IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕ ಯಾರು..?
ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿರುವುದರಿಂದ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಭರ್ಜರಿ ಮನರಂಜನೆ ದೊರೆಯುವ ಸಾಧ್ಯತೆಯಿದೆ. ಇದೆಲ್ಲದರ ನಡುವೆ ರಾಯಲ್ ಚಾಲೆಂಜರ್ಸ್ (Royal Challengers Bangalore) ಬೆಂಗಳೂರು ತಂಡದ ನಾಯಕ ಯಾರಾಗಲಿದ್ದಾರೆ ಎನ್ನುವ ಕುತೂಹಲ ಸಾಕಷ್ಟು ಜೋರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 26ರಿಂದ ಮೇ29ರ ವರೆಗೆ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿದ್ದು, ಲೀಗ್ ಹಂತದ ಪಂದ್ಯಗಳಿಗೆ ಮುಂಬೈ ಹಾಗೂ ಪುಣೆಯ ನಾಲ್ಕು ಮೈದಾನಗಳು ಆತಿಥ್ಯವನ್ನು ವಹಿಸಲಿವೆ.
15ನೇ ಅವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿರುವುದರಿಂದ ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ. ಈ ಬಾರಿಯ ಐಪಿಎಲ್ ಟೂರ್ನಿಯು ಭಾರತದಲ್ಲೇ ನಡೆಯುತ್ತಿರುವುದು ಕ್ರಿಕೆಟ್ ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸಿದೆ.
ಇದೆಲ್ಲದರ ಹೊರತಾಗಿ ಇದೀಗ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಮುಂಬರುವ 2022ನೇ ಸಾಲಿನ ಐಪಿಎಲ್ ಟೂರ್ನಿಗೆ ತನ್ನ ತಂಡದ ನಾಯಕನನ್ನಾಗಿ ಮಯಾಂಕ್ ಅಗರ್‌ವಾಲ್ ಅವರನ್ನು ನೇಮಕ ಮಾಡಿಕೊಂಡಿದೆ. ಕನ್ನಡಿಗ ಮಯಾಂಕ್ ಅಗರ್‌ವಾಲ್ 2018ರಿಂದಲೂ ಪಂಜಾಬ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.
ಪಂಜಾಬ್ ಫ್ರಾಂಚೈಸಿಯು ಮಯಾಂಕ್ ಅಗರ್‌ವಾಲ್ ಅವರನ್ನು ನಾಯಕನನ್ನಾಗಿ ನೇಮಕ ಮಾಡಿಕೊಳ್ಳುತ್ತಿದ್ದಂತೆಯೇ ಒಟ್ಟು 9 ತಂಡಗಳಿಗೆ ನಾಯಕರು ಅಂತಿಮವಾದಂತೆ ಆಗಿದೆ. ಇದುವರೆಗೂ ಆರ್‌ಸಿಬಿ ಮಾತ್ರ ಈ ಬಾರಿಯ ಐಪಿಎಲ್‌ಗೆ ತನ್ನ ತಂಡವನ್ನು ಮುನ್ನಡೆಸುವ ನಾಯಕ ಯಾರು ಎನ್ನುವ ವಿಚಾರವನ್ನು ಬಹಿರಂಗಪಡಿಸಿಲ್ಲ.
2021ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪ್ಲೇ ಆಫ್‌ನಲ್ಲಿ ತನ್ನ ಅಭಿಯಾನ ಮುಗಿಸುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಮೊದಲೇ ಘೋಷಿಸಿದಂತೆ ತಮ್ಮ ನಾಯಕತ್ವ ಸ್ಥಾನಕ್ಕೆ ಗುಡ್ ಬೈ ಹೇಳಿದ್ದರು. ಹೀಗಾಗಿ ಆರ್‌ಸಿಬಿ ಫ್ರಾಂಚೈಸಿಯು ಹೊಸ ನಾಯಕನ ಹುಡುಕಾಟದಲ್ಲಿದೆ.
(photo Source- Instagram)
ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿಯು ನಾಯಕತ್ವದಲ್ಲಿ ಸಾಕಷ್ಟು ಅನುಭವ ಹೊಂದಿರುವ ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್ ಅವರಂತಹ ಆಟಗಾರರನ್ನು ಖರೀದಿಸಿದೆ. ಈ ಪೈಕಿ ಒಬ್ಬರು ಆರ್‌ಸಿಬಿ ನಾಯಕರಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಕಳೆದ 14 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡರೂ ಸಹ ಕಪ್ ಗೆಲ್ಲಲು ವಿಫಲವಾಗುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೊಸ ನಾಯಕತ್ವದಡಿಯಲ್ಲಿ ಕಪ್ ಗೆದ್ದು ಇತಿಹಾಸ ಬರೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.