T20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದವರು ಯಾರು? ಗೇಲ್ ದಾಖಲೆ ಮುರಿಯಲು ಸಾಧ್ಯನಾ..?
ಬೆಂಗಳೂರು: ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಚುಟುಕು ಕ್ರಿಕೆಟ್‌ನಲ್ಲಿ ಶತಕ ಸಿಡಿಸುವುದು ಅಷ್ಟೇನು ಸುಲಭದ ಮಾತಲ್ಲ. ಹೀಗಿದ್ದೂ ಕೆಲವು ಬ್ಯಾಟರ್‌ಗಳು ಲೀಲಾಜಾಲವಾಗಿ ಟಿ20 ಕ್ರಿಕೆಟ್‌ನಲ್ಲೂ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಲೀಗ್ ಕ್ರಿಕೆಟ್ ಸೇರಿದಂತೆ ಎಲ್ಲಾ ಮಾದರಿಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಟಾಪ್ 10 ಆಟಗಾರರ ಪಟ್ಟಿಯಲ್ಲಿ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ. ಗೇಲ್ ದಾಖಲೆ ಯಾರು ಮುರಿಯಬಹುದು ಎನ್ನುವುದನ್ನು ಕಾಮೆಂಟ್ ಮಾಡಿ.
1. ಕ್ರಿಸ್ ಗೇಲ್: 22 ಶತಕ
ಯೂನಿವರ್ಸಲ್ ಬಾಸ್ ಖ್ಯಾತಿಯ ಗೇಲ್ 2005ರಿಂದ 2022ರ ಅವಧಿಯಲ್ಲಿ 463 ಟಿ20 ಪಂದ್ಯಗಳನ್ನಾಡಿ 14562 ರನ್ ಬಾರಿಸಿದ್ದು, ಒಟ್ಟಾರೆ 22 ಬಾರಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ನಂ.1 ಸ್ಥಾನದಲ್ಲಿ ಭದ್ರವಾಗಿದ್ದಾರೆ.
2. ಬಾಬರ್ ಅಜಂ: 10 ಶತಕ
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ, 2012ರಿಂದ ಇಲ್ಲಿಯವರೆಗೆ 264 ಟಿ20 ಪಂದ್ಯಗಳನ್ನಾಡಿ 9412 ರನ್ ಬಾರಿಸಿದ್ದು, ಒಟ್ಟಾರೆ 10 ಬಾರಿ ಶತಕ ಸಿಡಿಸುವ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
3. ಡೇವಿಡ್ ವಾರ್ನರ್: 8 ಶತಕ
ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಬ್ಯಾಟರ್ ವಾರ್ನರ್, ಐಪಿಎಲ್, ಬಿಗ್‌ಬ್ಯಾಶ್ ಸೇರಿದಂತೆ ಹಲವು ಟಿ20 ಟೂರ್ನಿಯಲ್ಲಿ ಪಾಲ್ಗೊಂಡು ಇದುವರೆಗೂ 356 ಪಂದ್ಯಗಳನ್ನಾಡಿ 8 ಶತಕ ಸಿಡಿಸಿದ್ದಾರೆ.
4. ವಿರಾಟ್ ಕೊಹ್ಲಿ: 8 ಶತಕ
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಭಾರತ ಹಾಗೂ ಆರ್‌ಸಿಬಿ ಪರ ಒಟ್ಟಾರೆ 374 ಟಿ20 ಪಂದ್ಯಗಳನ್ನಾಡಿ 11.965 ರನ್ ಬಾರಿಸಿದ್ದು, 8 ಬಾರಿ ಶತಕ ಸಿಡಿಸಿ ಮಿಂಚಿದ್ದಾರೆ.
