IPL Auction 2022: ಮೆಗಾ ಹರಾಜು ಆರಂಭ ಎಷ್ಟು ಗಂಟೆಯಿಂದ..? ಇಲ್ಲಿದೆ ಉತ್ತರ
ಬೆಂಗಳೂರು: ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ (IPL 2022) ಆಟಗಾರರ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಫೆಬ್ರವರಿ 12 ಹಾಗೂ 13ರಂದು ಐಪಿಎಲ್ ಆಟಗಾರರ ಹರಾಜು (IPL Auction) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯಲಿದೆ. ಇದೀಗ ಐಪಿಎಲ್ ಆಟಗಾರರ ಹರಾಜು ಎಷ್ಟು ಗಂಟೆಯಿಂದ ಆರಂಭವಾಗಲಿದೆ ಎನ್ನುವ ಕುತೂಹಲಕ್ಕೆ ಬಿಸಿಸಿಐ (BCCI) ತೆರೆ ಎಳೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬಹುನಿರೀಕ್ಷಿತ 15ನೇ ಆವೃತ್ತಿಯ ಟಾಟಾ ಐಪಿಎಲ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಬೆಂಗಳೂರು ಆತಿಥ್ಯವನ್ನು ವಹಿಸಲಿದ್ದು, ಎರಡು ದಿನಗಳ ಕಾಲ, ಅಂದರೆ ಫೆಬ್ರವರಿ 12 ಹಾಗೂ 13ರಂದು ಐಪಿಎಲ್ ಆಟಗಾರರ ಹರಾಜು ನಡೆಯಲಿದೆ.
ಇದೀಗ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಆರಂಭದ ಸಮಯ ಪ್ರಕಟವಾಗಿದ್ದು, ಫೆಬ್ರವರಿ 12ರಂದು ಬೆಳಗ್ಗೆ 11 ಗಂಟೆಯಿಂದ ಆಟಗಾರರ ಹರಾಜು ಆರಂಭವಾಗಲಿದೆ. ಎರಡೂ ದಿನವು ಬೆಳಗ್ಗೆ 11 ಗಂಟೆಯಿಂದ ಆಟಗಾರರ ಹರಾಜು ಆರಂಭವಾಗಲಿದೆ ಎಂದು ಐಪಿಎಲ್ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಮಾಹಿತಿ ಹೊರಬಿದ್ದಿದೆ.
ನಿಮ್ಮ ನೆಚ್ಚಿನ ತಂಡಗಳ ಭವಿಷ್ಯ ನಿರ್ಧಾರವಾಗುವ ಟಾಟಾ ಐಪಿಎಲ್ ಆಟಗಾರರ ಹರಾಜಿಗೆ ವೇದಿಕೆ ಸಜ್ಜಾಗಿದೆ. ಇಲ್ಲಿಂದಲೇ ಯಶಸ್ಸಿನ ದಾರಿ ಆರಂಭವಾಗಲಿದೆ. ಮೆಗಾ ಹರಾಜಿನ ಪ್ರತಿಕ್ಷಣದ ಮಾಹಿತಿಗಳನ್ನು ಫೆಬ್ರವರಿ 12 ಹಾಗೂ 13ರಂದು ಬೆಳಗ್ಗೆ 11 ಗಂಟೆಯಿಂದ ಫಾಲೋ ಮಾಡಿ ಎಂದು ಐಪಿಎಲ್ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿನಲ್ಲಿ ಒಟ್ಟು 10 ಫ್ರಾಂಚೈಸಿಗಳು ಪಾಲ್ಗೊಳ್ಳುತ್ತಿವೆ. ಹಳೆಯ 8 ತಂಡಗಳ ಜತೆಗೆ ಈ ಬಾರಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಅಹಮದಾಬಾದ್ ಟೈಟಾನ್ಸ್ ತಂಡಗಳು ಪಾಲ್ಗೊಳ್ಳುತ್ತಿವೆ.
ಐಪಿಎಲ್ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲು ಸಾವಿರಕ್ಕೂ ಅಧಿಕ ಮಂದಿ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಈ ಪೈಕಿ ಬಿಸಿಸಿಐ ಒಟ್ಟು 590 ಆಟಗಾರರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿದೆ. ಈ ಆಟಗಾರರಲ್ಲಿ ಎಲ್ಲಾ 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಬಹುದಾಗಿದೆ.
ಈ ಪೈಕಿ 48 ಆಟಗಾರರ ಮೂಲ ಬೆಲೆ 2 ಕೋಟಿ ರುಪಾಯಿಗಳು ನಿಗಧಿಯಾಗಿದ್ದರೆ, 20 ಆಟಗಾರರ ಬೆಲೆ 1.5 ಕೋಟಿ ರುಪಾಯಿ ಹಾಗೂ 34 ಆಟಗಾರರ ಮೂಲ ಬೆಲೆ ಒಂದು ಕೋಟಿ ರುಪಾಯಿಗಳೆಂದು ನಿಗದಿಯಾಗಿದೆ.