ಮುಂಬೈ ಇಂಡಿಯನ್ಸ್ ಹೆಸರಿನಲ್ಲಿವೆ ಯಾವ ತಂಡವು ಮುರಿಯಲಾಗದ 5 ದಾಖಲೆಗಳು..!
ಬೆಂಗಳೂರು: ಕಳೆದ 13 ಆವೃತ್ತಿಗಳ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿ ಎಂದರೆ ಅದು ಮುಂಬೈ ಇಂಡಿಯನ್ಸ್. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 5 ಬಾರಿ ಐಪಿಎಲ್ ಟ್ರೋಫಿಯನ್ನು ಜಯಿಸಿ ದಾಖಲೆ ಬರೆದಿದೆ.
ಮೊದಲೆರಡು ಆವೃತ್ತಿಗಳಲ್ಲಿ ಪ್ಲೇ ಆಫ್‌ಗೇರಲು ವಿಫಲವಾಗಿದ್ದ ಮುಂಬೈ ಇಂಡಿಯನ್ಸ್, ಮೂರನೇ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಶರಣಾಗಿತ್ತು. ಇದಾದ ಬಳಿಕ 2013ರಿಂದ 2020ರ ಅವಧಿಯಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಇದೇ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹೆಸರಿನಲ್ಲಿರುವ 5 ಅಪರೂಪದ ದಾಖಲೆಗಳ ವಿವರ ಇಲ್ಲಿದೆ ನೋಡಿ.
1. ಮುಂಬೈ ಇಂಡಿಯನ್ಸ್ ತಂಡದ ಹೆಸರಿನಲ್ಲಿದೆ ಭಾರೀ ಅಂತರದ ಗೆಲುವು
ಐಪಿಎಲ್‌ನಲ್ಲಿ ಬಹುತೇಕ ಹೆಚ್ಚಿನ ಪಂದ್ಯಗಳು ಕೊನೆಯ ಕ್ಷಣದವರೆಗೂ ಪೈಪೋಟಿ ಇರುತ್ತದೆ. ಹೀಗಿದ್ದೂ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವು 146 ರನ್‌ಗಳ ಅಂತರ ಗೆಲುವು ದಾಖಲಿಸುವ ಮೂಲಕ ಅಪರೂಪದ ರೆಕಾರ್ಡ್ ಬರೆದಿದೆ.
2017ರ ಐಪಿಎಲ್ ಟೂರ್ನಿಯ 45ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರೋಹಿತ್ ಶರ್ಮಾ ಪಡೆ ದಾಖಲೆಯ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ 212 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಡೆಲ್ಲಿ ಕೇವಲ 66 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇಂದಿಗೂ ಐಪಿಎಲ್‌ನಲ್ಲಿ ಭಾರೀ ಅಂತರದ ಗೆಲುವು ಮುಂಬೈ ಹೆಸರಿನಲ್ಲಿದೆ.
2. ಬೆಸ್ಟ್ ಬೌಲಿಂಗ್ ದಾಖಲೆ ಕೂಡಾ ಮುಂಬೈ ಹೆಸರಿನಲ್ಲಿದೆ..!
ಐಪಿಎಲ್ ಹೇಳಿ-ಕೇಳಿ ಬ್ಯಾಟ್ಸ್‌ಮನ್‌ಗಳ ಅಬ್ಬರದಿಂದ ಕೂಡಿರುತ್ತದೆ. ಹೀಗಿದ್ದೂ ಬೆಸ್ಟ್ ಬೌಲಿಂಗ್ ಸಾಧನೆ ಮುಂಬೈ ಇಂಡಿಯನ್ಸ್ ಬೌಲರ್ ಅಲ್ಜೆರಿ ಜೋಸೆಫ್ ಹೆಸರಿನಲ್ಲಿದೆ. ವೇಗಿ ಅಲ್ಜೆರಿ ಜೋಸೆಫ್ ಕೇವಲ 12 ರನ್ ನೀಡಿ 6 ವಿಕೆಟ್ ಕಬಳಿಸಿದ್ದಾರೆ.
2019ರ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿ 7 ವಿಕೆಟ್ ಕಳೆದುಕೊಂಡು 136 ರನ್ ಗಳಿಸಿತ್ತು. ಸಾಧಾರಣ ಗುರಿ ಬೆನ್ನತ್ತಿದ ಹೈದರಾಬಾದ್‌ಗೆ ಜೋಸೆಫ್ ಕಂಟಕವಾಗಿ ಪರಿಣಮಿಸಿದೆ. ಜೋಸೆಫ್ ಮಾರಕ ದಾಳಿಗೆ(12/6) ತತ್ತರಿಸಿದ ಹೈದರಾಬಾದ್ 96 ರನ್‌ಗಳಿಗೆ ಸರ್ವಪತನ ಕಂಡಿತು.
