ನೆಲ ಒರೆಸುವ ಕೆಲಸ ಬಿಟ್ಟು ಓಡಿ ಹೋಗಿದ್ದ ರಿಂಕು ಸಿಂಗ್ ಈಗ ಐಪಿಎಲ್ ಸೂಪರ್ ಸ್ಟಾರ್..!
ಬೆಂಗಳೂರು: ರಿಂಕು ಸಿಂಗ್ ಎನ್ನುವ ಹೆಸರು ದಿನಬೆಳಗಾಗುವುದರಲ್ಲಿ ಐಪಿಎಲ್ ಅಭಿಮಾನಿಗಳ ಮನೆಮಾತಾಗಿದೆ. ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ರತಿಭಾನ್ವಿತ ಸ್ಪೋಟಕ ಬ್ಯಾಟರ್ ರಿಂಕು ಸಿಂಗ್, ಗುಜರಾತ್ ಟೈಟಾನ್ಸ್ ಎದುರಿನ ಹೈವೋಲ್ಟೇಜ್ ಪಂದ್ಯದಲ್ಲಿ ರಿಂಕು ಸಿಂಗ್, ಕೊನೆಯ ಓವರ್‌ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಕಡುಬಡತನದ ಹಿನ್ನೆಲೆಯಿಂದ ಬಂದು ರಿಂಕು ಸಿಂಗ್ ಅವರ ವೈಯುಕ್ತಿಕ ಜೀವನದ ಬಗ್ಗೆ ನೀವೆಂದೂ ಕೇಳಿರದ ಕುತೂಹಲಕಾರಿ ಸಂಗತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.

ಉತ್ತರ ಪ್ರದೇಶದ ಆಲಿಘರ್ ಮೂಲದ ರಿಂಕು ಸಿಂಗ್, ಗುಜರಾತ್ ಟೈಟಾನ್ಸ್ ಎದುರು ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಅಸಾಧ್ಯ ಗೆಲುವು ತಂದುಕೊಟ್ಟಿದ್ದಾರೆ. ಕೊನೆಯ 5 ಎಸೆತಗಳಲ್ಲಿ ಕೆಕೆಆರ್ ಗೆಲ್ಲಲು 28 ರನ್ ಅಗತ್ಯವಿದ್ದಾಗ ಸತತ 5 ಸಿಕ್ಸರ್ ಸಿಡಿಸಿ ತಂಡಕ್ಕೆ ವಿರೋಚಿತ ಗೆಲುವು ತಂದುಕೊಟ್ಟಿದ್ದರು.
ಮೈದಾನಕ್ಕಿಳಿದರೆ, ಸಿಕ್ಸರ್‌ಗಳ ಮೇಲೆ ಸಿಕ್ಸರ್ ಸಿಡಿಸುವ ಎಡಗೈ ಬ್ಯಾಟರ್ ರಿಂಕು ಸಿಂಗ್, ಬಾಲ್ಯ ಹಾಗೂ ವೈಯುಕ್ತಿಕ ಜೀವನ ಗಮನಿಸಿದರೆ ಎಂತಹವರಿಗೂ ಅಚ್ಚರಿ ಹಾಗೂ ಸ್ಪೂರ್ತಿಯಾಗಬಲ್ಲರು. ಯಾಕೆಂದರೆ ರಿಂಕು ಕೆಸರಿನಲ್ಲಿ ಅರಳಿದ ಕಮಲ.
5 ಬಾಲ್‌ಗೆ 5 ಸಿಕ್ಸರ್ ಸಿಡಿಸಿದ ರಿಂಕು ಸಿಂಗ್ ನಮಗೆಲ್ಲರಿಗೂ ಗೊತ್ತಿರಬಹುದು. ಆದರೆ ಮನೆಯಿಂದ ಮನೆಗೆ ಸಿಲಿಂಡರ್‌ಗಳನ್ನು ಹೊತ್ತು ಡೆಲಿವರಿ ಕೊಡುತ್ತಿದ್ದ ರಿಂಕು ಬಗ್ಗೆ ಬಹುತೇಕರಿಗೆ ಗೊತ್ತಿರಲು ಸಾಧ್ಯವಿಲ್ಲ.
India Today ಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ರಿಂಕು ಸಿಂಗ್, ತಾವು ಬೆಳೆದು ಬಂದ ಹಾದಿಯನ್ನು ಮೆಲುಕು ಹಾಕಿದ್ದಾರೆ. ತಮ್ಮ ತಂದೆಗೆ ತಾವು ಕ್ರಿಕೆಟ್ ಆಡುವುದು ಇಷ್ಟವಿರಲಿಲ್ಲ ಎಂದು ರಿಂಕು ಹೇಳಿದ್ದರು.
