ಇವರೇ ನೋಡಿ ಸಾರ್ವಕಾಲಿಕ ಟಾಪ್ 10 ದಿಗ್ಗಜ ಎಡಗೈ ಕ್ರಿಕೆಟಿಗರು..!
ಬೆಂಗಳೂರು: ಪ್ರತಿ ತಂಡದ ಪಾಲಿಗೆ ಎಡಗೈ ಕ್ರಿಕೆಟಿಗರು ಒಂದು ರೀತಿಯ ವರ ಇದ್ದಂತೆ. ಎಡಗೈ ಆಟಗಾರರು ವಿಭಿನ್ನರೇನಲ್ಲ ಆದರೆ ಅವರು ವೈಶಿಷ್ಟ್ಯಪೂರ್ಣ ಆಟಗಾರರು. ಎಡಗೈ ಆಟಗಾರರು ಅದರಲ್ಲೂ ಎಡಗೈ ಬ್ಯಾಟ್ಸ್‌ಮನ್‌ಗಳು ಕ್ರಿಕೆಟ್ ಆಡುವುದನ್ನು ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ಬಲಗೈ ಕ್ರಿಕೆಟಿಗರಿಗೆ ಹೋಲಿಸಿದರೆ ಎಡಗೈ ಕ್ರಿಕೆಟಿಗರ ಸಂಖ್ಯೆ ಕೊಂಚ ಕಡಿಮೆ ಇರಬಹುದಾದರೂ, ಕೆಲವು ಎಡಗೈ ಕ್ರಿಕೆಟಿಗರು ಅಕ್ಷರಶಃ ವಿಶ್ವ ಕ್ರಿಕೆಟ್ ಜಗತ್ತನ್ನೇ ಆಳಿದ್ದಾರೆ. ಆಗಸ್ಟ್ 13ರನ್ನು ವಿಶ್ವ ಎಡಚರ ದಿನವನ್ನಾಗಿಯೂ ಆಚರಿಸಲಾಗುತ್ತದೆ. ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಸಾರ್ವಕಾಲಿಕ ಟಾಪ್ 10 ದಿಗ್ಗಜ ಎಡಗೈ ಕ್ರಿಕೆಟಿಗರ ಕಿರುಪರಿಚಯವನ್ನು ಏಷ್ಯಾನೆಟ್ ಕನ್ನಡ.ಕಾಂ ನಿಮ್ಮ ಮುಂದಿಡುತ್ತಿದೆ ನೋಡಿ.
10. ಮ್ಯಾಥ್ಯೂ ಹೇಡನ್: ಆಸ್ಟ್ರೇಲಿಯಾ
ಆಸ್ಟ್ರೇಲಿಯಾದ ದೈತ್ಯ ಎಡಗೈ ಬ್ಯಾಟ್ಸ್‌ಮನ್ ಹೇಡನ್ ಕಾಂಗರೂ ರಾಷ್ಟ್ರೀಯ ತಂಡವಲ್ಲದೇ ಬ್ರಿಸ್ಬೇನ್ ಹೀಟ್, ಚೆನ್ನೈ ಸೂಪರ್ ಕಿಂಗ್ಸ್, ಹ್ಯಾಂಪ್‌ಶೈರ್ ಹಾಗೂ ನಾರ್ಥ್‌ಹ್ಯಾಂಪ್ಟನ್‌ಶೈರ್ ತಂಡದ ಪರ ಮಿಂಚು ಹರಿಸಿದ್ದಾರೆ. ಆಸ್ಟ್ರೇಲಿಯಾ ಪರ 103 ಟೆಸ್ಟ್ ಪಂದ್ಯಗಳ 184 ಇನಿಂಗ್ಸ್‌ಗಳನ್ನಾಡಿ 30 ಶತಕ ಹಾಗೂ 29 ಅರ್ಧಶತಕ ಸಹಿತ 8,625 ರನ್ ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಹೇಡನ್ ವೈಯುಕ್ತಿಕ ಗರಿಷ್ಠ ಸ್ಕೋರ್ 380.
ಇನ್ನು ಆಸ್ಟ್ರೇಲಿಯಾ ಪರ 161 ಏಕದಿನ ಪಂದ್ಯಗಳನ್ನಾಡಿ 6,133 ರನ್ ಬಾರಿಸಿದ್ದಾರೆ. ಇದರಲ್ಲಿ 10 ಶತಕ ಹಾಗೂ 36 ಅರ್ಧಶತಕಗಳು ಸೇರಿವೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹಲವು ಸ್ಮರಣೀಯ ಗೆಲುವುಗಳಿಗೆ ಹೇಡನ್ ಸಾಕ್ಷಿಯಾಗಿದ್ದಾರೆ.
