IPL 2021 ಮುಂದಿನ ಆವೃತ್ತಿಯಲ್ಲಿ ನೀವು ನನ್ನನ್ನು CSK ಜೆರ್ಸಿಯಲ್ಲಿ ಕಾಣಬಹುದು, ಆದರೆ..?
ದುಬೈ: 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯು ಉಪಾಂತ್ಯದತ್ತ ಸಾಗುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಪಂಜಾಬ್ ಕಿಂಗ್ಸ್ (Punjab Kings) ತಂಡಗಳಿಂದ ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ (KL Rahul) ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಟಾಸ್ ವೇಳೆ ಧೋನಿ ನೀಡಿದ ಒಂದು ಹೇಳಿಕೆ ಇದೀಗ ಸಾಕಷ್ಟು ಸಂಚಲನ ಮೂಡಿಸಿದೆ. ಅಷ್ಟಕ್ಕೂ ಎಂ ಎಸ್ ಧೋನಿ (MS Dhoni) ಹೇಳಿದ್ದೇನು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈಗಾಗಲೇ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇನ್ನೊಂದೆಡೆ ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ ಪಂಜಾಬ್ ಕಿಂಗ್ಸ್ ಪ್ರತಿಷ್ಠೆಯ ಪಂದ್ಯವನ್ನಾಗಿ ಸ್ವೀಕರಿಸಿದೆ.
ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 13 ಪಂದ್ಯಗಳನ್ನಾಡಿ 9 ಗೆಲುವು ಹಾಗೂ 4 ಸೋಲುಗಳೊಂದಿಗೆ 18 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ.
MS Dhoni
ಸದ್ಯ ಸಿಎಸ್‌ಕೆ ತಂಡ ಉತ್ತಮ ಪ್ರದರ್ಶನ ತೋರುತ್ತಿದ್ದರೂ ನಾಯಕ ಧೋನಿ ಬ್ಯಾಟ್‌ನಿಂದ ನಿರೀಕ್ಷಿತ ರನ್ ಹರಿದು ಬರುತ್ತಿಲ್ಲ. ಹೀಗಾಗಿ ಧೋನಿ ಪಾಲಿಗೆ ಇದು ಕೊನೆಯ ಐಪಿಎಲ್ ಟೂರ್ನಿಯಾಗಬಹುದು ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ.
ಟಾಸ್ ವೇಳೆ ವೀಕ್ಷಕ ವಿವರಣೆಗಾರ ಡ್ಯಾನಿ ಮೋರಿಸನ್ ಧೋನಿಗೆ ಮುಂದಿನ ಆವೃತ್ತಿಯಲ್ಲೂ ನೀವು ಹಳದಿ ಜೆರ್ಸಿಯಲ್ಲಿಯೇ ಕಾಣಿಸಿಕೊಳ್ಳುತ್ತೀರೋ ಹೇಗೆ ಎಂದು ಚುಟುಕಾಗಿ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಧೋನಿ, ಖಂಡಿತವಾಗಿಯೂ ನನ್ನನ್ನು ಮುಂದಿನ ವರ್ಷ ನೀವೂ ಹಳದಿ ಜೆರ್ಸಿಯಲ್ಲಿ ಕಾಣಲಿದ್ದೀರ. ಆದರೆ ನನ್ನನ್ನು ನೀವು ಆಟಗಾರನಾಗಿ ನೀವು ನೋಡುತ್ತೀರ ಎನ್ನುವುದಕ್ಕೆ ಇನ್ನೂ ಖಚಿತತೆ ಇಲ್ಲ ಎಂದಿದ್ದಾರೆ.
ಯಾಕೆಂದರೆ ಮುಂದಿನ ಆವೃತ್ತಿಯ ಐಪಿಎಲ್‌ಗೆ ಮತ್ತೆರಡು ಹೊಸ ತಂಡಗಳು ಸೇರ್ಪಡೆಯಾಗಲಿವೆ. ಆಟಗಾರರ ರೀಟೈನ್ ನಿಯಮ ಹೇಗಿರಲಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಎಷ್ಟು ವಿದೇಶಿ ಹಾಗೂ ದೇಶಿ ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು ಎಂದು ಗೊತ್ತಿಲ್ಲ.
ರೀಟೈನ್ ಪಾಲಿಸಿ ಕುರಿತಂತೆ ಅಧಿಕೃತ ಪ್ರಕಟಣೆ ಹೊರಬೀಳದೇ ನಾವೇನನ್ನು ಹೇಳಲು ಸಾಧ್ಯವಿಲ್ಲ. ನಿಯಮಗಳನ್ನು ಎದುರು ನೋಡುತ್ತಿದ್ದು, ಎಲ್ಲರಿಗೂ ಒಳಿತಾಗುವ ತೀರ್ಮಾನ ಹೊರ ಬೀಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.