T20 World Cup 2024: ಟೀಂ ಇಂಡಿಯಾದಲ್ಲಿ ಒಂದು ಸ್ಥಾನಕ್ಕಾಗಿ 6 ವಿಕೆಟ್ ಕೀಪರ್ ನಡುವೆ ಫೈಟ್..!
ಬೆಂಗಳೂರು: ಒಂದು ಕಡೆ 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಭರ್ಜರಿಯಾಗಿ ಸಾಗುತ್ತಿದೆ. ಮತ್ತೊಂದೆಡೆ ಸದ್ದಿಲ್ಲದೇ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಪ್ರಕ್ರಿಯೆ ಕೂಡಾ ನಡೆಯುತ್ತಿದೆ. ಹೀಗಿರುವಾಗಲೇ ಟಿ20 ವಿಶ್ವಕಪ್ ಟೂರ್ನಿಗೆ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆಯಲು ಆರು ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮುಗಿಯುತ್ತಿದ್ದಂತೆಯೇ ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ಜೂನ್ 04ರಿಂದ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಆರಂಭವಾಗಲಿದೆ.
ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ದೇಶದ ಹಲವು ಕ್ರಿಕೆಟಿಗರು ಐಪಿಎಲ್ ಅನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಭಾರತದ ವಿಕೆಟ್ ಕೀಪರ್ ಸ್ಥಾನಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಪೈಪೋಟಿ ಏರ್ಪಟ್ಟಿದೆ.
ಹೌದು, ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆಯಲು ಒಂದಲ್ಲ, ಎರಡಲ್ಲ ಬರೋಬ್ಬರಿ 6 ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ. ಅಷ್ಟಕ್ಕೂ ಯಾರು ಆ 6 ಮಂದಿ ಎನ್ನುವುದನ್ನು ನೋಡೋಣ ಬನ್ನಿ
1. ಇಶಾನ್ ಕಿಶನ್:
ಸ್ಪೋಟಕ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಐಪಿಎಲ್‌ನ ಮೊದಲ 8 ಪಂದ್ಯಗಳನ್ನಾಡಿ 192 ರನ್ ಬಾರಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಸ್ಪೋಟಕ ಆರಂಭ ಒದಗಿಸಿಕೊಡುತ್ತಿರುವ ಕಿಶನ್, ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ.
2. ರಿಷಭ್ ಪಂತ್:
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಬರೋಬ್ಬರಿ ಒಂದು ವರ್ಷದ ಬಳಿಕ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಪಂತ್ ತಾನಾಡಿದ ಮೊದಲ 8 ಪಂದ್ಯಗಳಲ್ಲಿ 2 ಅರ್ಧಶತಕ ಸಹಿತ 254 ರನ್ ಚಚ್ಚಿದ್ದಾರೆ. ಇದರ ಜತೆಗೆ ವಿಕೆಟ್ ಕೀಪಿಂಗ್‌ನಲ್ಲಿ 11 ಬಲಿ ಪಡೆದಿದ್ದು, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ.
3. ಸಂಜು ಸ್ಯಾಮ್ಸನ್:
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿದ್ದು, ಆಡಿದ ಮೊದಲ 8 ಐಪಿಎಲ್ ಪಂದ್ಯಗಳಿಂದ 3 ಅರ್ಧಶತಕ ಸಹಿತ 314 ರನ್ ಸಿಡಿಸಿದ್ದಾರೆ. ವಿಕೆಟ್ ಕೀಪಿಂಗ್‌ನಲ್ಲೂ 7 ಬಲಿ ಪಡೆದಿರುವ ಸಂಜು, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಲ್ಲ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದಾರೆ.
4. ಜಿತೇಶ್ ಶರ್ಮಾ:
ಪಂಜಾಬ್ ಕಿಂಗ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ, ಈಗಾಗಲೇ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ನೀರಸ ಪ್ರದರ್ಶನ ತೋರಿದ್ದು ಕೇವಲ 128 ರನ್ ಗಳಿಸಿದ್ದಾರೆ. ಇದರ ಹೊರತಾಗಿಯೂ ಜಿತೇಶ್ ಮುಂಬರುವ ಪಂದ್ಯಗಳಲ್ಲಿ ಮಿಂಚಿ ಆಯ್ಕೆ ಸಮಿತಿ ಗಮನ ಸೆಳೆಯುವ ವಿಶ್ವಾಸದಲ್ಲಿದ್ದಾರೆ.
5. ಕೆ ಎಲ್ ರಾಹುಲ್:
ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್ ಕೇವಲ 7 ಪಂದ್ಯಗಳಿಂದ 300 ರನ್ ಸಿಡಿಸಿದ್ದಾರೆ. ಅನುಭವಿ ಆಟಗಾರ ರಾಹುಲ್ ಕೂಡಾ ವಿಕೆಟ್ ಕೀಪರ್ ಬ್ಯಾಟರ್ ಆಗಿ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ.
6. ದಿನೇಶ್ ಕಾರ್ತಿಕ್:
ಒಂದು ತಿಂಗಳ ಹಿಂದಷ್ಟೇ ವಿಶ್ವಕಪ್ ಟೂರ್ನಿಗೆ ವಿಕೆಟ್ ಕೀಪರ್ ಸ್ಥಾನಕ್ಕೆ ಕೇವಲ 5 ಹೆಸರುಗಳಷ್ಟೇ ಚಾಲ್ತಿಯಲ್ಲಿದ್ದವು. ಆದರೆ ಆರ್‌ಸಿಬಿ ಪರ ದಿನೇಶ್ ಕಾರ್ತಿಕ್ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಡಿಕೆ 8 ಪಂದ್ಯಗಳಿಂದ 196ರ ಸ್ಟ್ರೈಕ್‌ರೇಟ್‌ನಲ್ಲಿ 251 ರನ್ ಸಿಡಿಸಿದ್ದು, ಮತ್ತೊಮ್ಮೆ ಭಾರತ ತಂಡದಲ್ಲಿ ಸ್ಥಾನ ಪಡೆದರೂ ಅಚ್ಚರಿಯಿಲ್ಲ.