IPL 2022: ಮಾರ್ಚ್ 12ಕ್ಕೆ RCB ಹೊಸ ನಾಯಕನ ಘೋಷಣೆ..?
ಬೆಂಗಳೂರು: ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯ ಅರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 26ರಿಂದ ಮುಂಬೈನ ವಾಂಖೆಡೆ ಮೈದಾನದಲ್ಲಿ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಚಾಲನೆ ಸಿಗಲಿದೆ. ಇದೆಲ್ಲದರ ನಡುವೆ ಆರ್‌ಸಿಬಿ (RCB) ಫ್ರಾಂಚೈಸಿಯು ಇನ್ನೂ ತನ್ನ ನಾಯಕನ ಹೆಸರನ್ನು ಘೋಷಿಸಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಆರ್‌ಸಿಬಿಯಿಂದ ಹೊಸ ನಾಯಕನ ಹುಡುಕಾಟ
14ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ ತಮ್ಮ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದರು. ಇದೀಗ ಬೆಂಗಳೂರು ಫ್ರಾಂಚೈಸಿಯು ಹೊಸ ನಾಯಕನ ಹುಡುಕಾಟದಲ್ಲಿದೆ.
ಐಪಿಎಲ್ ಹರಾಜು
ಚೊಚ್ಚಲ ಐಪಿಎಲ್ ಟ್ರೋಫಿಯ ಹುಡುಕಾಟದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಕಳೆದ ತಿಂಗಳು ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.
RCB Squad
ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಮಾರ್ಚ್ 12ಕ್ಕೆ ನೂತನ ನಾಯಕನನ್ನು ಘೋಷಿಸಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸೋಮವಾರ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸುಳಿವು ನೀಡಲಾಗಿದೆ.
ಫಾಫ್ ಡು ಪ್ಲೆಸಿಸ್ ನಾಯಕ?
ವಿರಾಟ್ ಕೊಹ್ಲಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಫಾಫ್ ಡು ಪ್ಲೆಸಿಸ್ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಫಾಫ್ ಡು ಪ್ಲೆಸಿಸ್ ಈ ಹಿಂದೆ ದಕ್ಷಿಣ ಆಫ್ರಿಕಾ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದರು.
ಆಸ್ಪ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ನಾಯಕ ಸ್ಥಾನದ ರೇಸ್‌ನಲ್ಲಿದ್ದರೂ ಫ್ರಾಂಚೈಸಿಯು ನಾಯಕತ್ವ ಅನುಭವವಿರುವ ಡು ಪ್ಲೆಸಿಗೆ ಮಣೆ ಹಾಕಲಿದೆ ಎಂದು ಗೊತ್ತಾಗಿದೆ. ಹರಾಜಿನಲ್ಲಿ ತಂಡ ಅವರನ್ನು 7 ಕೋಟಿ ರು.ಗೆ ಖರೀದಿಸಿತ್ತು.
ಕಳೆದ ಆವೃತ್ತಿಯಲ್ಲಿ ಅಬ್ಬರಿಸಿದ್ದ ಡು ಪ್ಲೆಸಿಸ್
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಟೂರ್ನಿಯಲ್ಲಿ ಆರಂಭಿಕ ಬ್ಯಾಟರ್ ಡು ಪ್ಲೆಸಿಸ್ ಎರಡನೇ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದರು.