'ಪ್ರಾಣ ಪಣಕ್ಕಿಟ್ಟಾದರೂ...' ವಿರಾಟ್ ಕೊಹ್ಲಿಗೆ ಓಪನ್ ಚಾಲೆಂಜ್ ಮಾಡಿದ ಪಾಕ್ ಮಾರಕ ವೇಗಿ..!
ಬೆಂಗಳೂರು: ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳೆಂದೇ ಬಿಂಬಿತವಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳೇ ತುದಿಗಾಲಿನಲ್ಲಿ ನಿಂತಿರುತ್ತಾರೆ. ಹೀಗಿರುವಾಗ ಎರಡು ದೇಶಗಳ ಆಟಗಾರರ ನಡುವೆಯೂ ಸಾಕಷ್ಟು ಪೈಪೋಟಿ ಇರುತ್ತೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿಗೆ ಪಾಕ್ ಮಾರಕ ವೇಗಿ ಓಪನ್ ಚಾಲೆಂಜ್ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನ ಎದುರು ತಮ್ಮ ದಿಟ್ಟ ಹೋರಾಟದ ಮೂಲಕ ಹಲವು ಪಂದ್ಯಗಳಲ್ಲಿ ತಂಡಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ವಿರಾಟ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಬದ್ದ ಎದುರಾಳಿ ಪಾಕಿಸ್ತಾನ ಎದುರು ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದು, ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ.
Naseem Shah
ಇನ್ನು ಇದೆಲ್ಲದರ ನಡುವೆ ಪಾಕಿಸ್ತಾನದ 20 ವರ್ಷದ ಯುವ ವೇಗಿ ನಶೀಮ್ ಶಾ, ಇದೀಗ ಕಿಂಗ್ ಕೊಹ್ಲಿಗೆ ಸವಾಲೊಂದನ್ನು ಎಸೆದಿದ್ದಾರೆ. 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಯುವ ವೇಗಿ, ತಮ್ಮ ಮಾರಕ ಬೌಲಿಂಗ್ ಮೂಲಕ ಮಿಂಚುತ್ತಿದ್ದಾರೆ.
ಸತತವಾಗಿ ಗಂಟೆಗೆ 140 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಬಲಗೈ ವೇಗಿ ನಸೀಮ್ ಶಾ, ಇದೀಗ ವಿಶ್ವಕ್ರಿಕೆಟ್‌ನ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡುವ ಶಪಥ ಮಾಡಿದ್ದಾರೆ.
ನಾನು ಪ್ರಾಣವನ್ನೇ ಪಣಕ್ಕಿಟ್ಟು ಭಾರತದ ವಿರುದ್ದ ಆಡುತ್ತೇನೆ. ಭಾರತ ಎದುರು ಆಡುವಾಗ ವಿರಾಟ್ ಕೊಹ್ಲಿಯ ವಿಕೆಟ್ ಕಬಳಿಸುವುದೇ ನಮ್ಮ ಗುರಿಯಾಗಿರುತ್ತದೆ. ಅದರಲ್ಲೂ ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡುವುದು ನನ್ನ ಜೀವಮಾನದ ಕನಸು ಎಂದು ನಸೀಮ್ ಶಾ ಹೇಳಿದ್ದಾರೆ.
ಈ ವರ್ಷದಲ್ಲೇ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಎರಡೆರಡು ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದ್ದು, ವಿರಾಟ್ ಕೊಹ್ಲಿ ಹಾಗೂ ನಸೀಂ ಶಾ ನಡುವಿನ ಕಾದಾಟಕ್ಕೂ ಸಾಕ್ಷಿಯಾಗುವ ಸಾಧ್ಯತೆಯಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ಆದರೆ ಈ ಟೂರ್ನಿ ಆಯೋಜನೆಯ ಕುರಿತಂತೆ ಅನುಮಾನದ ತೂಗುಗತ್ತಿ ನೇತಾಡಲಾರಂಭಿಸಿದೆ.
ಇನ್ನು ಇದಾದ ಬಳಿಕ ಭಾರತದಲ್ಲೇ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಜರುಗಲಿದ್ದು, ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಎಲ್ಲಾ ಅಂದುಕೊಂಡಂತೆ ಆದರೆ ಮುಂಬರುವ ಅಕ್ಟೋಬರ್ 05ರಂದು ಟೂರ್ನಿಗೆ ಚಾಲನೆ ಸಿಗಲಿದ್ದು, ಫೈನಲ್ ಪಂದ್ಯವು ನವೆಂಬರ್ 19ರಂದು ನಡೆಯಲಿದೆ.