9. ಸಯೀದ್ ಅನ್ವರ್: ಪಾಕಿಸ್ತಾನ
ಪಾಕಿಸ್ತಾನ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಸಯೀದ್ ಅನ್ವರ್ ಪಾಕ್ ರಾಷ್ಟ್ರೀಯ ತಂಡ ಮಾತ್ರವಲ್ಲದೇ ಅಗ್ರಿಕಲ್ಚರ್ ಡೆವಲಪ್‌ಮೆಂಟ್ ಬ್ಯಾಂಕ್, ಕರಾಚಿ, ಲಾಹೋರ್ ಮತ್ತು ಯುನೈಟೆಡ್ ಬ್ಯಾಂಕ್ ತಂಡವನ್ನು ಪ್ರತಿನಿಧಿಸಿದ್ದಾರೆ. ಅನ್ವರ್ ಪಾಕ್ ಪರ 55 ಟೆಸ್ಟ್ ಪಂದ್ಯಗಳ 91 ಇನಿಂಗ್ಸ್‌ಗಳನ್ನಾಡಿ 4052 ರನ್ ಬಾರಿಸಿದ್ದಾರೆ. 11 ಶತಕ ಹಾಗೂ 25 ಅರ್ಧಶತಕ ಬಾರಿಸಿದ್ದ ಅನ್ವರ್ ಟೆಸ್ಟ್ ಕ್ರಿಕೆಟ್‌ನ ವೈಯುಕ್ತಿಕ ಗರಿಷ್ಠ ಸ್ಕೋರ್ 188 ರನ್.
ಇನ್ನು 247 ಏಕದಿನ ಪಂದ್ಯಗಳನ್ನಾಡಿ 20 ಶತಕ ಹಾಗೂ 43 ಅರ್ಧಶತಕ ಸಹಿತ 8,824 ರನ್ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅನ್ವರ್ ವೈಯುಕ್ತಿಕ ಗರಿಷ್ಠ ಸ್ಕೋರ್ 194. ಈ ದಾಖಲೆ ದಶಕಗಳ ಕಾಲ ಅನ್ವರ್ ಹೆಸರಿನಲ್ಲಿಯೇ ಉಳಿದಿತ್ತು.
8. ಅಲನ್ ಬಾರ್ಡರ್: ಆಸ್ಟ್ರೇಲಿಯಾ
ದಿಗ್ಗಜ ಕ್ರಿಕೆಟಿಗ ಅಲನ್ ಬಾರ್ಡರ್ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡ ಮಾತ್ರವಲ್ಲದೇ ಎಸೆಕ್ಸ್, ಗ್ಲೋಸೆಸ್ಟರ್‌ಶೈರ್, ನ್ಯೂ ಸೌಥ್‌ವೇಲ್ಸ್ ಮತ್ತು ಕ್ವೀನ್ಸ್‌ಲ್ಯಾಂಡ್ ತಂಡದ ಪರ ತಮ್ಮ ಕೈಚಳಕ ತೋರಿಸಿದ್ದಾರೆ. ಅಲನ್ ಬಾರ್ಡರ್ ಅಸ್ಟ್ರೇಲಿಯಾ ಪರ 156 ಟೆಸ್ಟ್ ಪಂದ್ಯಗಳ 265 ಇನಿಂಗ್ಸ್‌ಗಳನ್ನಾಡಿ 11,174 ರನ್ ಚಚ್ಚಿದ್ದಾರೆ. ಇದರಲ್ಲಿ 27 ಶತಕ ಹಾಗೂ 63 ಅರ್ಧಶತಕಗಳು ಸೇರಿವೆ. ಒಟ್ಟು 44 ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ ಬಾರ್ಡರ್ ಅಜೇಯರಾಗಿ ಉಳಿದಿದ್ದರು.
ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎನಿಸಿಕೊಂಡಿರುವ ಬಾರ್ಡರ್ 273 ಪಂದ್ಯಗಳನ್ನಾಡಿ 3 ಶತಕ ಹಾಗೂ 39 ಅರ್ಧಶತಕ ಸಹಿತ 6,524 ರನ್ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಬಾರ್ಡರ್ ವೈಯುಕ್ತಿಕ ಗರಿಷ್ಠ ಸ್ಕೋರ್ ಅಜೇಯ 127 ರನ್.
