ಪ್ರಧಾನಿ ಮೋದಿ ಮನವಿ ಮಾಡಿಕೊಂಡರೆ ಧೋನಿ ಟಿ20 ವಿಶ್ವಕಪ್ ಆಡಬಹುದು ಎಂದ ಪಾಕ್ ಮಾಜಿ ವೇಗಿ..!
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಮೂರ್ನಾಲ್ಕು ದಿನಗಳೇ ಕಳೆದರು, ಧೋನಿ ಕುರಿತ ಮಾತುಕತೆ ಮಾತ್ರ ನಿಂತಿಲ್ಲ. ಇದೀಗ ಪಾಕಿಸ್ತಾನ ಮಾಜಿ ವೇಗಿ ಶೊಯೇಬ್ ಅಖ್ತರ್ ಕೂಡಾ ಧೋನಿ ನಿವೃತ್ತಿಯ ಬಗ್ಗೆ ಮಾತುಗಳನ್ನಾಡಿದ್ದು, ಅವರು ಭಾರತದಲ್ಲೇ ನಡೆಯಲಿರುವ ಟಿ20 ವಿಶ್ವಕಪ್‌ವರೆಗೂ ಆಡಬಹುದಿತ್ತು ಎಂದಿದ್ಧಾರೆ.
ಒಂದು ವೇಳೆ ದೇಶದ ಪ್ರಧಾನಿ ಮನವಿ ಮಾಡಿಕೊಂಡರೆ ಧೋನಿ ಮತ್ತೆ ನಿವೃತ್ತಿ ಹಿಂಪಡೆದು ತಂಡ ಕೂಡಿಕೊಳ್ಳುವ ಸಾಧ್ಯಾಸಾಧ್ಯತೆಗಳ ಬಗ್ಗೆ ಮಾತುಗಳನ್ನು ಆಡಿದ್ದಾರೆ. ಅಷ್ಟಕ್ಕೂ ಅಖ್ತರ್ ಹೇಳಿದ್ದೇನು, ನೀವೇ ನೋಡಿ.
ಪ್ರಧಾನಿ ನರೇಂದ್ರ ಮೋದಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ನಿವೃತ್ತಿ ಹಿಂಪಡೆದು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿಕೊಳ್ಳಬಹುದು ಎಂದು ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್ ಅಭಿಪ್ರಾಯ ಪಟ್ಟಿದ್ದಾರೆ.
ಹೀಗೇನಾದರೂ ಆದರೆ ಭಾರತದಲ್ಲೇ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಎಂ. ಎಸ್. ಧೋನಿಯ ಆಟವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದಾಗಿದೆ ಎಂದು ರಾವುಲ್‌ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಅಖ್ತರ್ ಹೇಳಿದ್ದಾರೆ.
ಪ್ರಧಾನಿ ಮನಸು ಮಾಡಿದರೆ ಮಾತ್ರ ಧೋನಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಬಹುದು ಎಂದು ಅಖ್ತರ್ ಭವಿಷ್ಯ ನುಡಿದಿದ್ದಾರೆ.
ಯಾಕೆಂದರೆ ಪಾಕಿಸ್ತಾನದ ಜನರಲ್ ಜಿಯಾ ಉಲ್ ಹಕ್ 1987ರ ಬಳಿಕ ಇಮ್ರಾನ್ ಖಾನ್ ಅವರಿಗೆ ನಿವೃತ್ತಿಯಾಗದಿರಿ ಎಂದು ಹೇಳಿದ್ದರು. ಅದರಂತೆಯೇ ಇಮ್ರಾನ್ ಖಾನ್ ಆಟ ಮುಂದುವರೆಸಿದ್ದರು.
ಪ್ರಧಾನಿ ಮಾತನ್ನು ತಳ್ಳಿ ಹಾಕಲು ಬರುವುದಿಲ್ಲ. ಹಾಗಾಗಿ ಪ್ರಧಾನಿ ಮನಸು ಮಾಡಿದರೆ ಧೋನಿ ಬ್ಲೂ ಜೆರ್ಸಿ ತೊಟ್ಟು ಟಿ20 ವಿಶ್ವಕಪ್ ಆಡಬಹುದು ಎಂದು ಹೇಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹಾಗೂ ಅವರ ಭವಿಷ್ಯದ ಕುರಿತಂತೆ ಅಖ್ತರ್ ತಮ್ಮದೇ ಯೂಟ್ಯೂಬ್ ಚಾನಲ್ ಆದ 'ಬೋಲ್ ವಾಸೀಂ'ನಲ್ಲಿ ಮಾತನಾಡಿದ ಅವರು ಧೋನಿ ಸರಿಯಾದ ಸಮಯದಲ್ಲೇ ನಿವೃತ್ತಿಯ ಕುರಿತಂತೆ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಅವರು ಟಿ20 ವಿಶ್ವಕಪ್ ಟೂರ್ನಿಯನ್ನು ಆಡಬಹುದಿತ್ತು. ಅದು ಅವರ ಆಯ್ಕೆ ಎಂದು ಹೇಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. ಭಾರತ ಕೂಡಾ ಅವರನ್ನು ಅಷ್ಟೇ ಪ್ರೀತಿ ನೀಡಬೇಕು ಎಂದು ಅಖ್ತರ್ ಹೇಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಆಗಸ್ಟ್ 15ರಂದು ಇನ್‌ಸ್ಟಾಗ್ರಾಂ ಮೂಲಕ ತಮ್ಮ 16 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
ಎಂ.ಎಸ್. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕೆಲವೇ ಕ್ಷಣಗಳಲ್ಲಿ ಟೀಂ ಇಂಡಿಯಾ ಮತ್ತೋರ್ವ ಆಟಗಾರ ಸುರೇಶ್ ರೈನಾ ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.
ಇದೀಗ ಈ ಇಬ್ಬರು ಕ್ರಿಕೆಟಿಗರು 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ.