- Home
- Sports
- Cricket
- IPL 2023: ಈ ಮೂವರನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಬೆಲೆ ತೆರುತ್ತಾ ರಾಯಲ್ ಚಾಲೆಂಜರ್ಸ್ ಬೆಂಗಳೂರು..?
IPL 2023: ಈ ಮೂವರನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಬೆಲೆ ತೆರುತ್ತಾ ರಾಯಲ್ ಚಾಲೆಂಜರ್ಸ್ ಬೆಂಗಳೂರು..?
ಬೆಂಗಳೂರು(ಫೆ.06): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿಹೆಚ್ಚು ಮನರಂಜನೆ ನೀಡಿದ ತಂಡವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಪ್ರತಿ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡು ಕಣಕ್ಕಿಳಿಯುವ ಆರ್‌ಸಿಬಿ, ಇದುವರೆಗೂ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. 3 ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ಆರ್‌ಸಿಬಿ, ಈ ಬಾರಿ ಕೂಡಾ ಮತ್ತೊಮ್ಮೆ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿದೆ.ಕಳೆದ ಕೆಲವರ್ಷಗಳಿಂದ ಆರ್‌ಸಿಬಿ ಕೆಲವು ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದರೇ, ಮತ್ತೆ ಹಲವರನ್ನು ರಿಲೀಸ್ ಮಾಡಿದೆ. ಈ ಹಿಂದೆ ಆರ್‌ಸಿಬಿ ಪ್ರತಿನಿಧಿಸಿದ್ದ ಆಟಗಾರರ ಪೈಕಿ ಕೆಲವು ಆಟಗಾರರು ಇದೀಗ, ಬೆಂಗಳೂರು ಕಪ್ ಗೆಲ್ಲಲು ಅಡ್ಡಗಾಲು ಹಾಕುವ ಸಾಧ್ಯತೆಯಿದೆ. ಕ್ವಿಂಟನ್ ಡಿ ಕಾಕ್, ವಾಷಿಂಗ್ಟನ್ ಸುಂದರ್ ಹಾಗೂ ಯುಜುವೇಂದ್ರ ಚಹಲ್ ಹೊರತುಪಡಿಸಿ, ಆರ್‌ಸಿಬಿ ಕೈಬಿಟ್ಟ ಆಟಗಾರರಿಂದ ಮುಂದೆ ಬೆಲೆ ತೆರಬೇಕಾದ ಸಾಧ್ಯತೆಯಿದೆ. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

3. ಶಿಮ್ರೊನ್ ಹೆಟ್ಮೇಯರ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟರ್ ಶಿಮ್ರೊನ್ ಹೆಟ್ಮೇಯರ್, ಅವರನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿತ್ತು. ಆರ್‌ಸಿಬಿ ಪರ ಹೆಟ್ಮೇಯರ್ ಕೇವಲ 5 ಪಂದ್ಯಗಳನ್ನಾಡಿ 18ರ ಸರಾಸರಿಯಲ್ಲಿ 90 ರನ್ ಗಳಿಸಲಷ್ಟೇ ಯಶಸ್ವಿಯಾಗಿದ್ದರು.
ಒಮ್ಮೆ ಆರ್‌ಸಿಬಿ ಪರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆಟ್ಮೇಯರ್, 75 ರನ್ ಚಚ್ಚಿದ್ದರು. ಇದು ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಹೆಟ್ಮೇಯರ್ ಬಾರಿಸಿದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು. ಇದಾದ ಬಳಿಕ ಹೆಟ್ಮೇಯರ್ ಅವರನ್ನು ಆರ್‌ಸಿಬಿ ತಂಡದಿಂದ ಕೈಬಿಟ್ಟಿತು.
ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಂಚಿದ ಹೆಟ್ಮೇಯರ್ ಅವರನ್ನು 2021ರ ಆಟಗಾರರ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಾಯಲ್ಸ್ ಪರ ಹೆಟ್ಮೇಯರ್ 15 ಪಂದ್ಯಗಳನ್ನಾಡಿ 39.25ರ ಬ್ಯಾಟಿಂಗ್ ಸರಾಸರಿಯಲ್ಲಿ 314 ರನ್ ಸಿಡಿಸಿದ್ದರು. ಹೆಟ್ಮೇಯರ್ ಕೈಬಿಟ್ಟ ಆರ್‌ಸಿಬಿ ಈಗ ಪೇಚಿಗೆ ಸಿಲುಕಿದೆ.
