IPL 2021: ಪಂದ್ಯ ಆರಂಭಕ್ಕೂ ಮುನ್ನ RCB ತಂಡಕ್ಕೆ ಎಚ್ಚರಿಕೆ ಕೊಟ್ಟ ಕೆಕೆಆರ್ ನಾಯಕ ಮಾರ್ಗನ್..!
ಅಬುಧಾಬಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಯುಎಇ ಚರಣದ ಪಂದ್ಯಗಳಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಮುಂಬೈ ಇಂಡಿಯನ್ಸ್ ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮೊದಲ ಪಂದ್ಯದಲ್ಲಿ ಧೋನಿ ನೇತೃತ್ವದ ಸಿಎಸ್‌ಕೆ ತಂಡವು 20 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಅರಬ್ಬರ ನಾಡಿನಲ್ಲಿ ಶುಭಾರಂಭ ಮಾಡಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ ನೈಟ್ ರೈಡರ್ಸ್ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಪಂದ್ಯ ಆರಂಭಕ್ಕೂ ಮುನ್ನ ಕೆಕೆಆರ್ ನಾಯಕ ಇಯಾನ್ ಮಾರ್ಗನ್ ಇನ್ನುಳಿದ ತಂಡಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ

ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿಂದು ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ತಂಡವು ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಭಾರತದಲ್ಲಿ ನಡೆದ ಮೊದಲಾರ್ಧದ ಐಪಿಎಲ್ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿ ಕೇವಲ 2 ಗೆಲುವು ದಾಖಲಿಸಿದ್ದ ಇಯಾನ್ ಮಾರ್ಗನ್ ನೇತೃತ್ವದ ಕೆಕೆಆರ್ ತಂಡವು ಇದೀಗ ಚರಣದಲ್ಲಿ ಕಮ್‌ಬ್ಯಾಕ್ ಮಾಡಲು ಹವಣಿಸುತ್ತಿದೆ.
ಇದೀಗ ಆರ್‌ಸಿಬಿ ವಿರುದ್ದದ ಪಂದ್ಯಕ್ಕೂ ಮುನ್ನ ಕೆಕೆಆರ್ ನಾಯಕ ಇಯಾನ್ ಮಾರ್ಗನ್ ಗುಡುಗಿದ್ದು, ಯುಎಇ ಚರಣದಲ್ಲಿ ಎದುರಾಳಿ ತಂಡಗಳ ಪಾಲಿಗೆ ತಾವು ಡೇಂಜರಸ್ ಆಗಬಲ್ಲೆವು ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ನಾವೀಗ ಒಂದೇ ಗುರಿ ಹಾಕಿಕೊಂಡಿದ್ದೇವೆ. ನಾವು ಯುಎಇ ಚರಣದಲ್ಲಿ ಸಂಪೂರ್ಣ ಹಿಡಿತ ಸಾಧಿಸಲಿದ್ದೇವೆ. ಇನ್ನು ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂದು ಕೆಕೆಆರ್ ತಂಡದ ನಾಯಕ ಮಾರ್ಗನ್ ಹೇಳಿದ್ದಾರೆ.
ಇಲ್ಲಿಂದ ನಾವು ಕಳೆದುಕೊಳ್ಳುವಂತಹದ್ದು ಏನೂ ಇಲ್ಲ. ಹೀಗಾಗಿ ತಂಡದ ಪ್ರತಿಯೊಬ್ಬರು ಯಾವುದೇ ಒತ್ತಡವಿಲ್ಲದೇ ಗೆಲುವಿಗಾಗಿ ಹೋರಾಟ ನಡೆಸಲಿದ್ದಾರೆ ಎಂದು ಇಯಾನ್ ಮಾರ್ಗನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಬುಧಾಬಿಯಲ್ಲಿ ನಾವೆಲ್ಲರೂ ಹೊಸದಾಗಿ ಒಗ್ಗೂಡಿದ್ದೇವೆ. ತಂಡದಲ್ಲಿನ ಪ್ರತಿಯೊಬ್ಬರು ಗೆಲುವಿಗಾಗಿ ಕಾತರಿಸುತ್ತಿದ್ದಾರೆ. ಇನ್ನುಳಿದ ಪಂದ್ಯಗಳು ತಮ್ಮ ಕಡೆ ವಾಲುವಂತೆ ಮಾಡಲು ಸಕಲ ಸಿದ್ದತೆ ನಡೆಸಿದ್ದಾರೆ ಎಂದು ಉಳಿದ ತಂಡಗಳಿಗೆ ಕೆಕೆಆರ್ ನಾಯಕ ಎಚ್ಚರಿಕೆ ನೀಡಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡವು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಕೆಕೆಆರ್ ತಂಡವು ಕೇವಲ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಕೆಕೆಆರ್ ತಂಡವು ತನ್ನ ಫ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ಇನ್ನುಳಿದ 7 ಪಂದ್ಯಗಳಲ್ಲಿ ಕನಿಷ್ಠ 5 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ಮಾರ್ಗನ್ ಪಡೆ ಮೈ ಚಳಿ ಬಿಟ್ಟು ಯುಎಇನಲ್ಲಿ ಅಬ್ಬರಿಸಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.