IPL 2022: ಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ಟಾಪ್ 5 ಕ್ರಿಕೆಟಿಗರಿವರು..!
ಬೆಂಗಳೂರು: ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 26ರಿಂದ ಮುಂಬೈನ ವಾಂಖೆಡೆ ಮೈದಾನದಲ್ಲಿ 2022ನೇ ಸಾಲಿನ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಈ ಬಾರಿ ಗುಜರಾತ್ ಟೈಟಾನ್ಸ್ ಹಾಗೂ ಲಖನೌ ಸೂಪರ್‌ಜೈಂಟ್ಸ್ ತಂಡಗಳು ಸೇರಿದಂತೆ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಇದುವರೆಗೂ ಒಟ್ಟು 14 ಯಶಸ್ವಿ ಆವೃತ್ತಿಗಳನ್ನು ಕಂಡಿರುವ ಐಪಿಎಲ್ ಟೂರ್ನಿಯಲ್ಲಿ ಹಲವು ಆಟಗಾರರು ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಅತಿಹೆಚ್ಚು ಟ್ರೋಫಿ ಗೆದ್ದ ಟಾಪ್ 5 ಆಟಗಾರರ ವಿವರ ನಿಮ್ಮ ಮುಂದೆ
5. ಮಹೇಂದ್ರ ಸಿಂಗ್ ಧೋನಿ: 4 ಟ್ರೋಫಿ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಧೋನಿ, ಸಿಎಸ್‌ಕೆ ತಂಡವನ್ನು ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. 2010 ಹಾಗೂ 2011ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಸಿಎಸ್‌ಕೆ, ಎರಡು ವರ್ಷಗಳ ನಿಷೇಧದ ಬಳಿಕ 2018ರಲ್ಲಿ ಹಾಗೂ 2021ರಲ್ಲಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ.
2010 ಹಾಗೂ 2011ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ಪರ ಧೋನಿ ಕ್ರಮವಾಗಿ 287 ಹಾಗೂ 392 ರನ್ ಬಾರಿಸಿದ್ದರು. ಇನ್ನು 2018ರ ಐಪಿಎಲ್‌ನಲ್ಲಿ ಧೋನಿ 16 ಪಂದ್ಯಗಳನ್ನಾಡಿ 455 ರನ್ ಚಚ್ಚಿದ್ದರು. ಇನ್ನು 2021ರ ಐಪಿಎಲ್‌ನಲ್ಲಿ ಧೋನಿ ಬ್ಯಾಟಿಂಗ್‌ನಲ್ಲಿ ನಿರಾಸೆ ಮೂಡಿಸಿದ್ದರೂ ಸಹಾ, ನಾಯಕನಾಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಧೋನಿ ಮಾತ್ರವಲ್ಲದೇ ಸುರೇಶ್ ರೈನಾ, ಹರ್ಭಜನ್ ಸಿಂಗ್ ಕೂಡಾ 4 ಐಪಿಎಲ್ ಟ್ರೋಫಿ ಗೆದ್ದಿದ್ದಾರೆ. ಈ ಪೈಕಿ ಹರ್ಭಜನ್ ಸಿಂಗ್ ಮೂರು ಬಾರಿ ಮುಂಬೈ ಇಂಡಿಯನ್ಸ್ ಪರ ಹಾಗೂ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾಗ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ್ದರು. ಇನ್ನು ರೈನಾ ಸಿಎಸ್‌ಕೆ ಪರ 4 ಟ್ರೋಫಿ ಜಯಿಸಿದ್ದಾರೆ.
(photo source- google)
4. ಅಂಬಟಿ ರಾಯುಡು: 5 ಟ್ರೋಫಿ
ಹರ್ಭಜನ್ ಸಿಂಗ್ ಅವರಂತೆಯೇ ಅಂಬಟಿ ರಾಯುಡು ಕೂಡಾ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪರ ಆಡಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ರಾಯುಡು ಮುಂಬೈ ಇಂಡಿಯನ್ಸ್ ಪರ 3 ಹಾಗೂ ಚೆನ್ನೈ ಸೂಪರ್ ಕಿಂಗ್ಸ್ 2 ಐಪಿಎಲ್ ಟ್ರೋಫಿ ಜಯಿಸಿದ್ದಾರೆ.
ಅಂಬಟಿ ರಾಯುಡು, ಮುಂಬೈ ಇಂಡಿಯನ್ಸ್ ಪರ 2013, 2015 ಹಾಗೂ 2017ರಲ್ಲಿ ಐಪಿಎಲ್ ಟ್ರೋಫಿ ಜಯಿಸಿದ್ದರು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಪರ 2018 ಹಾಗೂ 2021ರಲ್ಲಿ ಅಂಬಟಿ ರಾಯುಡು ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ
3. ಆದಿತ್ಯ ತಾರೆ: 5 ಟ್ರೋಫಿ
ಅಚ್ಚರಿ ಎನಿಸಿದರೂ ಇದು ಸತ್ಯ, ಧೋನಿಗಿಂತ ಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ಆಟಗಾರ ಆದಿತ್ಯ ತಾರೆ. ಮುಂಬೈ ಇಂಡಿಯನ್ಸ್ ತಂಡವು 2013, 2015, 2019 ಹಾಗೂ 2020 ಚಾಂಪಿಯನ್ ಆದ ತಂಡದಲ್ಲಿ ಆದಿತ್ಯ ತಾರೆ ಇದ್ದರು. ಇನ್ನು 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾಗಲೂ ಆದಿತ್ಯ ತಾರೆ ಹೈದರಾಬಾದ್ ತಂಡದಲ್ಲಿದ್ದರು.
2. ಜಸ್ಪ್ರೀತ್ ಬುಮ್ರಾ: 5 ಟ್ರೋಫಿ
ಜಸ್ಪ್ರೀತ್ ಬುಮ್ರಾ 2013ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಬುಮ್ರಾ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವು 5 ಬಾರಿ ಐಪಿಎಲ್ ಚಾಂಪಿಯನ್ ಆಗುವಲ್ಲಿ ಬುಮ್ರಾ ಮಹತ್ವದ ಪಾತ್ರ ವಹಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವು 2013, 2015, 2017, 2019, 2020ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.
1. ರೋಹಿತ್ ಶರ್ಮಾ: 6 ಟ್ರೋಫಿ
ಐಪಿಎಲ್‌ನ ಅತ್ಯಂತ ಯಶಸ್ವಿ ಆಟಗಾರನೆಂದರೆ ಅದು ರೋಹಿತ್ ಶರ್ಮಾ. ರೋಹಿತ್ ಶರ್ಮಾ 6 ಐಪಿಎಲ್ ಟ್ರೋಫಿ ಜಯಿಸಿರುವ ಏಕೈಕ ಆಟಗಾರ. ಮೊದಲಿಗೆ 2013ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ರೋಹಿತ್ ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸಿದ್ದರು.
ಇದಾದ ಬಳಿಕ ಮುಂಬೈ ಇಂಡಿಯನ್ಸ್ ತಂಡ ಕೂಡಿಕೊಂಡು, ನಾಯಕತ್ವ ವಹಿಸಿಕೊಂಡ ಬಳಿಕ ಹಿಟ್‌ಮ್ಯಾನ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು 2013, 2015,2017,2019 ಹಾಗೂ 2020ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.