7. ಸನತ್ ಜಯಸೂರ್ಯ: ಶ್ರೀಲಂಕಾ
ವಿಸ್ಫೋಟಕ ಬ್ಯಾಟಿಂಗ್ ಮೂಲಕ ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ ಎಡಗೈ ಬ್ಯಾಟ್ಸ್‌ಮನ್ ಎಂದರೆ ಅದು ಸನತ್ ಜಯಸೂರ್ಯ. ಲಂಕಾ ರಾಷ್ಟ್ರೀಯ ತಂಡ ಮಾತ್ರವಲ್ಲದೇ ಸನತ್, ಕೊಲಂಬೊ ಕ್ರಿಕೆಟ್ ಕ್ಲಬ್, ಡೊಲ್ಫಿನ್ಸ್, ಮೆರಿಲ್ಬೋನ್ ಕ್ರಿಕೆಟ್ ಕ್ಲಬ್, ಮುಂಬೈ ಇಂಡಿಯನ್ಸ್, ರುಹಾನಾ ಮತ್ತು ಸೋಮರ್‌ಸೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ. ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಜಯಸೂರ್ಯ 110 ಪಂದ್ಯಗಳ 188 ಇನಿಂಗ್ಸ್‌ಗಳನ್ನಾಡಿ 14 ಶತಕ ಹಾಗೂ 31 ಅರ್ಧಶತಕ ಸಹಿತ 6,973 ರನ್ ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸನತ್ ಜಯಸೂರ್ಯ ವೈಯುಕ್ತಿಕ ಗರಿಷ್ಠ ಸ್ಕೋರ್ 340 ರನ್. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಸನತ್ 445 ಪಂದ್ಯಗಳನ್ನಾಡಿ 28 ಶತಕ ಹಾಗೂ 68 ಅರ್ಧಶತಕ ಸಹಿತ 13,430 ರನ್ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಜಯಸೂರ್ಯ ವೈಯುಕ್ತಿಕ ಗರಿಷ್ಠ ಸ್ಕೋರ್ 189 ರನ್.
6. ಕ್ಲೈವ್ ಲಾಯ್ಡ್: ವೆಸ್ಟ್ ಇಂಡೀಸ್
ವೆಸ್ಟ್ ಇಂಡೀಸ್‌ನ ದಿಗ್ಗಜ ಎಡಗೈ ಬ್ಯಾಟ್ಸ್‌ಮನ್‌ಗಳ ಪೈಕಿ ಕ್ಲೈವ್ ಲಾಯ್ಡ್ ಕೂಡಾ ಒಬ್ಬರು. ಕ್ಲೈವ್ ಲಾಯ್ಡ್ ವೆಸ್ಟ್ ಇಂಡೀಸ್ ರಾಷ್ಟ್ರೀಯ ತಂಡ ಮಾತ್ರವಲ್ಲದೇ, ಬ್ರಿಟಿಷ್ ಗಯಾನ, ಗುಯಾನಾ, ಲಾನ್ಸ್‌ಶೈರ್ ತಂಡವನ್ನು ಪ್ರತಿನಿಧಿಸಿದ್ದಾರೆ. 1971ರಲ್ಲಿ ಲಾಯ್ಡ್ ವಿಸ್ಡನ್ ಶ್ರೇಷ್ಠ ಕ್ರಿಕೆಟಿಗ ಗೌರವಕ್ಕೂ ಭಾಜನರಾಗಿದ್ದರು.
ವಿಂಡೀಸ್ ಪರ ಲಾಯ್ಡ್ 110 ಟೆಸ್ಟ್ ಪಂದ್ಯಗಳ 175 ಇನಿಂಗ್ಸ್‌ಗಳನ್ನಾಡಿ 19 ಶತಕ ಹಾಗೂ 39 ಅರ್ಧಶತಕ ಸಹಿತ 7,515 ರನ್ ಬಾರಿಸಿದ್ದಾರೆ. ಅಜೇಯ 242 ರನ್ ಲಾಯ್ಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಬಾರಿಸಿದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿದೆ. ಇನ್ನು ಲಾಯ್ಡ್ 87 ಏಕದಿನ ಪಂದ್ಯಗಳನ್ನಾಡಿ 1 ಶತಕ ಹಾಗೂ 11 ಅರ್ಧಶತಕ ಸಹಿತ 1,977 ರನ್ ಬಾರಿಸಿದ್ದರು.
