿ ಲೋಮ್ರರ್ ಅವರನ್ನು ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಲೋಮ್ರರ್ ಕೂಡಾ ಪಿಂಚ್ ಹಿಟ್ ಮೂಲಕ ತಂಡಕ್ಕೆ ಆಸರೆಯಾಗಬಲ್ಲರು.
8. ವನಿಂದು ಹಸರಂಗ:
ಲಂಕಾದ ಮಾಂತ್ರಿಕ ಸ್ಪಿನ್ನರ್ ವನಿಂದು ಹಸರಂಗ, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು. ಇದಷ್ಟೇ ಅಲ್ಲದೇ ಹಸರಂಗ ಬ್ಯಾಟಿಂಗ್‌ನಲ್ಲೂ ಆಸರೆಯಾಗಬಲ್ಲರು.
9. ಜೋಶ್ ಹೇಜಲ್‌ವುಡ್:
ಆಸ್ಟ್ರೇಲಿಯಾದ ಮಾರಕ ವೇಗಿ ಜೋಶ್ ಹೇಜಲ್‌ವುಡ್, ಆರ್‌ಸಿಬಿ ತಂಡದ ವೇಗದ ಬೌಲಿಂಗ್ ಸಾರಥ್ಯವನ್ನು ವಹಿಸಲಿದ್ದಾರೆ. ಜೋಶ್ ಪವರ್‌ಪ್ಲೇನಲ್ಲೇ ವಿಕೆಟ್ ಕಬಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
10. ಮೊಹಮ್ಮದ್ ಸಿರಾಜ್:
ಆರ್‌ಸಿಬಿ ತಂಡದ ಬೌಲಿಂಗ್ ಟ್ರಂಪ್ ಕಾರ್ಡ್ ಎನಿಸಿಕೊಂಡಿರುವ ಮೊಹಮ್ಮದ್ ಸಿರಾಜ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಸಿರಾಜ್, ಆರ್‌ಸಿಬಿಗೆ ಯಾವ ರೀತಿ ನೆರವಾಗಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
11. ಆಕಾಶ್ ದೀಪ್
ಬೆಂಗಾಲ್ ಮೂಲದ ಪ್ರತಿಭಾನ್ವಿತ ವೇಗದ ಬೌಲರ್ ಆಕಾಶ್ ದೀಪ್‌ಗೆ ಅಶ್ವಿನ್, ಆರ್‌ಸಿಬಿ ಆಡುವ ಹನ್ನೊಂದರ ಬಳಗದಲ್ಲಿ ಮಣೆ ಹಾಕಿದ್ದಾರೆ. ಹರ್ಷಲ್ ಪಟೇಲ್ ಅವರಂತಹ ತಾರಾ ಮಧ್ಯಮ ವೇಗಿಯನ್ನು ಕೈಬಿಟ್ಟು ಆಕಾಶ್ ದೀಪ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.