IPL 2021: ಪ್ಲೇ ಆಫ್‌ಗೂ ಮುನ್ನ KKR ತಂಡಕ್ಕೆ ಸಿಕ್ತು ಗುಡ್ ನ್ಯೂಸ್..!
ದುಬೈ: 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings), ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಗಳು ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಇನ್ನು ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡ ಕೂಡಾ ಬಹುತೇಕ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದು, ಇಂದು ನಡೆಯಲಿರುವ ಪಂದ್ಯದ ಬಳಿಕ ಕೆಕೆಆರ್ ಅಧಿಕೃತವಾಗಿ ಪ್ಲೇ ಆಫ್‌ಗೆ ಪ್ರವೇಶ ಪಡೆಯಲಿದೆ. ಕೆಕೆಆರ್ ತಂಡವು ಪ್ಲೇ ಆಫ್ ಪ್ರವೇಶಕ್ಕೂ ಮುನ್ನವೇ ಸಿಹಿ ಸುದ್ದಿಯೊಂದು ಹೊರಬಿದ್ದಿದೆ ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ ನೈಟ್ ರೈಡರ್ಸ್ ತಂಡವು ತನ್ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ದ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 4ನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.
ಲೀಗ್‌ನ 14 ಪಂದ್ಯಗಳನ್ನಾಡಿದ ಕೆಕೆಆರ್ ತಂಡವು ತಲಾ 7 ಗೆಲುವು ಹಾಗೂ 7 ಸೋಲುಗಳೊಂದಿಗೆ 14 ಅಂಕಗಳನ್ನು ಕಲೆಹಾಕಿದೆ. ಇದಷ್ಟೇ ಅಲ್ಲದೇ ರಾಯಲ್ಸ್ ಎದುರು ಭಾರೀ ಅಂತರದ ಗೆಲುವು ಸಾಧಿಸುವ ಮೂಲಕ ಕೆಕೆಆರ್ ತನ್ನ ನೆಟ್ ರನ್ ರೇಟ್ ಕೂಡಾ ಸುಧಾರಿಸಿಕೊಳ್ಳಬೇಕಿದೆ.
ಇಂದು ನಡೆಯಲಿರುವ ಸನ್‌ರೈಸರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ 171 ರನ್‌ಗಳ ಅಂತರದ ಗೆಲುವು ಸಾಧಿಸಬೇಕು. ಆಗ ಮಾತ್ರ ಕೆಕೆಆರ್ ಹಿಂದಿಕ್ಕಿ ಮುಂಬೈ ಪ್ಲೇ ಆಫ್‌ಗೇರಲಿದೆ.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ ನೈಟ್ ರೈಡರ್ಸ್ ತಂಡಗಳು ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಕಾದಾಡುವುದು ಬಹುತೇಕ ಖಚಿತ ಎನಿಸಿದೆ.
ಮೊದಲ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಕೋಲ್ಕತ ನೈಟ್ ರೈಡರ್ಸ್ ತಂಡದ ಪಾಲಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಸ್ಟಾರ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಕೆಕೆಆರ್ ತಂಡವನ್ನು ಕೂಡಿಕೊಳ್ಳುವುದು ಬಹುತೇಕ ಖಚಿತ ಎನಿಸಿದೆ.
ಬುಧವಾರ ಆ್ಯಂಡ್ರೆ ರಸೆಲ್ ಅವರ ಫಿಟ್ನೆಸ್ ಟೆಸ್ಟ್ ಇರಲಿದ್ದು, ಇನ್ನುಳಿದ ದಿನಗಳಲ್ಲಿ ಆದಷ್ಟು ಬೇಗ ಫಿಟ್ನೆಸ್ ಕಾಯ್ದುಕೊಂಡು ಪ್ಲೇ ಆಫ್ ಪಂದ್ಯಗಳಿಗೆ ಅವರು ಲಭ್ಯರಾಗುವ ವಿಶ್ವಾಸವಿದೆ ಎಂದು ಕೆಕೆಆರ್ ಮೆಂಟರ್ ಡೇವಿಡ್ ಹಸ್ಸಿ ತಿಳಿಸಿದ್ದಾರೆ
ಆ್ಯಂಡ್ರೆ ರಸೆಲ್ ಅವರು ತಂಡ ಕೂಡಿಕೊಂಡರೇ ನಮ್ಮ ತಂಡ ಮತ್ತಷ್ಟು ಬಲಿಷ್ಠವಾಗಲಿದೆ. ಅವರೊಬ್ಬ ವಿಶ್ವ ದರ್ಜೆಯ ಆಟಗಾರರಾಗಿದ್ದು, ಉತ್ತಮ ಮನರಂಜನೆಯನ್ನು ನೀಡುತ್ತಾರೆ ಎಂದು ಹಸ್ಸಿ ಅಭಿಪ್ರಾಯಪಟ್ಟಿದ್ದಾರೆ.