ನನ್ನ ಕಣ್ಣೀರು ದೇಶ ನೋಡಬಾರದೆಂದ ಹರ್ಮನ್‌ಪ್ರೀತ್ ಕೌರ್‌ಗೆ ತಂದೆಯೇ ಮೊದಲ ಗುರು, ಸೆಹ್ವಾಗ್ ಆರಾಧ್ಯ ದೈವ..!
ನವದೆಹಲಿ(ಫೆ.25): ಹರ್ಮನ್‌ಪ್ರೀತ್ ಕೌರ್, ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ. ತಮ್ಮ ಅದ್ಭುತ ಬ್ಯಾಟಿಂಗ್ ಹಾಗೂ ನಾಯಕತ್ವದ ಗುಣಗಳ ಮೂಲಕ ದೇಶದ ಅಸಂಖ್ಯಾತ ಯುವಕ ಯುವತಿಯರ ಕಣ್ಮಣಿಯಾಗಿರುವ ಹರ್ಮನ್‌ಪ್ರೀತ್ ಕೌರ್, ಇತ್ತೀಚೆಗಷ್ಟೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮೀಸ್‌ನಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಮುಗ್ಗರಿತ್ತು. ಪಂದ್ಯ ಮುಕ್ತಾಯದ ಬಳಿಕ ಸನ್ ಗ್ಲಾಸ್ ಹಾಕಿಕೊಂಡೇ ಮಾತನಾಡಿದ್ದರು. ಯಾಕೆಂದರೇ, ನನ್ನ ಕಣ್ಣೀರನ್ನು ದೇಶದ ಜನರು ನೋಡಲು ನಾನು ಬಯಸುವುದಿಲ್ಲ ಎಂದಿದ್ದರು. ಅಷ್ಟಕ್ಕೂ ಈ ಹರ್ಮನ್‌ಪ್ರೀತ್ ಕೌರ್ ಯಾರು? ಆಕೆಯ ಹಿನ್ನೆಲೆ ಏನು? ಇಲ್ಲಿಯವರೆಗಿನ ಸಾಧನೆ ಏನು ಎನ್ನುವ ಒಂದು ಪಕ್ಷಿನೋಟವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದೆ ಕಟ್ಟಿಕೊಡುತ್ತಿದೆ ನೋಡಿ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಮಾದರಿಯಲ್ಲಿ ದೇಶವನ್ನು ಪ್ರತಿನಿಧಿಸಿದ ಕೆಲವೇ ಕೆಲವು ಆಟಗಾರ್ತಿಯರಲ್ಲಿ ಹರ್ಮನ್‌ಪ್ರೀತ್ ಕೌರ್ ಕೂಡಾ ಒಬ್ಬರು. ಪುರುಷರು ಹಾಗೂ ಮಹಿಳೆಯರು ಒಳಗೊಂಡಂತೆ ಭಾರತ ಪರ 100 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಮೊದಲ ಕ್ರಿಕೆಟರ್ ಎನ್ನುವ ಹಿರಿಮೆ ಕೂಡಾ ಹರ್ಮನ್‌ಪ್ರೀತ್ ಕೌರ್ ಅವರದ್ದಾಗಿದೆ
ಹರ್ಮನ್‌ಪ್ರೀತ್ ಕೌರ್, ಮಾರ್ಚ್ 08, 1989ರಲ್ಲಿ ಪಂಜಾಬ್‌ನ ಮೋಗ ಎಂಬಲ್ಲಿ ಜನಿಸಿದರು. ತಂದೆ ಹರ್ಮನ್‌ದೀರ್ ಸಿಂಗ್ ಭುಲ್ಲರ್ ಹಾಗೂ ತಾಯಿ ಸತ್ವೀಂದರ್ ಕೌರ್. ಬಾಲ್ಯದಿಂದಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದ ಹರ್ಮನ್‌ಗೆ ತಂದೆಯೇ ಬಾಲ್ಯದ ಕೋಚ್ ಆಗಿದ್ದರು. ನಂತರ ಶಾಲಾ ದಿನಗಳಲ್ಲಿ ಕಮಲ್‌ದೀಶ್ ಸಿಂಗ್ ಸೋಧಿ ಬಳಿ ಕ್ರಿಕೆಟ್ ಅಭ್ಯಾಸ ಆರಂಭಿಸಿದರು.