2. ಆವೇಶ್ ಖಾನ್:
ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಪರ ಮಿಂಚುತ್ತಿರುವ ಆವೇಶ್ ಖಾನ್, ಐಪಿಎಲ್‌ನಲ್ಲಿ ಪಾದಾರ್ಪಣೆ ಮಾಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ ಎನ್ನುವುದು ಬಹುತೇಕ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿಲ್ಲ.
ಆವೇಶ್ ಖಾನ್ 2017ರಲ್ಲಿ ಆರ್‌ಸಿಬಿ ಪರ ಕಣಕ್ಕಿಳಿದು 23 ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ದರು. ಹೆಟ್ಮೇಯರ್ ಅವರಂತೆ ಆವೇಶ್ ಖಾನ್ ಅವರನ್ನು 2019ರ ಮೆಗಾ ಹರಾಜಿಗೂ ಮುನ್ನ ತಂಡದಿಂದ ಕೈಬಿಡಲಾಯಿತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಕೂಡಿಕೊಂಡ ಆವೇಶ್ ಖಾನ್, 2021ರ ಐಪಿಎಲ್ ಟೂರ್ನಿ ಆವೇಶ್ ಖಾನ್ 24 ವಿಕೆಟ್ ಕಬಳಿಸುವ ಮೂಲಕ ಎರಡನೇ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು.
ಇನ್ನು ಇದಾದ ಬಳಿಕ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ತೆಕ್ಕೆಗೆ ಸೇರಿದ ಆವೇಶ್ ಖಾನ್ 18 ವಿಕೆಟ್ ಕಬಳಿಸಿ ಮಿಂಚಿದ್ದರು. ಆರ್‌ಸಿಬಿ ಕೈಬಿಟ್ಟ ಬಳಿಕ ಆವೇಶ್ ಖಾನ್, ಮಾರಕ ವೇಗಿಯಾಗಿ ಬೆಳೆಯುತ್ತಿದ್ದು, ಆರ್‌ಬಿಸಿ ಬಲಗೈ ವೇಗಿಯನ್ನು ಕೈಬಿಟ್ಟು ಮತ್ತೊಂದು ಎಡವಟ್ಟು ಮಾಡಿದಂತಾಗಿದೆ
1. ಟಿಮ್ ಡೇವಿಡ್
ಸಿಂಗಾಪುರ ಮೂಲದ ಸ್ಪೋಟಕ ಬ್ಯಾಟರ್ ಟಿಮ್ ಡೇವಿಡ್ 2021ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆರ್‌ಸಿಬಿ ಪರ ಟಿಮ್ ಡೇವಿಡ್ ಕೇವಲ ಒಂದು ಪಂದ್ಯವನ್ನಾಡಿ ಒಂದು ರನ್ ಅಷ್ಟೇ ಗಳಿಸಿದ್ದರು.
ಇದಾದ ಬಳಿಕ ಆರ್‌ಸಿಬಿ ಟಿಮ್ ಡೇವಿಡ್ ಅವರನ್ನು 2022ರ ಐಪಿಎಲ್ ಟೂರ್ನಿಗೂ ಮುನ್ನ ತಂಡದಿಂದ ಕೈಬಿಟ್ಟಿತು. ಪೊಲ್ಲಾರ್ಡ್‌ಗೆ ಬದಲಿ ಆಟಗಾರನ ರೂಪದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಟಿಮ್ ಡೇವಿಡ್‌ರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಮುಂಬೈ ಪರ ಟಿಮ್ ಡೇವಿಡ್ 8 ಪಂದ್ಯಗಳನ್ನಾಡಿ 37.2ರ ಬ್ಯಾಟಿಂಗ್ ಸರಾಸರಿಯಲ್ಲಿ 186 ರನ್ ಸಿಡಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಟಿಮ್ ಡೆವಿಡ್ ಒಳ್ಳೆಯ ಮ್ಯಾಚ್ ಫಿನಿಶರ್ ಎನಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಹಾಕುತ್ತಿದ್ದಾರೆ. ಟಿಮ್ ಡೆವಿಡ್‌ರನ್ನು ಕೈಬಿಟ್ಟು ಆರ್‌ಸಿಬಿ ದೊಡ್ಡ ಎಡವಟ್ಟೇ ಮಾಡಿಕೊಂಡಿದೆ.