RCB vs CSK ಪಂದ್ಯ ರದ್ದಾದರೇ ಯಾರಿಗೆ ಲಾಭ? 5 ಓವರ್ ಪಂದ್ಯ ನಡೆದರೆ ಆರ್‌ಸಿಬಿ ಎಷ್ಟು ರನ್ ಬಾರಿಸಿದ್ರೆ ಪ್ಲೇ ಆಫ್‌ಗೇರುತ್ತೆ?
ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ 68ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ನಾವಿಂದು ಈ ಪಂದ್ಯ ಮಳೆಯಿಂದ ರದ್ದಾದರೇ ಯಾರಿಗೆ ಲಾಭ?, ಒಂದು ವೇಳೆ 5/10 ಓವರ್ ಪಂದ್ಯ ನಡೆದರೆ ಆರ್‌ಸಿಬಿ ಎಷ್ಟು ರನ್ ಬಾರಿಸಿ, ಎಷ್ಟು ರನ್ ಅಂತರದಲ್ಲಿ ಗೆದ್ದರೆ ಪ್ಲೇ ಆಫ್‌ಗೇರುತ್ತೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
17ನೇ ಆವೃತ್ತಿಯ ಬಹುನಿರೀಕ್ಷಿತ ಐಪಿಎಲ್ ಪಂದ್ಯವು ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಪ್ಲೇ ಆಫ್ ಪ್ರವೇಶಿಸುವ ನಿಟ್ಟಿನಲ್ಲಿ ಚೆನ್ನೈ ಹಾಗೂ ಬೆಂಗಳೂರು ತಂಡಗಳ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ.
ಸದ್ಯ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 13 ಪಂದ್ಯಗಳನ್ನಾಡಿ 7 ಗೆಲುವು ಹಾಗೂ 6 ಸೋಲುಗಳೊಂದಿಗೆ 14 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಸಿಎಸ್‌ಕೆ ನೆಟ್ ರನ್‌ರೇಟ್ +0.528 ಆಗಿದೆ. ಆರ್‌ಸಿಬಿ ಎದುರು ಪಂದ್ಯ ಗೆದ್ದರೆ ಸಿಎಸ್‌ಕೆ ಅನಾಯಾಸವಾಗಿ ಪ್ಲೇ ಆಫ್‌ಗೇರಲಿದೆ.
ಇನ್ನೊಂದೆಡೆ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 13 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 7 ಸೋಲು ಸಹಿತ 12 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಆರ್‌ಸಿಬಿ ನೆಟ್ ರನ್‌ರೇಟ್ +0.387 ಆಗಿದೆ. ಇಂದಿನ ಪಂದ್ಯದಲ್ಲಿ ದೊಡ್ಡ ಅಂತರದ ಗೆಲುವು ಬೆಂಗಳೂರು ತಂಡವನ್ನು ಪ್ಲೇ ಆಫ್‌ಗೇರುವಂತೆ ಮಾಡಲಿದೆ.
ಇನ್ನು ಒಂದು ವೇಳೆ ಆರ್‌ಸಿಬಿ ತಂಡವು ಚೆನ್ನೈ ನೆಟ್ ರನ್‌ರೇಟ್ ಹಿಂದಿಕ್ಕಬೇಕಿದ್ದರೇ, ಒಂದು ವೇಳೆ ಚೆನ್ನೈ 201 ರನ್ ಗುರಿ ನೀಡಿದರೆ ಬೆಂಗಳೂರು ತಂಡವು 18.1 ಓವರ್‌ನಲ್ಲಿ ಗೆಲುವು ಸಾಧಿಸಬೇಕು. ಅದೇ ಒಂದು ವೇಳೆ ಮೊದಲು ಬ್ಯಾಟ್ ಮಾಡಿದರೇ, ಆರ್‌ಸಿಬಿ ತಂಡವು 18 ರನ್ ಅಂತರದ ಗೆಲುವು ಸಾಧಿಸಬೇಕಿದೆ.