3. ಅತಿ ಕಡಿಮೆ ಎಸೆತಗಳನ್ನು ಎದುರಿಸಿ ಗೆಲುವಿನ ದಾಖಲೆ ಬರೆದಿದೆ ಮುಂಬೈ ಇಂಡಿಯನ್ಸ್
2008ರ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೇ ಅತಿವೇಗವಾಗಿ ಗೆಲುವು ದಾಖಲಿಸಿದ ತಂಡ ಎನ್ನುವ ಕ್ರೀರ್ತಿಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಿತ್ತು.
ಮುಂಬೈ ಬೌಲರ್‌ಗಳ ಎದುರು ಕೋಲ್ಕತ ನೈಟ್ ರೈಡರ್ಸ್ ತಂಡವು ಕೇವಲ 67 ರನ್ ಗಳಿಸಲಷ್ಟೇ ಶಕ್ತವಾಯಿತು. ಸಾಧಾರಣ ಗುರಿ ಬೆನ್ನತ್ತಿದ ಮುಂಬೈ ಕೇವಲ 5.3 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ಈ ಮೂಲಕ 87 ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಸೇರಿ ದಾಖಲೆ ಬರೆದಿದೆ. ಈ ದಾಖಲೆ ಅಳಿಸಿಹೋಗುವುದು ಅನುಮಾನ.
4. 10 ವರ್ಷಗಳ ಕಾಲ ಚೆಪಾಕ್‌ನಲ್ಲಿ ಅಜೇಯವಾಗುಳಿದಿದ್ದ ಮುಂಬೈ ಇಂಡಿಯನ್ಸ್
ಅಚ್ಚರಿ ಎನಿಸಿದರು ಇದು ಸತ್ಯ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸಾಂಪ್ರದಾಯಿಕ ಎದುರಾಳಿಗಳೆಂದು ಗುರುತಿಸಲಾಗುತ್ತದೆ. ಹೀಗಿದ್ದೂ ಸಿಎಸ್‌ಕೆ ತವರು ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಒಂದು ದಶಕಗಳ ಕಾಲ ಸೋಲನ್ನೇ ಕಂಡಿರಲಿಲ್ಲ.
ಮುಂಬೈ ಇಂಡಿಯನ್ಸ್ ತಂಡವು 2011ರಿಂದ 2021ರವರೆಗೂ ಚೆನ್ನೈನಲ್ಲಿ ಸೋಲೇ ಕಂಡಿರಲಿಲ್ಲ. ಆದರೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯಕ್ಕೆ ಚೆನ್ನೈ ಆತಿಥ್ಯವನ್ನು ವಹಿಸಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ಚೆನ್ನೈನಲ್ಲಿ ಮುಂಬೈ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಿತ್ತು.
5. ಅತಿ ಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ದಾಖಲೆಯೂ ಮುಂಬೈ ಹೆಸರಿನಲ್ಲಿಯೇ ಇದೆ.
ಐಪಿಎಲ್‌ನ ಮೊದಲ 5 ಆವೃತ್ತಿಗಳಲ್ಲಿ ಒಮ್ಮೆಯೂ ಕಪ್ ಗೆಲ್ಲಲು ವಿಫಲವಾಗಿದ್ದ ಮುಂಬೈ ಇಂಡಿಯನ್ಸ್, 13ನೇ ಆವೃತ್ತಿ ಐಪಿಎಲ್ ಟೂರ್ನಿ ಅಂತ್ಯದ ವೇಳೆಗೆ ಮುಂಬೈ ಇಂಡಿಯನ್ಸ್ ತೆಕ್ಕೆಯಲ್ಲಿ 5 ಐಪಿಎಲ್ ಟ್ರೋಫಿಗಳಿವೆ.
ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡವು 3 ಐಪಿಎಲ್ ಟ್ರೋಫಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ 2013, 2015, 2017, 2019 ಹಾಗೂ 2020ರಲ್ಲಿ ಐಪಿಎಲ್ ಟ್ರೋಫಿ ಜಯಿಸಿದೆ. ಸಿಎಸ್‌ಕೆ ಇನ್ನು 2 ಬಾರಿ ಸತತ ಟ್ರೋಫಿ ಜಯಿಸಿದರೆ ಮುಂಬೈ ದಾಖಲೆಯನ್ನು ಸರಿಗಟ್ಟಬಹುದು.