5. ಆರೋನ್ ಫಿಂಚ್: 8 ಶತಕ
ಆಸ್ಟ್ರೇಲಿಯಾದ ಮಾಜಿ ನಾಯಕ ಆರೋನ್ ಫಿಂಚ್ 2009ರಿಂದ 2023ರ ವರೆಗೆ 382 ಪಂದ್ಯಗಳನ್ನಾಡಿ 11392 ರನ್ ಬಾರಿಸಿದ್ದು, ಒಟ್ಟಾರೆ 8 ಬಾರಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
6. ಮೈಕೆಲ್ ಕ್ಲಿಂಗರ್: 8 ಶತಕ
ಆಸ್ಟ್ರೇಲಿಯಾ ಮೂಲದ ಕ್ರಿಕೆಟಿಗ ಡೆಲ್ಲಿ ಡೇರ್‌ಡೆವಿಲ್ಸ್, ಕೊಚ್ಚಿ ಟಸ್ಕರ್ಸ್, ಪರ್ತ್ ಸ್ಕಾಚರ್ಸ್ ಸೇರಿದಂತೆ ಹಲವು ಟಿ20 ತಂಡಗಳನ್ನು ಪ್ರತಿನಿಧಿಸಿ 206 ಪಂದ್ಯಗಳನ್ನಾಡಿ 8 ಶತಕ ಸಿಡಿಸಿ ಮಿಂಚಿದ್ದಾರೆ.
7. ಬ್ರೆಂಡನ್ ಮೆಕ್ಕಲಂ: 7 ಶತಕ
ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ, ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಲಯನ್ಸ್ ಸೇರಿದಂತೆ ಹಲವು ತಂಡಗಳ ಪರ 370 ಟಿ20 ಪಂದ್ಯಗಳನ್ನಾಡಿ 7 ಶತಕ ಸಿಡಿಸಿದ್ದಾರೆ.
8. ಲೂಕ್ ರೈಟ್: 7 ಶತಕ
ಇಂಗ್ಲೆಂಡ್ ತಂಡದ ಮಾಜಿ ಆಲ್ರೌಂಡರ್ ಲೂಕ್ ರೈಟ್, ಪುಣೆ ವಾರಿಯರ್ಸ್, ಢಾಕಾ ಗ್ಲಾಡಿಯೇಟರ್ಸ್ ಸೇರಿದಂತೆ 344 ಟಿ20 ಪಂದ್ಯಗಳನ್ನಾಡಿ 7 ಶತಕ ಸಿಡಿಸಿದ್ದಾರೆ. ಲೂಕ್ ರೈಟ್ 2022ರ ಬಳಿಕ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
9. ಜೋಸ್ ಬಟ್ಲರ್: 6 ಶತಕ
ಇಂಗ್ಲೆಂಡ್ ಟಿ20 ತಂಡದ ನಾಯಕ ಜೋಸ್ ಬಟ್ಲರ್ 2009ರಿಂದ ಟಿ20 ಪಂದ್ಯಗಳನ್ನಾಡಲಾರಂಭಿಸಿದ್ದು, ಇಂಗ್ಲೆಂಡ್, ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್ ಸೇರಿದಂತೆ ಹಲವು ತಂಡಗಳ ಪರ 377 ಪಂದ್ಯಗಳನ್ನಾಡಿ 6 ಶತಕ ಸಿಡಿಸಿದ್ದಾರೆ.
10. ರೋಹಿತ್ ಶರ್ಮಾ: 6 ಶತಕ
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2007ರಿಂದ ಟಿ20 ಕ್ರಿಕೆಟ್ ಆಡಲು ಆರಂಭಿಸಿದ್ದು, ಭಾರತ ಮಾತ್ರವಲ್ಲದೇ ಡೆಕ್ಕನ್ ಚಾರ್ಜರ್ಸ್, ಮುಂಬೈ ಇಂಡಿಯನ್ಸ್ ಪರ 423 ಪಂದ್ಯಗಳನ್ನಾಡಿ 6 ಶತಕ ಸಿಡಿಸಿದ್ದಾರೆ.