ಇನ್ನು ಇದೆಲ್ಲದರ ನಡುವೆ ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೇ, ಉಭಯ ತಂಡಗಳಿಗೆ ಒಂದೊಂದು ಅಂಕ ಹಂಚಲಾಗುತ್ತದೆ. ಆಗ 15 ಅಂಕಗಳೊಂದಿಗೆ ಸಿಎಸ್‌ಕೆ ತಂಡವು ಪ್ಲೇ ಆಫ್‌ಗೇರಲಿದೆ. ಇದೇ ವೇಳೆ ಆರ್‌ಸಿಬಿ ತಂಡದ ಪ್ಲೇ ಆಫ್ ಕನಸು ನುಚ್ಚುನೂರಾಗಲಿದೆ.
ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿ ಮಾಡಿ ತಲಾ 15 ಓವರ್‌ಗಳ ಪಂದ್ಯ ನಡೆದರೆ, ಆರ್‌ಸಿಬಿ ತಂಡವು ಮೊದಲು ಬ್ಯಾಟ್ ಮಾಡಿ 190 ರನ್ ಗಳಿಸಿ, ಚೆನ್ನೈ ತಂಡವನ್ನು 172 ರನ್‌ಗಳಿಗೆ ನಿಯಂತ್ರಿಸಬೇಕು. ಅಥವಾ 15 ಓವರ್ ಪಂದ್ಯದಲ್ಲಿ 190 ರನ್ ಗುರಿ ಸಿಕ್ಕಿದರೆ ಆರ್‌ಸಿಬಿ ತಂಡವು ಕೇವಲ 13.1 ಓವರ್‌ನಲ್ಲಿ ಆ ಗುರಿ ತಲುಪಬೇಕಿದೆ.
ಇನ್ನು ಒಂದು ವೇಳೆ 10 ಓವರ್ ಪಂದ್ಯ ನಡೆದರೆ, ಆರ್‌ಸಿಬಿ ಮೊದಲು ಬ್ಯಾಟರ್ ಮಾಡಿ 140 ರನ್ ಗಳಿಸಿದರೆ, ಚೆನ್ನೈ ತಂಡವನ್ನು 122 ರನ್‌ಗಳಿಗೆ ಕಟ್ಟಿಹಾಕಬೇಕಿದೆ. ಇನ್ನು ಆರ್‌ಸಿಬಿ 10 ಓವರ್‌ನಲ್ಲಿ 140 ರನ್ ಗುರಿ ಸಿಕ್ಕಿದರೆ 8.1 ಓವರ್‌ನಲ್ಲಿ ಗುರಿ ತಲುಪಬೇಕಿದೆ.
ಒಂದು ವೇಳೆ ಭಾರೀ ಮಳೆಯಿಂದಾಗಿ ಕೇವಲ 5 ಓವರ್‌ಗಳ ಪಂದ್ಯ ನಿಗದಿಯಾದರೆ, ಮೊದಲು ಬ್ಯಾಟ್ ಮಾಡಿ ಆರ್‌ಸಿಬಿ 90 ರನ್ ಗಳಿಸಬೇಕು. ಆ ನಂತರ ಚೆನ್ನೈ ತಂಡವನ್ನು 72 ರನ್‌ಗಳಿಗೆ ನಿಯಂತ್ರಿಸಬೇಕು. ಇಲ್ಲವೇ ಚೆನ್ನೈ 90 ರನ್ ಗುರಿ ನೀಡಿದರೆ, ಬೆಂಗಳೂರು ತಂಡವು ಕೇವಲ 3.1 ಓವರ್‌ನಲ್ಲಿ ಗುರಿ ತಲುಪಬೇಕಿದೆ.
ಪಂದ್ಯಕ್ಕೆ ಯಾವುದೇ ಮಳೆ ಅಡಚಣೆಯಾಗದೇ ಸಂಪೂರ್ಣ ಪಂದ್ಯ ನಡೆಯಲಿ, ಆರ್‌ಸಿಬಿ ತಂಡವು ಸಿಎಸ್‌ಕೆ ಪಡೆಯ ನೆಟ್ ರನ್‌ರೇಟ್ ಹಿಂದಿಕ್ಕಿ ಗೆಲುವು ಸಾಧಿಸಿ ಪ್ಲೇ ಆಫ್‌ಗೇರಲಿ ಎನ್ನುವುದು ಆರ್‌ಸಿಬಿ ಅಭಿಮಾನಿಗಳ ಹಾರೈಕೆಯಾಗಿದೆ.