IPL ಹರಾಜು 2021: RCB ಆಯ್ಕೆಯ ಬಗ್ಗೆ ವಿರಾಟ್ ಕೊಹ್ಲಿ ಮೊದಲ ಪ್ರತಿಕ್ರಿಯೆ...
ಬೆಂಗಳೂರು: ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಚೆನ್ನೈನಲ್ಲಿ ಫೆಬ್ರವರಿ 18ರಂದು ನಡೆದ ಆಟಗಾರರ ಹರಾಜಿನಲ್ಲಿ ಸಾಕಷ್ಟು ಅಳೆದು-ತೂಗಿ ತಂಡಕ್ಕೆ ಅಗತ್ಯವಾಗಿ ಬೇಕಿದ್ದ 8 ಆಟಗಾರರನ್ನು ಖರೀದಿಸಿದೆ.
ಆಟಗಾರರ ಹರಾಜಿಗೂ ಮುನ್ನ 10 ಆಟಗಾರರನ್ನು ರಿಲೀಸ್ ಮಾಡಿದ್ದ ಬೆಂಗಳೂರು ಮೂಲದ ಫ್ರಾಂಚೈಸಿ, 14ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಕೈಲ್ ಜಾಮಿಸನ್, ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ತಾರಾ ಆಟಗಾರರ ಜತೆಗೆ ಅಜರುದ್ದೀನ್, ಸಚಿನ್ ಬೇಬಿ ಅವರಂತಹ ದೇಸಿ ಪ್ರತಿಭಾನ್ವಿತ ಆಟಗಾರರಿಗೂ ಮಣೆ ಹಾಕಿದೆ. ಹರಾಜಿನಲ್ಲಿ ಆರ್‌ಸಿಬಿ ಖರೀದಿಯ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಚೆನ್ನೈನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಒಟ್ಟು 8 ಆಟಗಾರರನ್ನು ಖರೀದಿಸಿದೆ.
ಇಂಗ್ಲೆಂಡ್ ವೇಗಿ ಕೈಲ್ ಜಾಮಿಸನ್‌ಗೆ 15 ಕೋಟಿ ರುಪಾಯಿ ನೀಡಿದರೆ, ಆಸ್ಟ್ರೇಲಿಯಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ 14.25 ಕೋಟಿ ನೀಡಿ ಖರೀದಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಇನ್ನು ಆಸ್ಟ್ರೇಲಿಯಾ ಆಲ್ರೌಂಡರ್ ಡೇನಿಯಲ್ ಕ್ರಿಸ್ಟಿಯನ್‌ಗೆ 4.80 ಕೋಟಿ ಹಾಗೂ ದೇಸಿ ಪ್ರತಿಭೆಗಳಾದ ಅಜರುದ್ದೀನ್, ಕೆ.ಎಸ್. ಭರತ್, ಸಚಿನ್ ಬೇಬಿ, ಸುಯಾಶ್ ಪ್ರಭುದೇಸಾಯಿ, ರಜತ್ ಪಾಟಿದಾರ್‌ರನ್ನು ಮೂಲ ಬೆಲೆ 20 ಲಕ್ಷ ರುಪಾಯಿಗೆ ಖರೀದಿಸಿದೆ.
ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ಆಡಳಿತ ಮಂಡಳಿ ಖರೀದಿಸಿದ ಆಟಗಾರರ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆರ್‌ಸಿಬಿ ಈ ಬಾರಿ ಉತ್ತಮ ಆಟಗಾರರನ್ನು ಖರೀದಿಸಿದೆ. ನಮಗೇನು ಬೇಕಿತ್ತೋ ಅಂತಹ ಆಟಗಾರರನ್ನೇ ಫ್ರಾಂಚೈಸಿ ಖರೀದಿಸಿದೆ ಎಂದು ಆರ್‌ಸಿಬಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಕೂಡಾ ಚೆನ್ನಾಗಿಯೇ ಆಡಿದ್ದೆವು. ಈ ಬಾರಿ ಕೆಲವು ಅತ್ಯುತ್ತಮ ಆಟಗಾರರು ತಂಡ ಸೇರಿಕೊಂಡಿರುವುದು ತಂಡದ ಸಮತೋಲನ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಸರಿಯಾದ ದಿಕ್ಕಿನಲ್ಲಿ ತಂಡ ಕಳೆದ ವರ್ಷಕ್ಕಿಂತ ಮತ್ತಷ್ಟು ಮುಂದೆ ಹೋಗುವ ವಿಶ್ವಾಸವನ್ನು ನಾಯಕ ಕೊಹ್ಲಿ ವ್ಯಕ್ತಪಡಿಸಿದ್ದಾರೆ.
ಮುಂದುವರೆದು, ನಮ್ಮ ತಂಡ ಅತ್ಯುತ್ತಮ ಅಭಿಮಾನಿಗಳ ಬೆಂಬಲ ಹೊಂದಿರುವ ತಂಡ ಎನ್ನುವ ಹೆಮ್ಮೆಯಿದೆ. ಮತ್ತೊಮ್ಮೆ ನಿಮ್ಮೆಲ್ಲರ ಬೆಂಬಲವನ್ನು ಎದುರು ನೋಡುತ್ತಿದ್ದೇವೆ ಎಂದು 32 ವರ್ಷದ ಕೊಹ್ಲಿ ಹೇಳಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶಿಸಿತ್ತಾದರೂ, ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಮುಗ್ಗರಿಸುವ ಮೂಲಕ ತನ್ನ ಹೋರಾಟ ಅಂತ್ಯಗೊಳಿಸಿಕೊಂಡಿತ್ತು.