IPL Auction 2024: RCBಯಿಂದ CSKವರೆಗೆ, ಯಾವ ಫ್ರಾಂಚೈಸಿ ಯಾವ ಆಟಗಾರನ ಮೇಲೆ ಕಣ್ಣಿಟ್ಟಿದೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಬೆಂಗಳೂರು: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಡಿಸೆಂಬರ್ 19ರ ಮಧ್ಯಾಹ್ನ 2.30ರಿಂದ ದುಬೈನಲ್ಲಿ ಆಟಗಾರರ ಹರಾಜು ಆರಂಭವಾಗಲಿದೆ. ಎಲ್ಲಾ 10 ಫ್ರಾಂಚೈಸಿಗಳು ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಸಜ್ಜಾಗಿವೆ. ಯಾವ ಫ್ರಾಂಚೈಸಿಯು ಯಾವ ಆಟಗಾರರನ್ನು ಖರೀದಿಸಬಹುದು ಎನ್ನುವ ನಿಮ್ಮ ಕುತೂಹಲಕ್ಕೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ ನೋಡಿ.
1. ಚೆನ್ನೈ ಸೂಪರ್ ಕಿಂಗ್ಸ್:
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಬಳಿ ಹರಾಜಿಗೆ ಪರ್ಸ್‌ನಲ್ಲಿ 31.4 ಕೋಟಿ ರುಪಾಯಿ ಉಳಿದುಕೊಂಡಿದೆ. ಹೀಗಾಗಿ ದೊಡ್ಡ ಮೊತ್ತಕ್ಕೆ ಸಿಎಸ್‌ಕೆ ಫ್ರಾಂಚೈಸಿಯು ಡೆತ್ ಓವರ್ ಸ್ಪೆಷಲಿಸ್ಟ್ ಶಾರ್ದೂಲ್ ಠಾಕೂರ್‌ಗೆ ಗಾಳ ಹಾಕುವ ಸಾಧ್ಯತೆಯಿದೆ.
ಸಿಎಸ್‌ಕೆ ಫ್ರಾಂಚೈಸಿಯು ಅಂಬಟಿ ರಾಯುಡು ಸ್ಥಾನ ತುಂಬಬಲ್ಲ ಕನ್ನಡಿಗ ಮನೀಶ್ ಪಾಂಡೆಗೆ ಮಣೆ ಹಾಕುವ ಸಾಧ್ಯತೆಯಿದೆ. ಇದರ ಜತೆಗೆ ಜೋಶ್ ಹೇಜಲ್‌ವುಡ್ ಹಾಗೂ ಶಾರ್ದೂಲ್ ಠಾಕೂರ್ ಖರೀದಿಸಲು ಸಿಎಸ್‌ಕೆ ಫ್ರಾಂಚೈಸಿ ಪೈಪೋಟಿ ನಡೆಸುವ ಸಾಧ್ಯತೆಯಿದೆ.
2. ಡೆಲ್ಲಿ ಕ್ಯಾಪಿಟಲ್ಸ್:
ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬಳಿ ಸದ್ಯ ಹರಾಜಿಗೆ 28.95 ಕೋಟಿ ರುಪಾಯಿ ಉಳಿದುಕೊಂಡಿದೆ. ಈ ಹರಾಜಿನಲ್ಲೂ ಡೆಲ್ಲಿ ಅಚ್ಚರಿ ರೀತಿಯಲ್ಲಿ ಖರೀದಿ ಮಾಡುವ ಸಾಧ್ಯತೆಯಿದೆ.
ಈ ಬಾರಿ ಡೆಲ್ಲಿ ಫ್ರಾಂಚೈಸಿಯು ಹರಾಜಿನಲ್ಲಿ ಹರ್ಷಲ್ ಪಟೇಲ್, ಶಾರ್ದೂಲ್ ಠಾಕೂರ್, ಜೋಶ್ ಇಂಗ್ಲಿಶ್, ವನಿಂದು ಹಸರಂಗ ಅವರನ್ನು ಖರೀದಿಸಲು ಒಲವು ತೋರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
3. ಗುಜರಾತ್ ಟೈಟಾನ್ಸ್:
ಕಳೆದ ಬಾರಿಯ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಬಳಿ ಸದ್ಯ ಹರಾಜಿಗೆ ಪರ್ಸ್‌ನಲ್ಲಿ 38.15 ಕೋಟಿ ರುಪಾಯಿ ಉಳಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಕೂಡಿಕೊಂಡಿರುವುದರಿಂದ ಸ್ಟಾರ್ ಆಲ್ರೌಂಡರ್ ಹುಡುಕಾಟದಲ್ಲಿದೆ ಗುಜರಾತ್.
ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಈ ಬಾರಿಯ ಹರಾಜಿನಲ್ಲಿ ಬಹುತೇಕ ಶಾರ್ದೂಲ್ ಠಾಕೂರ್, ರಚಿನ್ ರವೀಂದ್ರ, ಡೇರಲ್ ಮಿಚೆಲ್ ಹಾಗೂ ಆಫ್ಘಾನಿಸ್ತಾನದ ಅಝ್ಮತುಲ್ಲಾ ಒಮರ್‌ಝೈ ಅವರನ್ನು ಖರೀದಿಸುವ ಸಾಧ್ಯತೆಯಿದೆ.
4. ಕೋಲ್ಕತಾ ನೈಟ್ ರೈಡರ್ಸ್:
ಎರಡು ಬಾರಿಯ ಐಪಿಎಲ್ ಚಾಂಪಿಯನ್ ಎನಿಸಿಕೊಂಡಿರುವ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಹರಾಜಿಗೆ ಬರೋಬ್ಬರಿ 32.70 ಕೋಟಿ ರುಪಾಯಿ ಉಳಿಸಿಕೊಂಡಿದೆ. ಹೀಗಾಗಿ ಕೆಕೆಆರ್ ಫ್ರಾಂಚೈಸಿ ದೊಡ್ಡ ಪ್ಲೇಯರ್ಸ್‌ಗೆ ಗಾಳ ಹಾಕುವ ಸಾಧ್ಯತೆಯಿದೆ.
ಹಲವು ವರದಿಗಳ ಪ್ರಕಾರ ಕೆಕೆಆರ್ ಫ್ರಾಂಚೈಸಿಯು ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ರಚಿನ್ ರವೀಂದ್ರ ಹಾಗೂ ಹರ್ಷಲ್ ಪಟೇಲ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಹೆಚ್ಚು ಬಿಡ್ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
5. ಲಖನೌ ಸೂಪರ್ ಜೈಂಟ್ಸ್:
ಕೆ ಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಹರಾಜಿಗೂ ಮುನ್ನವೇ ಕೆಲವು ಟ್ರೇಡಿಂಗ್ ನಡೆಸಿದ್ದು, ಇದೀಗ ಹರಾಜಿಗೆ ಕೇವಲ 13.15 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.
ಲಖನೌ ಫ್ರಾಂಚೈಸಿಯು ದಕ್ಷಿಣ ಆಫ್ರಿಕಾದ ಗೆರಾಲ್ಡ್ ಕೋಟ್ಜಿ, ಲಂಕಾದ ದಿಲ್ಷ್ಶಾನ್ ಮಧುಶಂಕ ಹಾಗೂ ಇಂಗ್ಲೆಂಡ್ ಮೂಲದ ವೇಗಿ ಮಾರ್ಕ್ ವುಡ್ ಅವರನ್ನು ಖರೀದಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
6. ಮುಂಬೈ ಇಂಡಿಯನ್ಸ್:
5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಬಳಿ ಸದ್ಯ ಆಟಗಾರರ ಹರಾಜಿಗೆ ತನ್ನ ಪರ್ಸ್‌ನಲ್ಲಿ 17.75 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ. ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ ಸೇರ್ಪಡೆ ಮುಂಬೈಗೆ ಆನೆ ಬಲ ಬಂದಂತೆ ಆಗಿದೆ.
ಈ ಬಾರಿಯ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ವನಿಂದು ಹಸರಂಗ ಅವರನ್ನು ಖರೀದಿಸಲು ಒಲವು ತೋರುವ ಸಾಧ್ಯತೆಯಿದೆ. ಇನ್ನುಳಿದಂತೆ ದೇಶಿ ಕ್ರಿಕೆಟ್‌ನಲ್ಲಿ ಮಿಂಚಿರುವ ಮಾನವ್ ಸುತಾರ್, ಅಶುತೋಶ್ ಶರ್ಮಾ ಅಥವಾ ದರ್ಶನ್ ಮಿಶಾಲ್ ಅವರನ್ನು ಖರೀದಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
7. ಸನ್‌ರೈಸರ್ಸ್ ಹೈದರಾಬಾದ್:
ಹರಾಜಿಗೂ ಮುನ್ನ ಹಲವು ಆಟಗಾರರಿಗೆ ಗೇಟ್‌ಪಾಸ್ ನೀಡಿರುವ ಆರೆಂಜ್ ಆರ್ಮಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಇದೀಗ ಹರಾಜಿಗೆ 34 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.
