IPL 2021: ಈ ಕಾರಣಕ್ಕಾಗಿ ಒಂದೂ ಪಂದ್ಯವನ್ನಾಡದೇ ಮುಂಬೈ ಇಂಡಿಯನ್ಸ್‌ನಿಂದ ಹೊರಬಿದ್ದ ಅರ್ಜುನ್ ತೆಂಡುಲ್ಕರ್
ದುಬೈ: 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸಚಿನ್ ತೆಂಡುಲ್ಕರ್ (Sachin Tendulkar) ಪುತ್ರ ಅರ್ಜುನ್ ತೆಂಡುಲ್ಕರ್ (Arjun Tendulkar) ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಇದೀಗ ಅರ್ಜುನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ (Mumbai Indians) ತಂಡದಿಂದ ಹೊರಬಿದ್ದಿದ್ದಾರೆ. ಇದೀಗ ಅರ್ಜುನ್ ತೆಂಡುಲ್ಕರ್ ಬದಲಿಗೆ ಸಿಮ್ರನ್‌ಜಿತ್ ಸಿಂಗ್ (Simarjeet Singh) ಅವರನ್ನು ಮುಂಬೈ ಇಂಡಿಯನ್ಸ್ ತಂಡವು ತನ್ನ ಬಳಗಕ್ಕೆ ಸೇರಿಸಿಕೊಂಡಿದೆ. ಇದೀಗ ಅರ್ಜುನ್ ತೆಂಡುಲ್ಕರ್ ಸ್ಥಾನ ತುಂಬಲು ಮುಂಬೈ ತಂಡ ಕೂಡಿಕೊಂಡ ಆಟಗಾರ ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ಅರ್ಜುನ್ ತೆಂಡುಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮೂಲ ಬೆಲೆ 20 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಆಲ್ರೌಂಡರ್ ಅರ್ಜುನ್ ತೆಂಡುಲ್ಕರ್ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಮುನ್ನವೇ 14ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ.
ಹೌದು, ಅರ್ಜುನ್ ತೆಂಡುಲ್ಕರ್ ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿದ್ದು, ಇನ್ನೂ ಸಂಪೂರ್ಣ ಗುಣಮುಖರಾಗಿಲ್ಲ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದಿದ್ದಾರೆ.
ಇದೀಗ ಅರ್ಜುನ್ ಬದಲು ಮುಂಬೈ ತಂಡ ಕೂಡಿಕೊಂಡಿರುವ ಸಿಮ್ರನ್‌ಜಿತ್ ಸಿಂಗ್ ದೇಶಿ ಕ್ರಿಕೆಟ್‌ನಲ್ಲಿ ಡೆಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸಿಮ್ರನ್‌ಜಿತ್ ಕೂಡಾ ಆಲ್ರೌಂಡರ್ ಆಗಿದ್ದು, ಬಲಗೈ ಬ್ಯಾಟಿಂಗ್ ಹಾಗೂ ಬಲಗೈ ಮಧ್ಯಮ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.
ಸಿಮ್ರನ್‌ಜಿತ್ 20 ಸೆಪ್ಟೆಂಬರ್ 2018ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿಯುವ ಮೂಲಕ ಲಿಸ್ಟ್ 'ಎ' ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ 20 ನವೆಂಬರ್ 2018ರಲ್ಲಿ ರಣಜಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.
23 ವರ್ಷದ ಸಿಮ್ರನ್‌ಜಿತ್ ಸಿಂಗ್ ಅವರಿಗೆ ಇದು ಮೊದಲ ಐಪಿಎಲ್ ಅನುಭವವಾಗಿದೆ. ಐಪಿಎಲ್ ಪ್ರೋಟೋಕಾಲ್‌ನಂತೆ ಸಿಮ್ರನ್‌ಜಿತ್ ಸಿಂಗ್ ಆದಷ್ಟು ಬೇಗ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಬೇಕಿದೆ. ಇದಾದ ಮುಂಬೈ ಇಂಡಿಯನ್ಸ್ ತಂಡ ಕೂಡಿಕೊಳ್ಳಲಿದ್ದಾರೆ.
ಇದಕ್ಕೂ ಮೊದಲು ಸಿಮ್ರನ್‌ಜಿತ್ ಸಿಂಗ್ ಟೀಂ ಇಂಡಿಯಾ ಲಂಕಾ ಪ್ರವಾಸ ಕೈಗೊಂಡಾಗ ನೆಟ್ ಬೌಲರ್ ಆಗಿ ಲಂಕಾಗೆ ತೆರಳಿದ್ದರು. ಇನ್ನು ಟಿ20 ಸರಣಿ ವೇಳೆ ಟೀಂ ಇಂಡಿಯಾ ಕೆಲ ಆಟಗಾರರಿಗೆ ಕೋವಿಡ್ ತಗುಲಿದ್ದರಿಂದ ಸಿಮ್ರನ್‌ಜಿತ್ 15 ಆಟಗಾರರ ತಂಡಕ್ಕೆ ಸೇರ್ಪಡೆಯಾಗಿದ್ದರು. ಆದರೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ.
ಇನ್ನು ಸಿಮ್ರನ್‌ಜಿತ್ ಸಿಂಗ್ ಅವರ ದೇಶಿ ಕ್ರಿಕೆಟ್ ಪ್ರದರ್ಶನವನ್ನು ಗಮನಿಸುವುದಾದರೇ 10 ಪ್ರಥಮದರ್ಜೆ ಪಂದ್ಯಗಳನ್ನಾಡಿ 37 ವಿಕೆಟ್ ಕಬಳಿಸಿದ್ದಾರೆ, ಇನ್ನು ಲಿಸ್ಟ್ 'ಎ' ನಲ್ಲಿ 19 ಪಂದ್ಯಗಳನ್ನಾಡಿ 19 ವಿಕೆಟ್ ಹಾಗೂ 15 ಟಿ20 ಪಂದ್ಯಗಳನ್ನಾಡಿ 18 ವಿಕೆಟ್ ಕಬಳಿಸಿದ್ದಾರೆ.
ಅರ್ಜುನ್ ತೆಂಡುಲ್ಕರ್ ಕೂಡಾ ಈ ಹಿಂದೆ ಟೀಂ ಇಂಡಿಯಾ ನೆಟ್ ಬೌಲರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅದೇ ರೀತಿ ಸಿಮ್ರನ್‌ಜಿತ್ ಕೂಡಾ ನೆಟ್ ಬೌಲರ್ ಆಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಆದರೆ ಸಿಮ್ರನ್‌ಜಿತ್‌ಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತಾ ಎನ್ನುವುದು ಸದ್ಯದ ಕುತೂಹಲ