IPL 2023 ಪಂಜಾಬ್ ಕಿಂಗ್ಸ್‌ಗೆ ದೊಡ್ಡ ಹೊಡೆತ; ಕೊನೆ ಕ್ಷಣದಲ್ಲಿ ಐಪಿಎಲ್‌ನಿಂದ ಸ್ಪೋಟಕ ಬ್ಯಾಟರ್ ಔಟ್..!
ಬೆಂಗಳೂರು(ಮಾ.23): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ 10 ತಂಡಗಳು ಟೂರ್ನಿಗೆ ಭರ್ಜರಿ ಸಿದ್ದತೆ ನಡೆಸುತ್ತಿವೆ. ಹೀಗಿರುವಾಗಲೇ ಪಂಜಾಬ್ ಕಿಂಗ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಸ್ಪೋಟಕ ಬ್ಯಾಟರ್ ಕೊನೆಯ ಕ್ಷಣದಲ್ಲಿ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 31ರಿಂದ ಆರಂಭವಾಗಲಿದ್ದು, ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವು ನೀರಸ ಪ್ರದರ್ಶನ ತೋರುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದರ ಬೆನ್ನಲ್ಲೇ ತಂಡದಲ್ಲಿ ಮೇಜರ್ ಸರ್ಜರಿ ಮಾಡಲಾಗಿತ್ತು.
ಕಳೆದ ಐಪಿಎಲ್ ಆಟಗಾರರ ಮಿನಿ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರ್ರನ್(18.50 ಕೋಟಿ ರೂ), ಲಿಯಾಮ್ ಲಿವಿಂಗ್‌ಸ್ಟೋನ್(11.50 ಕೋಟಿ ರೂ) ಹಾಗೂ ಜಾನಿ ಬೇರ್‌ಸ್ಟೋವ್(6.75) ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಖರೀದಿಸಿತ್ತು.
ಆದರೆ ಕಳೆದ ಸೆಪ್ಟೆಂಬರ್‌ನಿಂದ ಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ 33 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೇರ್‌ಸ್ಟೋವ್‌ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಐಪಿಎಲ್‌ಗೆ ಪಾಲ್ಗೊಳ್ಳುವ ಕುರಿತಂತೆ ನಿರಪೇಕ್ಷಣಾ ಪತ್ರವನ್ನು ನೀಡಿಲ್ಲ.
ಹೀಗಾಗಿ ಜಾನಿ ಬೇರ್‌ಸ್ಟೋವ್, ಮುಂಬರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಇದು ಪಂಜಾಬ್ ಕಿಂಗ್ಸ್ ತಂಡದ ಪಾಲಿಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.
ಆದರೆ ಮೊಣಕಾಲು ಹಾಗೂ ಪಾದದ ಗಾಯದಿಂದ ಚೇತರಿಸಿಕೊಂಡಿರುವ ಇಂಗ್ಲೆಂಡ್ ತಾರಾ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಸ್ಯಾಮ್ ಕರ್ರನ್‌ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಎನ್‌ಒಸಿ ನೀಡಿದೆ.
ಜಾನಿ ಬೇರ್‌ಸ್ಟೋವ್ ಕಳೆದ ವರ್ಷ ಕಾಲು ಹಾಗೂ ಮೂಳೆ ಮುರಿತಕ್ಕೆ ಒಳಗಾಗಿ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದರು. ಹೀಗಾಗಿ ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಗೂ ಅಲಭ್ಯರಾಗಿದ್ದರು.