ಹರ್ಮನ್‌ಪ್ರೀತ್ ಕೌರ್ ತಂದೆ ಕೂಡಾ ತಾವೊಬ್ಬ ಕ್ರಿಕೆಟರ್ ಆಗಬೇಕು, ದೇಶ ಪ್ರತಿನಿಧಿಸಬೇಕು ಎನ್ನುವ ಕನಸು ಕಂಡವರು. ಆದರೆ ಪರಿಸ್ಥಿತಿಯ ಒತ್ತಡದಲ್ಲಿ ಕ್ರಿಕೆಟರ್ ಆಗಲಿಲ್ಲ. ಇನ್ನು ತಾಯಿ ಗೃಹಿಣಿ. ತಂದೆ ತನ್ನ ಮಗಳನ್ನು ಕ್ರಿಕೆಟರನ್ನಾಗಿ ಮಾಡುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡುವಲ್ಲಿ ಯಶಸ್ವಿಯಾದರು.
ಹರ್ಮನ್‌ಪ್ರೀತ್ ಕೌರ್‌ಗೆ ಸ್ಪೋಟಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಆರಾಧ್ಯ ದೈವ. ಹರ್ಮನ್‌ಪ್ರೀತ್ ತಮ್ಮ ಮನೆಯ ಗೋಡೆಯ ಮೇಲೆಲ್ಲಾ ಸೆಹ್ವಾಗ್ ಅವರ ಪೋಸ್ಟರ್ ಹಾಕಿಕೊಂಡಿದ್ದರು. ಸೆಹ್ವಾಗ್ ಬ್ಯಾಟಿಂಗ್‌ಗೆ ಹಳ್ಳಿಯಿಂದ ದಿಲ್ಲಿಯವರೆಗೆ ಅಭಿಮಾನಿಗಳಿದ್ದಾರೆ. ಅಂತಹ ಅಪ್ಪಟ ಅಭಿಮಾನಿಗಳಲ್ಲಿ ಹರ್ಮನ್ ಕೂಡಾ ಒಬ್ಬರು. ಹರ್ಮನ್‌ಪ್ರೀತ್ ಕೌರ್ ಸಿಕ್ಸರ್ ಬಾರಿಸುವುದರಲ್ಲಿ ಎತ್ತಿದ ಕೈ.
ಹರ್ಮನ್‌ಪ್ರೀತ್ ಕೌರ್, ರಾಷ್ಟ್ರೀಯ ತಂಡ ಕೂಡಿಕೊಳ್ಳುವ ಮುನ್ನ, ಜಿಲ್ಲಾ ಮಟ್ಟ, ರಾಜ್ಯಮಟ್ಟ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅದ್ಬುತ ಪ್ರದರ್ಶನ ತೋರಿದ್ದರು. ಹರ್ಮನ್‌ಪ್ರೀತ್ ಕೌರ್ 2009ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಪಾಕಿಸ್ತಾನ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
ಹರ್ಮನ್‌ಪ್ರೀತ್ ಕೌರ್, ಭಾರತ ಪರ 100 ಏಕದಿನ ಹಾಗೂ 100 ಟಿ20 ಪಂದ್ಯವನ್ನಾಡಿ ಎರಡು ಮಾದರಿಯಲ್ಲೂ 3000+ ರನ್ ಬಾರಿಸಿದ ಕೆಲವೇ ಕೆಲವು ಕ್ರಿಕಟರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇನ್ನು 2017ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಹರ್ಮನ್‌ಪ್ರೀತ್ ಕೌರ್ ಅಜೇಯ 171 ರನ್ ಬಾರಿಸಿದ್ದು ಯಾರಾದರೂ ಮರೆಯಲು ಸಾಧ್ಯವೇ?. '
ಇನ್ನು ಮಹಿಳಾ ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡ ಮೊದಲ ಭಾರತೀಯ ಆಟಗಾರ್ತಿ ಎನ್ನುವ ಹೆಗ್ಗಳಿಕೆ ಹರ್ಮನ್‌ಪ್ರೀತ್ ಕೌರ್ ಅವರದ್ದು. 2018-19ರಲ್ಲಿ ಸಿಡ್ನಿ ಥಂಡರ್ಸ್ ತಂಡವನ್ನು ಕೂಡಿಕೊಂಡಿದ್ದ ಹರ್ಮನ್‌ಪ್ರೀತ್ ಕೌರ್, ಆ ಆವೃತ್ತಿಯಲ್ಲಿ 312 ರನ್ ಹಾಗೂ 9 ವಿಕೆಟ್ ಕಬಳಿಸಿದ್ದರು.
