ಭಾರತ ವಿಶ್ವಕಪ್ ಗೆದ್ದ 40 ವರ್ಷದ ಸಂಭ್ರಮಕ್ಕೆ ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಕಾರ್ಡ್ ಬಿಡುಗಡೆ
ವರದಿ: ಸ್ವಸ್ತಿಕ್ ಕನ್ಯಾಡಿ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಜೂ.27): ಅದು 1983 ಜೂನ್ 25, ಸೋಲೇ ಇಲ್ಲದೆ ಬೀಗುತ್ತಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಭಾರತ ಸೋಲುಣಿಸಿ ಕ್ರಿಕೆಟ್ ವಿಶ್ವಕಪ್ ಗೆದ್ದ ದಿನ. ಭಾರತ ಕ್ರಿಕೆಟ್ ಇತಿಹಾಸ ಈ ದಿನವನ್ನು ಮರೆಯಲಾಗದ ಅಪೂರ್ವ ಕ್ಷಣ. ಇಂತಹ ವಿಶೇಷ ದಿನಕ್ಕೆ 40 ವರ್ಷ ಸಂದರೂ ಭಾರತೀಯರು ನೆನಪಿಸಿಕೊಂಡು ಕಾಲರ್ ಟೈಟ್ ಮಾಡಿಕೊಳ್ತಾರೆ. ಅಂತಹ ಹೆಮ್ಮೆಯ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ಅಂಚೆ ಇಲಾಖೆ ನಿರ್ಧರಿಸಿದೆ.
ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದು 40 ವರ್ಷದ ಸಂಭ್ರಮದಲ್ಲಿರುವ ಈ ದಿನವನ್ನು ಮತ್ತಷ್ಟು ವಿಶೇಷವಾಗಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆ ವಿಶೇಷ ಅಂಚೆ ಕಾರ್ಡ್ ಬಿಡುಗಡೆಗೊಳಿಸಿದೆ.
ಜೂನ್ ,25 ಭಾನುವಾರವಾದ್ದರಿಂದ ಅಂಚೆ ಕಚೇರಿಗಳು ಬಂದ್ ಆಗಿದ್ದವು. ಈ ಹಿನ್ನಲೆಯಲ್ಲಿ ಜೂನ್ 26ರ ಸೋಮವಾರದಂದು ಈ ವಿಶೇಷ ಕಾರ್ಡ್ ಅನ್ನು ಬಿಡುಗಡೆಗೊಳಿಸಲಾಗಿದೆ ಎಂದು ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಪಿಲ್ ನೇತೃತ್ವದ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದಿತ್ತು. 1983ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಘಟಾನುಘಟಿ ತಂಡಗಳಿಗೆ ಮಣ್ಣು ಮುಕ್ಕಿಸಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿತ್ತು.
ಸತತ ಎರಡು ಏಕದಿನ ವಿಶ್ವಕಪ್ ಗೆದ್ದು ಫೈನಲ್ ಪ್ರವೇಶಿಸಿದ್ದ ವೆಸ್ಟ್ ಇಂಡೀಸ್ ತಂಡವನ್ನು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ 43 ರನ್ ಅಂತರದಲ್ಲಿ ಬಗ್ಗು ಬಡಿಯುವಲ್ಲಿ ಭಾರತ ಯಶಸ್ವಿಯಾಯಿತು.
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಕಪಿಲ್ ದೇವ್ ಏಕದಿನ ವಿಶ್ವಕಪ್ ಎತ್ತಿ ಹಿಡಿದದ್ದು ದೇಶದ ಲಕ್ಷಾಂತರ ಮಂದಿ ಕ್ರಿಕೆಟ್‌ನತ್ತ ಒಲವು ಬೆಳಸಿಕೊಳ್ಳಲು ಸ್ಪೂರ್ತಿ ನೀಡಿತು.