ಬಿಸಿಸಿಐ ಹೊಸ ಐಪಿಎಲ್ ರೂಲ್ಸ್‌ನಿಂದ ಧೋನಿ ಸೇರಿ ಈ ನಾಲ್ವರಿಗೆ ಭರ್ಜರಿ ಲಾಭ!
ಬೆಂಗಳೂರು: ಇತ್ತೀಚೆಗಷ್ಟೇ ಬಿಸಿಸಿಐ ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಐಪಿಎಲ್ ರೀಟೈನ್ ರೂಲ್ಸ್ ಪ್ರಕಟಿಸಿದೆ. ಈ ಪೈಕಿ ಐಪಿಎಲ್ ಗವರ್ನಿಂಗ್ ಬಾಡಿ ಜಾರಿಗೆ ತಂದ ಒಂದು ರೂಲ್ಸ್, ಧೋನಿ ಸೇರಿದಂತೆ ಈ ನಾಲ್ಕು ಆಟಗಾರರಿಗೆ ಲಾಭವಾಗುವ ಸಾಧ್ಯತೆ ಹೆಚ್ಚಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಮುಂಬರುವ 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಬಿಸಿಸಿಐ, ಒಂದು ಫ್ರಾಂಚೈಸಿಯು ಗರಿಷ್ಠ 6 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಈ ಪೈಕಿ ಐದು ರೀಟೈನ್ ಹಾಗೂ ಒಂದು ಆರ್‌ಟಿಎಂ ಕಾರ್ಡ್ ಬಳಸಲು ಫ್ರಾಂಚೈಸಿಗೆ ಅವಕಾಶ ನೀಡಿದೆ.
ಇದಷ್ಟೇ ಅಲ್ಲದೇ ಆಟಗಾರರ ಖರೀದಿಗೆ (ಹರಾಜಿಗೂ ಮುನ್ನ ಹಾಗೂ ಹರಾಜಿನಲ್ಲಿ) ಫ್ರಾಂಚೈಸಿಗಳು ಗರಿಷ್ಠ 120 ಕೋಟಿ ರು. ವರೆಗೂ ಖರ್ಚು ಮಾಡಬಹುದಾಗಿದೆ. ಕಳೆದ ಆವೃತ್ತಿಗೆ ಹೋಲಿಸಿದರೆ 20 ಕೋಟಿ ರು. ಹೆಚ್ಚಳ ಮಾಡಲಾಗಿದೆ.
IPL Auction
ಎಲ್ಲಾ 6 ಆಟಗಾರರನ್ನು ಹರಾಜಿಗೆ ಮುನ್ನವೇ ಉಳಿಸಿಕೊಳ್ಳಬಹುದು ಅಥವಾ ರೀಟೈನ್ ಹಾಗೂ ಆರ್‌ಟಿಎಂ ಕಾರ್ಡ್ ಬಳಕೆ ಮೂಲಕ ಉಳಿಸಿಕೊಳ್ಳಬಹುದು. ಆರ್‌ಟಿಎಂ ಕಾರ್ಡ್‌ಗಳನ್ನು ಬಳಸಿಯೇ ಎಲ್ಲಾ 6 ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆಯನ್ನೂ ಬಿಸಿಸಿಐ ನೀಡಿದೆ.
ಇನ್ನು ಇದೆಲ್ಲದರ ಜತೆಗೆ ಯಾವುದೇ ತಂಡ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದರೆ, ಅದರಲ್ಲಿ ಅಂ.ರಾ. ಕ್ರಿಕೆಟ್ ಆಡದ ಭಾರತೀಯ ಆಟಗಾರ (ಅನ್‌ಕ್ಯಾಪ್ಡ್) ಒಬ್ಬ ಇರಲೇಬೇಕು ಎನ್ನುವ ನಿಯಮ ಪರಿಚಯಿಸಲಾಗಿದೆ.
ಇನ್ನು ಅನ್‌ಕ್ಯಾಪ್ಡ್ ಆಟಗಾರರ ವಿಚಾರದಲ್ಲೂ ಬಿಸಿಸಿಐ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಬಿಸಿಸಿಐ ತೆಗೆದುಕೊಂಡ ಈ ತೀರ್ಮಾನವು ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ನಾಲ್ವರು ಆಟಗಾರರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಏನಿದು ಅನ್‌ಕ್ಯಾಪ್ಡ್ ಹೊಸ ರೂಲ್ಸ್?