25 ವರ್ಷದ ರಿಂಕು ಸಿಂಗ್ ಅವರ ತಂದೆ ಖಾನ್‌ಚಂದ್ ಸಿಂಗ್ ಓರ್ವ ಸಿಲಿಂಡರ್ ವಿತರಣೆಗಾರರಾಗಿ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ. ರಿಂಕು ತಂದೆ-ತಾಯಿ ಈಗಲೂ ಗ್ಯಾಸ್ ಸಿಲಿಂಡರ್‌ನಲ್ಲಿರುವ ಗೋಡನ್‌ನಲ್ಲಿಯೇ ಎರಡು ರೂಂನ ಚಿಕ್ಕ ಮನೆಯಲ್ಲಿ ಜೀವನ ನಡೆಸುತ್ತಾ ಬಂದಿದ್ದಾರೆ.
ನನ್ನದು ಒಂದು ರೀತಿ ಕಷ್ಟಕರ ಪಯಣವಾಗಿತ್ತು. ನನ್ನ ತಂದೆ ಕ್ರಿಕೆಟ್ ಆಡುವುದನ್ನು ಇಷ್ಟಪಡುತ್ತಿರಲಿಲ್ಲ. ನಾನು ನನ್ನ ಸಹೋದರನೊಂದಿಗೆ ಬೈಕ್‌ನಲ್ಲಿ ಸಿಲಿಂಡರ್‌ಗಳನ್ನು ಹೊತ್ತು ಮನೆ ಮನೆಗೆ ತಲುಪಿಸುತ್ತಿದ್ದೆವು. ಕ್ರಿಕೆಟ್ ಆಡುವುದಕ್ಕೆ ನಿಮ್ಮ ಅಪ್ಪನ ಸಮ್ಮತಿಯಿಲ್ಲವಾದ್ದರಿಂದ ನೀನು ಅವರಿಗೆ ಸಹಕರಿಸು ಎಂದು ಅಮ್ಮ ಕೂಡಾ ಹೇಳುತ್ತಿದ್ದರು.
ಇನ್ನು ನನ್ನ ಸಹೋದರ, ಕೋಚಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅಲ್ಲಿ ಕೆಲಸ ಮಾಡಲು ನಮ್ಮಣ್ಣ ನನ್ನನ್ನು ಕರೆದುಕೊಂಡು ಹೋದರು. ಅಲ್ಲಿ ಬೆಳಗ್ಗೆ ನನಗೆ ನೆಲ ಒರೆಸುವ ಕೆಲಸ ನೀಡಿದ್ದರು. ನಾನು ಆ ಕೆಲಸ ಬಿಟ್ಟು ಅಲ್ಲಿಂದ ಓಡಿ ಬಂದೆ. ಇದಾದ ಬಳಿಕ ನಾನು ಹೆಚ್ಚು ಹೆಚ್ಚು ಕ್ರಿಕೆಟ್‌ನತ್ತ ಗಮನ ಹರಿಸಲು ಆರಂಭಿಸಿದೆ ಎಂದು ರಿಂಕು ಹೇಳಿದ್ದಾರೆ.
ನಾನು ಗಟ್ಟಿಯಾಗಿ ನನ್ನ ನಿರ್ಧಾರವನ್ನು ತಿಳಿಸಿದೆ. ಹಾಗೂ ಕ್ರಿಕೆಟ್‌ನಲ್ಲೇ ನಾನು ಬದುಕು ಕಟ್ಟಿಕೊಳ್ಳಬೇಕು ಎನ್ನುವ ನಿರ್ಧರಕ್ಕೆ ಬದ್ದನಾಗಿದ್ದೆ. ಯಾಕೆಂದರೆ ನನಗೆ ಬೇರೆ ಆಯ್ಕೆ ಇರಲಿಲ್ಲ. ಹೀಗಾಗಿ ನನ್ನೆಲ್ಲ ಗಮನವನ್ನು ಕ್ರಿಕೆಟ್ ಮೇಲೆಯೇ ಕೇಂದ್ರೀಕರಿಸಿದೆ. ನಾನು ಆಗ ಕಷ್ಟಪಟ್ಟು ಅಭ್ಯಾಸ ನಡೆಸಿದ್ದಕ್ಕೆ ಈಗ ಫಲ ಸಿಗುತ್ತಿದೆ ಎಂದು ರಿಂಕು ನಗುವಿನ ಮಂದಹಾಸ ಬೀರಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.