IPL 2021: ದೇಶ ಮೊದಲು, ಐಪಿಎಲ್ ಆಮೇಲೆ ಎಂದ ಕಗಿಸೋ ರಬಾಡ..!
ಜೊಹಾನ್ಸ್‌ಬರ್ಗ್: 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಈಗಿನಿಂದಲೇ ಭರದಿಂದ ಸಿದ್ದತೆಗಳು ಆರಂಭವಾಗಲಾರಂಭಿಸಿದೆ. ಇದರ ಭಾಗವಾಗಿ ಫೆಬ್ರವರಿ 18ರಂದು ಚೆನ್ನೈನಲ್ಲಿ ಆಟಗಾರರ ಹರಾಜು ಕೂಡಾ ನಡೆದಿದ್ದು, ಎಲ್ಲಾ 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿವೆ.
ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಜಗತ್ತಿನ ಮೂಲೆಮೂಲೆಗಳಲ್ಲಿನ ಸ್ಟಾರ್ ಆಟಗಾರರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಹೀಗಿರುವಾಗಲೇ ದಕ್ಷಿಣ ಆಫ್ರಿಕಾ ತಂಡದ ಡೆಡ್ಲಿ ವೇಗಿ ಕಗಿಸೋ ರಬಾಡ ಐಪಿಎಲ್ ಕುರಿತಂತೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ವೇಗದ ಅಸ್ತ್ರ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
14ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಸಜ್ಜಾಗುತ್ತಿರುವ ಬೆನ್ನಲ್ಲೇ ಕಳೆದ ಆವೃತ್ತಿಯ ಐಪಿಎಲ್ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ.
2021ರ ಏಪ್ರಿಲ್ ಎರಡನೇ ವಾರದಲ್ಲಿ ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗುವ ಸಾಧ್ಯತೆಯಿದ್ದು, ಆರಂಭಿಕ ಐಪಿಎಲ್ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುವ ಬಗ್ಗೆ ಡೆಲ್ಲಿ ವೇಗಿ ಕಗಿಸೋ ರಬಾಡ ಸುಳಿವು ನೀಡಿದ್ದಾರೆ.
ಪೂರ್ವ ನಿಗದಿಯಂತೆ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾ ವಿರುದ್ದ ಸೀಮಿತ ಓವರ್‌ಗಳ ಸರಣಿಯಾಡಲು ಆಫ್ರಿಕಾಗೆ ಪ್ರವಾಸ ಮಾಡಲಿದ್ದು, ಸೀಮಿತ ಓವರ್‌ಗಳ ಸರಣಿಯು ಏಪ್ರಿಲ್ 02ರಿಂದ ಆರಂಭವಾಗಲಿದೆ.
ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ನಡುವಿನ ಸೀಮಿತ ಓವರ್‌ಗಳ ಸರಣಿಯು ಏಪ್ರಿಲ್ 16ಕ್ಕೆ ಮುಕ್ತಾಯವಾಗಲಿದೆ. ಸದ್ಯದ ಕೊರೋನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ಪಾಕಿಸ್ತಾನ ವಿರುದ್ದ ಸರಣಿಯಲ್ಲಿ ಪಾಲ್ಗೊಂಡ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಮೊದಲೆರಡು ವಾರದ ಐಪಿಎಲ್ ಟೂರ್ನಿಯಿಂದ ವಂಚಿತರಾಗಲಿದ್ದಾರೆ.
ಈಗಾಗಲೇ ಹಲವು ಕ್ರಿಕೆಟ್ ಮಂಡಳಿಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ತಪ್ಪಿಸಿಕೊಂಡು ಐಪಿಎಲ್ ಆಡಲು ಆಟಗಾರರಿಗೆ ಅನುವು ಮಾಡಿಕೊಟ್ಟಿದೆ. ಆದರೆ ರಬಾಡ ತಮಗೆ ದೇಶ ಮೊದಲು ಎನ್ನುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ನನಗೆ ದೇಶ ಮೊದಲು. ಒಂದು ವೇಳೆ ಐಪಿಎಲ್ ವೇಳೆಯೇ ಪಾಕಿಸ್ತಾನ ವಿರುದ್ದದ ಸರಣಿ ಆಯೋಜನೆಗೊಂಡರೆ, ನಾನು ಐಪಿಎಲ್‌ನ ಆರಂಭದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಭಾರತದಲ್ಲಿ ಡೆಲ್ಲಿ ನನ್ನ ತವರು ಮನೆ, ಆದರೆ ದೇಶ ನನ್ನ ಮೊದಲ ಆದ್ಯತೆ ಎಂದು ರಬಾಡ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ವೇಗದ ಬೌಲರ್ ಆಗಿ ಗುರುತಿಸಿಕೊಂಡಿರುವ ಕಗಿಸೋ ರಬಾಡ 2020ರ ಐಪಿಎಲ್ ಟೂರ್ನಿಯಲ್ಲಿ 17 ಪಂದ್ಯಗಳನ್ನಾಡಿ 30 ವಿಕೆಟ್ ಕಬಳಿಸುವ ಮೂಲಕ ತಂಡ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.