ಇತ್ತೀಚೆಗಷ್ಟೇ ನಡೆದ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 1.80 ಕೋಟಿ ರುಪಾಯಿ ನೀಡಿ ಹರ್ಮನ್‌ಪ್ರೀತ್ ಕೌರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇನ್ನು 2022ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು ಫೈನಲ್ ಪ್ರವೇಶಿಸಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿತ್ತು. ಆದರೆ ಇದೀಗ ಐಸಿಸಿ ಟಿ20 ವಿಶ್ವಕಪ್ ಸೆಮೀಸ್ ಸೋಲು, ಭಾರತಕ್ಕೆ ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ನುಚ್ಚು ನೂರು ಮಾಡಿ ಹಾಕಿದೆ.
ಸೆಮಿಫೈನಲ್ ಸೋಲಿನ ಬಳಿಕ ಮಾತನಾಡಿದ ಅವರು, ‘ನನ್ನ ಕಣ್ಣೀರನ್ನು ದೇಶ ನೋಡುವುದನ್ನು ನಾನು ಇಷ್ಟಪಡುವುದಿಲ್ಲ. ಅದಕ್ಕಾಗಿ ಸನ್ಗ್ಲಾಸ್ ಹಾಕಿಯೇ ಮಾತನಾಡುತ್ತಿದ್ದೇನೆ’. ‘ನಾವು ಉತ್ತಮವಾಗಿ ಆಡಿದ್ದೇವೆ. ಆದರೆ ನನ್ನ ರನ್ಔಟ್ ಪಂದ್ಯದ ಗತಿ ಬದಲಿಸಿತು. ನಾನು ಕೊನೆವರೆಗೆ ಕ್ರೀಸ್ನಲ್ಲಿದ್ದರೆ ಒಂದು ಓವರ್ ಬಾಕಿ ಉಳಿಸಿ ಪಂದ್ಯ ಗೆಲ್ಲುತ್ತಿದ್ದೆವು’ ಎಂದು ಹರ್ಮನ್ ಬೇಸರದಿಂದ ನುಡಿದರು.
ಆಸ್ಟ್ರೇಲಿಯಾ ಎದುರು ಕೆಚ್ಚೆದೆಯ ಅರ್ಧಶತಕ ಚಚ್ಚಿದ್ದ ಹರ್ಮನ್‌ಪ್ರೀತ್ ಕೌರ್, ಮಹತ್ವದ ಘಟ್ಟದಲ್ಲಿ ರನೌಟ್ ಆಗಿದ್ದರು. ಈ ಆಘಾತದಿಂದ ಹೊರಬರಲು ಸಾಕಷ್ಟು ಸಮಯ ಬೇಕು ಎಂದಿರುವ, ಹರ್ಮನ್‌ಪ್ರೀತ್ ಕೌರ್, ಆದಷ್ಟು ಬೇಗ ದೇಶಕ್ಕೆ ಐಸಿಸಿ ಟ್ರೋಫಿ ಜಯಿಸಲಿ ಎನ್ನುವುದು ಕೋಟ್ಯಾಂತರ ಅಭಿಮಾನಿಗಳ ಹಾರೈಕೆಯಾಗಿದೆ.