RCB ತಂಡದಲ್ಲಿ ಈ 5 ನಾಯಕರ ಕೆಳಗೆ IPL ಆಡಿದ್ದಾರೆ ವಿರಾಟ್ ಕೊಹ್ಲಿ..!
ಬೆಂಗಳೂರು: ಭಾರತ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಚೊಚ್ಚಲ ಐಪಿಎಲ್‌ನಿಂದಲೂ ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಕಳೆದ 16 ಐಪಿಎಲ್ ಸೀಸನ್‌ನಲ್ಲಿ ಒಂದೇ ತಂಡವನ್ನು ಪ್ರತಿನಿಧಿಸಿದ ಏಕೈಕ ಆಟಗಾರ ಎನ್ನುವ ಹೆಗ್ಗಳಿಕೆ ವಿರಾಟ್ ಕೊಹ್ಲಿ ಅವರಿಗಿದೆ. ಈ ಅವಧಿಯಲ್ಲಿ ವಿರಾಟ್ ಕೊಹ್ಲಿ ಈ 5 ನಾಯಕರ ಅಡಿಯಲ್ಲಿ ಐಪಿಎಲ್ ಆಡಿದ್ದಾರೆ.
1. ರಾಹುಲ್ ದ್ರಾವಿಡ್:
ವಿರಾಟ್ ಕೊಹ್ಲಿ ಮೊದಲ ಐಪಿಎಲ್ ಪಂದ್ಯವನ್ನಾಡಿದ್ದು, ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ನಾಯಕತ್ವದಡಿಯಲ್ಲಿ. 2008ರ ಚೊಚ್ಚಲ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ರಾಹುಲ್ ದ್ರಾವಿಡ್ ಮುನ್ನಡೆಸಿದ್ದರು.
ಚೊಚ್ಚಲ ಆವೃತ್ತಿಯಲ್ಲಿ ಆರ್‌ಸಿಬಿ 14 ಪಂದ್ಯಗಳನ್ನಾಡಿ ಕೇವಲ 4 ಪಂದ್ಯಗಳಲ್ಲಿ ಅಷ್ಟೇ ಗೆಲುವು ದಾಖಲಿಸಿತ್ತು. ಇನ್ನು ವಿರಾಟ್ ಕೊಹ್ಲಿ, ಚೊಚ್ಚಲ ಐಪಿಎಲ್‌ನಲ್ಲಿ 13 ಪಂದ್ಯಗಳಿಂದ 165 ರನ್ ಗಳಿಸಿದ್ದರು.
2. ಕೆವಿನ್ ಪೀಟರ್‌ಸನ್:
ಆರ್‌ಸಿಬಿ ತಂಡವು ಪದೇ ಪದೇ ನಾಯಕತ್ವ ಬದಲಿಸುತ್ತಲೇ ಬಂದಿದೆ. 2009ರಲ್ಲಿ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್‌ಸನ್‌ಗೆ ಆರ್‌ಸಿಬಿ ಫ್ರಾಂಚೈಸಿ ನಾಯಕತ್ವ ಪಟ್ಟ ಕಟ್ಟಿತು. ಆದರೆ ಪೀಟರ್‌ಸನ್ ಟೂರ್ನಿಯ ಅರ್ಧದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪೀಟರ್‌ಸನ್ ನಾಯಕತ್ವದಲ್ಲಿ ಆರ್‌ಸಿಬಿ ಆಡಿದ 6 ಪಂದ್ಯಗಳ ಪೈಕಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿತ್ತು. ಹೀಗಿದ್ದೂ ವಿರಾಟ್ ಕೊಹ್ಲಿ 2009ರ ಐಪಿಎಲ್‌ನಲ್ಲಿ 16 ಪಂದ್ಯಗಳನ್ನಾಡಿ 246 ರನ್ ಬಾರಿಸಿದ್ದರು.
3. ಅನಿಲ್ ಕುಂಬ್ಳೆ:
ಟೀಂ ಇಂಡಿಯಾ ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ, ಪೀಟರ್‌ಸನ್ ಅವರಿಂದ ನಾಯಕತ್ವ ವಹಿಸಿಕೊಂಡರು. ಕುಂಬ್ಳೆ ನಾಯಕತ್ವದಡಿ ಅಸಾಧಾರಣ ಪ್ರದರ್ಶನ ತೋರಿದ ಆರ್‌ಸಿಬಿ ತಂಡವು ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿತ್ತು.
