IPL 2021: ಇಶಾನ್ ಕಿಶನ್ ಯಶಸ್ಸಿನ ಹಿಂದಿದೆ ವಿರಾಟ್ ಕೊಹ್ಲಿ ಕೈವಾಡ..!
ಅಬುಧಾಬಿ: ಯುಎಇ ಚರಣದ ಐಪಿಎಲ್ (IPL 2021) ಆರಂಭಿಕ ಪಂದ್ಯಗಳಲ್ಲಿ ಮಂಕಾಗಿದ್ದ ಮುಂಬೈ ಇಂಡಿಯನ್ಸ್ (Mumbai Indians) ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Ishan Kishan) ಕಳೆದೆರಡು ಐಪಿಎಲ್ ಪಂದ್ಯಗಳಲ್ಲಿ ಅಕ್ಷರಶಃ ಅಬ್ಬರಿಸುವ ಮೂಲಕ ಟಿ20 ವಿಶ್ವಕಪ್‌ಗೂ ಮುನ್ನ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ರನ್ ಬರ ಅನುಭವಿಸುತ್ತಿದ್ದ ಇಶಾನ್ ಕಿಶನ್ ಇದ್ದಕ್ಕಿದ್ದಂತೆ ಫಾರ್ಮ್ ಮರಳುವಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ (Virat Kohli) ಪಾತ್ರವಿದೆ. ಈ ವಿಚಾರವನ್ನು ಸ್ವತಃ ಇಶಾನ್ ಕಿಶನ್ ಒಪ್ಪಿಕೊಂಡಿದ್ದಾರೆ.
ईशान किशन
ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
(photo Source- Google)
Ishan Kishan
2021ನೇ ಸಾಲಿನ ಐಪಿಎಲ್ ಟೂರ್ನಿಯ ಆರಂಭಿಕ 8 ಪಂದ್ಯಗಳಲ್ಲಿ ಇಶಾನ್ ಕಿಶನ್ ಕೇವಲ 12ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 107 ರನ್ ಗಳಿಸಲಷ್ಟೇ ಝಾರ್ಖಂಡ್ ಮೂಲದ ಕ್ರಿಕೆಟಿಗ ಯಶಸ್ವಿಯಾಗಿದ್ದರು.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿಸ್ಪೋಟಕ ಕಳಪೆ ಫಾರ್ಮ್ ಅನುಭವಿಸುತ್ತಿದ್ದ ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ತಂಡದ ಆಡುವ ಹನ್ನೊಂದರ ಬಳಗದಿಂದಲೂ ಹೊರಬಿದ್ದು ನಿರಾಸೆ ಅನುಭವಿಸಿದ್ದರು.
ಇದಾದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕನಾಗಿ ಬಡ್ತಿ ಪಡೆದ ಇಶಾನ್ ಕಿಶನ್ ಕಳೆದೆರಡು ಪಂದ್ಯಗಳಲ್ಲಿ ಕೇವಲ 57 ಎಸೆತಗಳನ್ನು ಎದುರಿಸಿ 134 ರನ್ ಚಚ್ಚಿ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ.
ಅದರಲ್ಲೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದ ಇಶಾನ್ ಕಿಶನ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಸನ್‌ರೈಸರ್ಸ್ ಎದುರು 32 ಎಸೆತಗಳಲ್ಲಿ 84 ರನ್ ಚಚ್ಚುವ ಮೂಲಕ ಕಿಶನ್ ಮಿಂಚಿದರು.
ಮುಂಬರುವ ವಿಶ್ವಕಪ್ ಟೂರ್ನಿಗೂ ಮುನ್ನ ಫಾರ್ಮ್‌ಗೆ ಮರಳಿದ್ದು ನನಗೆ ಹಾಗೂ ತಂಡದ ದೃಷ್ಠಿಯಿಂದ ಸಾಕಷ್ಟು ಒಳ್ಳೆಯ ಬೆಳವಣಿಗೆ. ಇಂದಿನ ಪಂದ್ಯ ನಮ್ಮ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಹಾಗಾಗಿ ಪರಿಸ್ಥಿತಿಗನುಗುಣವಾಗಿ ಬ್ಯಾಟ್ ಬೀಸಿದೆ ಎಂದು ಕಿಶನ್ ಹೇಳಿದ್ದಾರೆ.
ಇದರೊಂದಿಗೆ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಮತ್ತೆ ಅಬ್ಬರಿಸುವ ಸೂಚನೆ ನೀಡಿದ್ದಾರೆ. ಇದೇ ವೇಳೆ ತಮ್ಮ ಯಶಸ್ಸಿನ ಹಿಂದೆ ವಿರಾಟ್ ಕೊಹ್ಲಿ ಸೇರಿದಂತೆ ಹಲವರ ಕೈವಾಡವಿದೆ ಎನ್ನುವುದನ್ನು ಪಂದ್ಯ ಮುಕ್ತಾಯದ ಬಳಿಕ ಒಪ್ಪಿಕೊಂಡಿದ್ದಾರೆ.
ಪ್ರತಿಯೊಂದು ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ದರಿರಬೇಕು. ಹೀಗಾಗಿ ಮನಸ್ಥಿತಿ ಸರಿಯಾಗಿರಬೇಕು. ನಾನು ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಹಾಗೂ ಕೀರನ್ ಪೊಲ್ಲಾರ್ಡ್ ಜತೆ ಮುಕ್ತವಾಗಿ ಮಾತನಾಡಿದ್ದು ನನಗೆ ನೆರವಾಯಿತು.
ಇದು ಕಲಿಕೆಯ ಸಮಯ, ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಒಮ್ಮೆ ಮಾಡಿದ ಮಿಸ್ಟೇಕ್‌ಗಳನ್ನು ಮತ್ತೆ ಮಾಡಬೇಡ ಎನ್ನುವ ಕಿವಿಮಾತು ಹೇಳಿದ್ದಾರೆ. ಇಂತಹ ಮಾತುಗಳಿಂದಲೇ ನಾನು ಸ್ಪೂರ್ತಿ ಪಡೆದಿದ್ದೇನೆ ಎಂದಿದ್ದಾರೆ.
ಮುಂಬರುವ ವಿಶ್ವಕಪ್ ಟೂರ್ನಿಗೆ ನೀನು ಆರಂಭಿಕನಾಗಿ ತಂಡಕ್ಕೆ ಆಯ್ಕೆಯಾಗಿದ್ದೀಯ. ಅದಕ್ಕಾಗಿ ನೀನು ಸಿದ್ದನಾಗಿರು ಎಂದು ವಿರಾಟ್ ಕೊಹ್ಲಿಯವರು ಹೇಳಿದ್ದಾರೆ. ನಾನು ಆರಂಭಿಕನಾಗಿ ಕಣಕ್ಕಿಳಿಯಲು ಇಷ್ಟಪಡುತ್ತೇನೆ ಎಂದು ಕಿಶನ್ ಹೇಳಿದ್ದಾರೆ.
5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ 41 ರನ್‌ಗಳ ಅಂತರದ ಗೆಲುವು ಸಾಧಿಸಿದರೂ ಪ್ಲೇ ಆಫ್ ಗೇರಲು ವಿಫಲವಾಗಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.