IPL 2021: ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯೋದು ಯಾವಾಗ?
ಅಬುಧಾಬಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್(Mumbai Indians) ತಂಡವು ಯುಎಇ(UAE) ಚರಣದ ಮೊದಲೆರಡು ಪಂದ್ಯಗಳಲ್ಲಿ ಆಘಾತಕಾರಿ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಜಾರಿದೆ. ಇದರ ಬೆನ್ನಲ್ಲೇ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಮುಂಬೈ ಇಂಡಿಯನ್ಸ್ ತಂಡವನ್ನು ಯಾವಾಗ ಕೂಡಿಕೊಳ್ಳಲಿದ್ದಾರೆ ಎನ್ನುವುದನ್ನು ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೆ ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್(Shane Bond) ಉತ್ತರ ನೀಡಿದ್ದಾರೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಯುಎಇ ಚರಣದ ಐಪಿಎಲ್ ಟೂರ್ನಿಯಲ್ಲಿ ಸಾಕಷ್ಟು ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಿದ್ದು, ತಾನಾಡಿದ ಮೊದಲೆರಡು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸೋಲಿನ ಕಹಿಯುಂಡಿದೆ.
Mumbai Indians
ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದೆದುರು ಕೋಲ್ಕತ ನೈಟ್ ರೈಡರ್ಸ್ ತಂಡವು 7 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ರೋಹಿತ್ ಶರ್ಮಾ ಪಡೆ ಇದೀಗ 6ನೇ ಸ್ಥಾನಕ್ಕೆ ಜಾರಿದೆ.
ಇನ್ನು ಯುಎಇ ಚರಣದ ಮೊದಲೆರಡು ಪಂದ್ಯಗಳಲ್ಲಿ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಭಾರತದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆಯೂ ಪಾಂಡ್ಯ ಪ್ರದರ್ಶನ ಅಷ್ಟೇನು ಉತ್ತಮವಾಗಿರಲಿಲ್ಲ.
ಇದೀಗ ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಶೇನ್ ಬಾಂಡ್, ಹಾರ್ದಿಕ್ ಪಾಂಡ್ಯ ಕುರಿತಂತೆ ತುಟಿಬಿಚ್ಚಿದ್ದು, ಪಾಂಡ್ಯ ಇನ್ನೂ ಸಂಪೂರ್ಣ ಫಿಟ್ನೆಸ್ ಹೊಂದಿಲ್ಲ. ಸಂಪೂರ್ಣ ಫಿಟ್ ಆದ ಬಳಿಕವಷ್ಟೇ ಹಾರ್ದಿಕ್ ಪಾಂಡ್ಯ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಬಾಂಡ್ ತಿಳಿಸಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಶೇನ್ ಬಾಂಡ್, ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಅಭ್ಯಾಸ ಮಾಡುತ್ತಿದ್ದಾರೆ. ಪಾಂಡ್ಯ ಅವರಂತಹ ಆಟಗಾರರು ತಂಡದಿಂದ ಹೊರಗುಳಿದರೆ, ತಂಡ ಸಮತೋಲನ ತಪ್ಪಲಿದೆ ಎಂದು ತಿಳಿಸಿದ್ದಾರೆಂದು ESPNCricinfo ವರದಿ ಮಾಡಿದೆ.
ಐಪಿಎಲ್ ಟೂರ್ನಿಗಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದಕ್ಕೆ ಮುಂಬೈ ಫ್ರಾಂಚೈಸಿ ಹೆಚ್ಚಿನ ಒತ್ತು ನೀಡಲಿದೆ ಎಂದು ಬಾಂಡ್ ತಿಳಿಸಿದ್ದಾರೆ.
ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ಆರಂಭವಾಗಲಿದ್ದು, ಸೂಪರ್ 12 ಪಂದ್ಯಗಳು ಅಕ್ಟೋಬರ್ 23ರಿಂದ ಆರಂಭವಾಗಲಿವೆ.
ಪಾಂಡ್ಯ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆಯೇ ಎನ್ನುವ ಮಾಧ್ಯಮದವರ ಪ್ರಶ್ನೆಯನ್ನು ಅಲ್ಲಗಳೆದಿರುವ ಬಾಂಡ್, ಪಾಂಡ್ಯಗೆ ಸದ್ಯ ವಿಶ್ರಾಂತಿ ನೀಡಲಾಗಿದೆ. ಮತ್ತೊಮ್ಮೆ ಪಾಂಡ್ಯ ಐಪಿಎಲ್ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆಯಿದೆ. ಇದು ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮೇಲೂ ಹೊಡೆತ ಬೀಳುವ ಸಾಧ್ಯತೆಯಿದೆ. ಹೀಗಾಗಿ ವಿವೇಚನೆಯಿಂದ ಪಾಂಡ್ಯ ಅವರನ್ನು ಮೈದಾನಕ್ಕಿಳಿಸಲಿದ್ದೇವೆ ಎಂದು ಬಾಂಡ್ ತಿಳಿಸಿದ್ದಾರೆ.