5. ಕುಮಾರ್ ಸಂಗಕ್ಕರ: ಶ್ರೀಲಂಕಾ
ಲಂಕಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಗಕ್ಕರ ಲಂಕಾ ರಾಷ್ಟ್ರೀಯ ತಂಡವಲ್ಲದೇ ಕಿಂಗ್ಸ್ ಇಲೆವನ್ ಪಂಜಾಬ್, ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದರಾಬಾದ್, ಜಮೈಕಾ ತಲ್ಲವಾಸ್, ಢಾಕಾ ಡೈನಮೇಟ್ಸ್, ಖ್ವಟ್ಟಾ ಗ್ಲಾಡಿಯೇಟರ್ಸ್, ಕರಾಚಿ ಕಿಂಗ್ಸ್, ಸರ್ರೆ ಹಾಗೂ ಮುಲ್ತಾನ್ ಸುಲ್ತಾನ್ ತಂಡವನ್ನು ಪ್ರತಿನಿಧಿಸಿದ್ದಾರೆ.
ಸಂಗಾ 134 ಟೆಸ್ಟ್ ಪಂದ್ಯಗಳನ್ನಾಡಿ 38 ಶತಕ, 58 ಅರ್ಧಶತಕ ಸಹಿತ 12,400 ರನ್ ಬಾರಿಸಿದ್ದಾರೆ. ಇನ್ನು ಲಂಕಾ ಪರ 404 ಏಕದಿನ ಪಂದ್ಯಗಳನ್ನಾಡಿ 14,235 ರನ್ ಬಾರಿಸಿದ್ದಾರೆ. ಇದರಲ್ಲಿ 25 ಶತಕ ಹಾಗೂ 93 ಅರ್ಧಶತಕಗಳು ಸೇರಿವೆ.
4. ಆ್ಯಡಂ ಗಿಲ್‌ಕ್ರಿಸ್ಟ್: ಆಸ್ಟ್ರೇಲಿಯಾ
ಸಾರ್ವಕಾಲಿಕ ಶ್ರೇಷ್ಠ ವಿಕೆಟ್ ಕೀಪರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಬಲ್ಲ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂದರೆ ಅದು ಗಿಲ್‌ಕ್ರಿಸ್ಟ್. ಗಿಲ್ಲಿ ಆಸ್ಟ್ರೇಲಿಯಾ ತಂಡದ ಜತೆಗೆ ಡೆಕ್ಕನ್ ಚಾರ್ಜರ್ಸ್, ಕಿಂಗ್ಸ್ ಇಲೆವನ್ ಪಂಜಾಬ್, ಮಿಡಲ್‌ಸೆಕ್ಸ್, ನ್ಯೂ ಸೌಥ್ ವೇಲ್ಸ್ ಹಾಗೂ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ.
ಗಿಲ್ಲಿ 96 ಟೆಸ್ಟ್ ಪಂದ್ಯಗಳ 137 ಇನಿಂಗ್ಸ್‌ಗಳಲ್ಲಿ 17 ಶತಕ ಹಾಗೂ 26 ಅರ್ಧಶತಕ ಸಹಿತ 5,570 ರನ್ ಬಾರಿಸಿದ್ದಾರೆ. ಇನ್ನು 287 ಏಕದಿನ ಪಂದ್ಯಗಳಲ್ಲಿ 16 ಶತಕ ಹಾಗೂ 55 ಅರ್ಧಶತಕ ಸಹಿತ 9,619 ರನ್ ಬಾರಿಸಿದ್ದಾರೆ. 172 ರನ್ ಗಿಲ್‌ಕ್ರಿಸ್ಟ್ ಏಕದಿನ ಕ್ರಿಕೆಟ್‌ನಲ್ಲಿ ಬಾರಿಸಿದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿದೆ.
3. ಸರ್ ಗ್ಯಾರಿ ಸೋಬರ್ಸ್: ವೆಸ್ಟ್ ಇಂಡೀಸ್
ಕೆರಿಬಿಯನ್ ದೈತ್ಯ ಪ್ರತಿಭೆ, ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಸರ್ ಗ್ಯಾರಿ ಸೋಬರ್ಸ್, ಬಾರ್ಬಡೋಸ್, ನಾಟಿಂಗ್‌ಹ್ಯಾಮ್‌ಶೈರ್ ಮತ್ತು ಸೌಥ್ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. ವೆಸ್ಟ್ ಇಂಡೀಸ್ ಪರ 93 ಟೆಸ್ಟ್ ಪಂದ್ಯಗಳ 160 ಇನಿಂಗ್ಸ್‌ಗಳನ್ನಾಡಿ 26 ಶತಕ ಹಾಗೂ 30 ಅರ್ಧಶತಕ ಸಹಿತ 8,032 ರನ್ ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಗ್ಯಾರಿ ಸೋಬರ್ಸ್ ವೈಯುಕ್ತಿಕ ಗರಿಷ್ಠ ಸ್ಕೋರ್ ಅಜೇಯ 365* ರನ್
ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸೋಬರ್ಸ್ ಒಟ್ಟು 383 ಪಂದ್ಯಗಳನ್ನಾಡಿ 86 ಶತಕ ಹಾಗೂ 121 ಅರ್ಧಶತಕ ಸಹಿತ 28,314 ರನ್ ಸಿಡಿಸಿದ್ದಾರೆ
2. ಸೌರವ್ ಗಂಗೂಲಿ: ಭಾರತ
ಗಾಡ್ ಆಫ್ ಆಫ್ ಸೈಡ್ ಖ್ಯಾತಿಯ ಸೌರವ್ ಗಂಗೂಲಿ ಭಾರತ ಕಂಡ ಕೆಚ್ಚೆದೆಯ ನಾಯಕರಲ್ಲಿ ಒಬ್ಬರು ಎನಿಸಿದ್ದಾರೆ. ದಾದಾ ಭಾರತ ಮಾತ್ರವಲ್ಲದೇ ಬೆಂಗಾಲ್, ಕೋಲ್ಕತ ನೈಟ್ ರೈಡರ್ಸ್, ಲಾನ್ಸಶೈರ್, ಮೆರಿಲ್ಬೋನ್ ಕ್ರಿಕೆಟ್ ಕ್ಲಬ್, ನಾರ್ಥ್‌ಹ್ಯಾಂಪ್ಟನ್‌ಶೈರ್ ಹಾಗೂ ಪುಣೆ ವಾರಿಯರ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.
ಭಾರತ ಪರ 113 ಟೆಸ್ಟ್ ಪಂದ್ಯಗಳ 188 ಇನಿಂಗ್ಸ್‌ಗಳನ್ನಾಡಿ 16 ಶತಕ ಹಾಗೂ 35 ಅರ್ಧಶತಕ ಸಹಿತ 7,212 ರನ್ ಬಾರಿಸಿದ್ದಾರೆ. ಇನ್ನು 311 ಏಕದಿನ ಪಂದ್ಯಗಳನ್ನಾಡಿ 22 ಶತಕ ಹಾಗೂ 72 ಅರ್ಧಶತಕ ಸಹಿತ ಗಂಗೂಲಿ 11,363 ರನ್ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಗಂಗೂಲಿ ಬಾರಿಸಿದ ವೈಯುಕ್ತಿಕ ಗರಿಷ್ಠ ಸ್ಕೋರ್ 183 ರನ್.
1. ಬ್ರಿಯಾನ್ ಲಾರಾ: ವೆಸ್ಟ್ ಇಂಡೀಸ್
ವೆಸ್ ಇಂಡೀಸ್, ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಶ್ರೇಷ್ಠ ಕ್ರಿಕೆಟಿಗರಲ್ಲಿ ಲಾರಾ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ವೆಸ್ಟ್ ಇಂಡೀಸ್ ಮಾತ್ರವಲ್ಲದೇ ಲಾರಾ ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್, ನಾರ್ಥನ್ ಟ್ರಾನ್ಸವಲ್, ಸದರ್ನ್ ರಾಕ್ಸ್ ಮತ್ತು ವಾರ್ವಿಕ್‌ಶೈರ್ ತಂಡವನ್ನು ಪ್ರತಿನಿಧಿಸಿದ್ದಾರೆ.
ವೆಸ್ಟ್ ಇಂಡೀಸ್ ಪರ 132 ಟೆಸ್ಟ್ ಪಂದ್ಯಗಳ 232 ಇನಿಂಗ್ಸ್‌ಗಳನ್ನಾಡಿ 11,953 ರನ್ ಬಾರಿಸಿದ್ದಾರೆ. ಇದರಲ್ಲಿ 34 ಶತಕ ಹಾಗೂ 48 ಅರ್ಧಶತಕಗಳು ಸೇರಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅಜೇಯ 400 ರನ್ ಬಾರಿಸಿರುವುದು ಲಾರಾ ಹೆಸರಿನಲ್ಲಿ ಸದ್ಯಕ್ಕೆ ಅಚ್ಚಳಿಯದೇ ಉಳಿದಿರುವ ಗರಿಷ್ಠ ವೈಯುಕ್ತಿಕ ಸ್ಕೋರ್. ಇನ್ನು ಲಾರಾ 299 ಏಕದಿನ ಪಂದ್ಯಗಳನ್ನಾಡಿ 19 ಶತಕ, 63 ಅರ್ಧಶತಕ ಸಹಿತ 10,405 ರನ್ ಬಾರಿಸಿದ್ದಾರೆ.