ಈ ಬಾರಿಯ ಹರಾಜಿನಲ್ಲಿ ಆರೆಂಜ್ ಆರ್ಮಿ ಟೀಂ ಇಂಡಿಯಾ ಅನುಭವಿ ಬೌಲಿಂಗ್ ಆಲ್ರೌಂಡರ್‌ಗಳಾದ ಶಾರ್ದೂಲ್ ಠಾಕೂರ್ ಹಾಗೂ ಹರ್ಷಲ್ ಪಟೇಲ್ ಅವರನ್ನು ತನ್ನತ್ತ ಸೆಳೆದುಕೊಳ್ಳಲು ಸಾಕಷ್ಟು ಪೈಪೋಟಿ ನಡೆಸುವ ಸಾಧ್ಯತೆಯಿದೆ.
8. ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಆರ್‌ಸಿಬಿ ಫ್ರಾಂಚೈಸಿಯು ಇದೀಗ ಮಿನಿ ಹರಾಜಿಗೆ ತನ್ನ ಪರ್ಸ್‌ನಲ್ಲಿ 23.25 ಕೋಟಿ ರುಪಾಯಿ ಉಳಿಸಿಕೊಂಡಿದೆ. ಆರ್‌ಸಿಬಿ ಫ್ರಾಂಚೈಸಿಯು ಈಗಾಗಲೇ ಆಸೀಸ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಟ್ರೇಡಿಂಗ್ ಮಾಡಿ ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಮೇಲ್ನೋಟಕ್ಕೆ ಸಾಕಷ್ಟು ಸಮತೋಲನದಿಂದ ಕೂಡಿದಂತೆ ಕಂಡು ಬರುತ್ತಿದ್ದು, ಇದೀಗ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಅವರನ್ನು ಖರೀದಿಸಲು ಹೆಚ್ಚು ಒಲವು ತೋರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
9. ಪಂಜಾಬ್ ಕಿಂಗ್ಸ್:
ಆರ್‌ಸಿಬಿಯಂತೆ ಪಂಜಾಬ್ ಕಿಂಗ್ಸ್ ಕೂಡಾ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿದೆ. ಸದ್ಯ ಪಂಜಾಬ್ ಫ್ರಾಂಚೈಸಿಯು ಹರಾಜಿಗಾಗಿ ಪರ್ಸ್‌ನಲ್ಲಿ 29.10 ಕೋಟಿ ರುಪಾಯಿ ಉಳಿಸಿಕೊಂಡಿದೆ.
ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಈ ಬಾರಿಯ ಆಟಗಾರರ ಹರಾಜಿನಲ್ಲಿ ಶಾರ್ದೂಲ್ ಠಾಕೂರ್, ಹರ್ಷಲ್ ಪಟೇಲ್, ರಚಿನ್ ರವೀಂದ್ರ ಅವರನ್ನು ಖರೀದಿಸಲು ಉಳಿದ ಫ್ರಾಂಚೈಸಿಗಳಿಗೆ ಪೈಪೋಟಿ ನೀಡುವ ಸಾಧ್ಯತೆಯಿದೆ.
10. ರಾಜಸ್ಥಾನ ರಾಯಲ್ಸ್:
ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಬಹುತೇಕ ತಮ್ಮ ಹಳೆಯ ತಂಡವನ್ನು ಉಳಿಸಿಕೊಂಡಿದ್ದು, ಇದೀಗ ಹರಾಜಿಗೆ ಕೇವಲ 14.50 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.
ಇದೀಗ ಈ ಬಾರಿಯ ಹರಾಜಿನಲ್ಲಿ ರಾಜಸ್ಥಾನ ಫ್ರಾಂಚೈಸಿಯು ದೇಶಿ ಕ್ರಿಕೆಟ್‌ನಲ್ಲಿ ಗಮನ ಸೆಳೆದ ಸಮೀರ್ ರಿಜ್ವಿ, ಸ್ವಸ್ತಿಕ್ ಚಿಕ್ಕಾರ, ಅಶುತೋಶ್ ಶರ್ಮಾ, ಅಭಿಮನ್ಯು ಸಿಂಗ್ ಅವರಂತಹ ಆಟಗಾರರನ್ನು ಖರೀದಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.