2009ರ ಐಪಿಎಲ್ ಫೈನಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಎದುರು 6 ರನ್ ವಿರೋಚಿತ ಸೋಲು ಅನುಭವಿಸುವ ಮೂಲಕ ಚೊಚ್ಚಲ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತ್ತು. ಕುಂಬ್ಳೆ 2010ರ ಐಪಿಎಲ್ ಬಳಿಕ 2011ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಐಪಿಎಲ್‌ಗೆ ವಿದಾಯ ಹೇಳಿದರು..
ಹೀಗಾಗಿ 2011ರ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಎಲ್ಲಾ ಆಟಗಾರರನ್ನು ಕೈಬಿಟ್ಟು ಪ್ರತಿಭಾನ್ವಿತ ಕ್ರಿಕೆಟಿಗನಾಗಿದ್ದ ವಿರಾಟ್ ಕೊಹ್ಲಿಯನ್ನು ಮಾತ್ರ ರೀಟೈನ್ ಮಾಡಿಕೊಂಡಿತ್ತು.
4. ಡೇನಿಯಲ್ ವೆಟ್ಟೋರಿ:
ನ್ಯೂಜಿಲೆಂಡ್ ಮಾಜಿ ಆಲ್ರೌಂಡರ್ ಡೇನಿಯಲ್ ವೆಟ್ಟೋರಿಯನ್ನು 2011ರ ಐಪಿಎಲ್‌ನಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ನಾಯಕರನ್ನಾಗಿ ನೇಮಕ ಮಾಡಿಕೊಂಡಿತು. ಎರಡು ಆವೃತ್ತಿಗೆ ಅರ್‌ಸಿಬಿ ತಂಡದ ನಾಯಕರಾಗಿದ್ದ ವೆಟ್ಟೋರಿ ತಮ್ಮ ನಾಯಕತ್ವದಲ್ಲಿ 28 ಪಂದ್ಯಗಳಲ್ಲಿ 15 ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಇದಾದ ಬಳಿಕ ವೆಟ್ಟೋರಿ ಆಟಗಾರನಾಗಿ ವಿದಾಯ ಹೇಳಿದ ಬಳಿಕ, ಆರ್‌ಸಿಬಿ ತಂಡದ ಹೆಡ್ ಕೋಚ್ ಆಗಿ ನೇಮಕವಾದರು. ವೆಟ್ಟೋರಿ ನಾಯಕತ್ವದಡಿಯಲ್ಲೂ ವಿರಾಟ್ ಕೊಹ್ಲಿ ಅದ್ಭುತ ಆಟ ಪ್ರದರ್ಶಿಸಿದ್ದರು.
5. ಫಾಫ್ ಡು ಪ್ಲೆಸಿಸ್:
ವೆಟ್ಟೋರಿ ಬಳಿಕ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ನಾಯಕರಾಗಿದ್ದರು. ಇನ್ನು 2022ರ ಐಪಿಎಲ್‌ಗೂ ಮುನ್ನ ವಿರಾಟ್ ಕೊಹ್ಲಿ, ಆರ್‌ಸಿಬಿ ನಾಯಕ ಸ್ಥಾನದಿಂದ ಕೆಳಗಿಳಿದರು. ಹೀಗಾಗಿ ದಕ್ಷಿಣ ಆಫ್ರಿಕಾದ ಅನುಭವಿ ಕ್ರಿಕೆಟಿಗ ಫಾಫ್ ಡು ಪ್ಲೆಸಿಸ್ ಅವರನ್ನು ಆರ್‌ಸಿಬಿ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ.
2022ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವು ಪ್ಲೇ ಆಫ್ ಪ್ರವೇಶಿಸಿ ಮೂರನೇ ಸ್ಥಾನ ಪಡೆದಿತ್ತು. ಆದರೆ 2023ರ ಐಪಿಎಲ್‌ನಲ್ಲಿ ಅದೇ ಮ್ಯಾಜಿಕ್ ಮಾಡಲು ಬೆಂಗಳೂರಿಗೆ ಸಾಧ್ಯವಾಗಿಲ್ಲ. ಆರ್‌ಸಿಬಿ ತಂಡದಲ್ಲಿ ಫಾಫ್ ಹಾಗೂ ಕೊಹ್ಲಿ ಯಶಸ್ವಿ ಆರಂಭಿಕ ಜೋಡಿಯಾಗಿ ಹೊರಹೊಮ್ಮಿದೆ.