ಒಂದು ವೇಳೆ ಭಾರತೀಯ ಕ್ರಿಕೆಟಿಗನೊಬ್ಬ ಕಳೆದ 5 ವರ್ಷಗಳಿಂದ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳದೇ ಹೋದರೇ ಅಂತಹ ಆಟಗಾರರನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸುವ ರೂಲ್ಸ್ ಅನ್ನು ಬಿಸಿಸಿಐ ಮತ್ತೊಮ್ಮೆ ಜಾರಿಗೆ ತಂದಿದೆ. ಈ ರೂಲ್ಸ್ ಯಾರಿಗೆಲ್ಲಾ ಪ್ರಯೋಜನವಾಗಲಿದೆ ನೋಡೋಣ ಬನ್ನಿ
1. ಪೀಯೂಸ್ ಚಾವ್ಲಾ:
ಅನುಭವಿ ಲೆಗ್‌ಸ್ಪಿನ್ನರ್ ಪೀಯೂಸ್ ಚಾವ್ಲಾ 2012ರಲ್ಲಿ ಟೀಂ ಇಂಡಿಯಾ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಹೀಗಾಗಿ ಪೀಯೂಸ್ ಚಾವ್ಲಾಗೆ 4 ಕೋಟಿ ರುಪಾಯಿ ನೀಡಿ ಮುಂಬೈ ಇಂಡಿಯನ್ಸ್ ತಂಡವು ತನ್ನಲ್ಲೇ ಉಳಿಸಿಕೊಳ್ಳುವ ಸಾಧ್ಯತೆಯಿದೆ
2. ಮೋಹಿತ್ ಶರ್ಮಾ:
ಅನುಭವಿ ವೇಗಿ ಮೋಹಿತ್ ಶರ್ಮಾ, 2015ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಪ್ರತಿನಿಧಿಸಿದ್ದರು. ಹೀಗಾಗಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 4 ಕೋಟಿ ರುಪಾಯಿ ನೀಡಿ ಅನ್‌ಕ್ಯಾಪ್ಡ್ ರೂಲ್ಸ್‌ನಡಿ ಮೋಹಿತ್‌ರನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು.
3. ಸಂದೀಪ್ ಶರ್ಮಾ:
ಮಧ್ಯಮ ವೇಗದ ಬೌಲರ್ ಸಂದೀಪ್ ಶರ್ಮಾ 2015ರಲ್ಲಿ ಭಾರತ ಪರ ಕೊನೆಯ ಬಾರಿಗೆ ಟಿ20 ಪಂದ್ಯವನ್ನಾಡಿದ್ದರು. ಅನುಭವಿ ಪವರ್ ಪ್ಲೇ ಹಾಗೂ ಡೆತ್ ಓವರ್ ಸ್ಪೆಷಲಿಸ್ಟ್ ಆಗಿರುವ ಸಂದೀಪ್ ಶರ್ಮಾ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 4 ಕೋಟಿ ಕೊಟ್ಟು ಅನ್‌ಕ್ಯಾಪ್ಡ್ ಆಟಗಾರನಾಗಿ ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
4. ಎಂ ಎಸ್ ಧೋನಿ:
ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ 2019 ಏಕದಿನ ವಿಶ್ವಕಪ್ ವೇಳೆ ಕೊನೆಯ ಬಾರಿಗೆ ಟೀಂ ಇಂಡಿಯಾ ಪ್ರತಿನಿಧಿಸಿದ್ದರು. ಹೀಗಾಗಿ ಧೋನಿ ಇದೀಗ ಅನ್‌ಕ್ಯಾಪ್ಡ್ ಆಟಗಾರನಾಗಲು ಅರ್ಹತೆ ಪಡೆದುಕೊಂಡಿದ್ದಾರೆ. ಮೊಣಕಾಲು ಗಾಯದ ಸಮಸ್ಯೆಯ ಹೊರತಾಗಿಯೂ ಧೋನಿ ಮತ್ತೊಂದು ಬಾರಿ ಐಪಿಎಲ್‌ನಲ್ಲಿ ಕಣಕ್ಕಿಳಿಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.