Ind vs NZ ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ; ಉಮ್ರಾನ್ ಮಲಿಕ್‌ಗೆ ಸಿಗುತ್ತಾ ಸ್ಥಾನ?
ಆಕ್ಲೆಂಡ್(ನ.24): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನವೆಂಬರ್ 25ರಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಈಡನ್ ಪಾರ್ಕ್ ಮೈದಾನ ಆತಿಥ್ಯ ವಹಿಸಿದೆ. ವಿರಾಟ್ ಕೊಹ್ಲಿ, ಬುಮ್ರಾ ಅವರಂತಹ ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶ ದೊರೆಯುವ ಸಾಧ್ಯತೆಯಿದೆ. ಹೀಗಾಗಿ ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ
1. ಶಿಖರ್ ಧವನ್: ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ನಾಯಕರಾಗಿ ನೇಮಕವಾಗಿರುವ ಧವನ್, ಮತ್ತೊಮ್ಮೆ ಆರಂಭಿಕನಾಗಿ ಹಾಗೂ ನಾಯಕನಾಗಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಬೇಕಿದೆ.
2. ಶುಭ್‌ಮನ್ ಗಿಲ್: ಭಾರತದ ಪ್ರತಿಭಾನ್ವಿತ ಬ್ಯಾಟರ್ ಗಿಲ್, ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಕಿವೀಸ್ ಎದುರು ದೊಡ್ಡ ಇನಿಂಗ್ಸ್ ಆಡಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ ಗಿಲ್.
3. ಸೂರ್ಯಕುಮಾರ್ ಯಾದವ್: ಟಿ20 ಕ್ರಿಕೆಟ್‌ನಲ್ಲಿ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಸೂರ್ಯಕುಮಾರ್ ಯಾದವ್, ಇದೀಗ ಏಕದಿನ ಸರಣಿಯಲ್ಲೂ ಅಬ್ಬರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
4. ಶ್ರೇಯಸ್ ಅಯ್ಯರ್: ಮುಂಬೈ ಮೂಲದ ಮತ್ತೋರ್ವ ಪ್ರತಿಭಾನ್ವಿತ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡಾ ಭಾರತ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದ್ದು, ಉತ್ತಮ ಇನಿಂಗ್ಸ್ ಆಡುವ ವಿಶ್ವಾಸದಲ್ಲಿದ್ದಾರೆ.
5. ಸಂಜು ಸ್ಯಾಮ್ಸನ್: ಕೇರಳ ಮೂಲದ ಪ್ರತಿಭಾನ್ವಿತ ಬ್ಯಾಟರ್ ಸಂಜು ಸ್ಯಾಮ್ಸನ್, ಕಿವೀಸ್ ಎದುರಿನ ಟಿ20 ಸರಣಿಯಲ್ಲಿ ಬೆಂಚ್ ಕಾಯಿಸಿದ್ದರು. ಆದರೆ ಇದೀಗ ಏಕದಿನ ತಂಡದಲ್ಲಿ ಬಹುತೇಕ ಸ್ಥಾನ ಪಡೆಯುವುದು ಖಚಿತ ಎನಿಸಿದ್ದು, ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
6. ರಿಷಭ್ ಪಂತ್: ವಿಕೆಟ್ ಕೀಪರ್ ಬ್ಯಾಟರ್ ಪಂತ್, ಟಿ20 ಸರಣಿಯಲ್ಲಿ ಅಗ್ರಕ್ರಮಾಂಕದಲ್ಲಿನ ಎರಡೂ ಪಂದ್ಯಗಳಲ್ಲೂ ವೈಫಲ್ಯ ಅನುಭವಿಸಿದ್ದರು. ಆದರೆ ಏಕದಿನ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಪಂತ್ ಫಿನಿಶರ್ ಪಾತ್ರ ನಿಭಾಯಿಸಬೇಕಿದೆ.
7. ದೀಪಕ್ ಹೂಡಾ: ದೀಪಕ್ ಹೂಡಾ ಸೇರ್ಪಡೆ ಟೀಂ ಇಂಡಿಯಾ ಬ್ಯಾಟಿಂಗ್ ಕ್ರಮಾಂಕವನ್ನು ಮತ್ತಷ್ಟು ಬಲವಾಗಲಿದೆ. ಇದರ ಜತೆಗೆ ಸಂಪೂರ್ಣ 10 ಓವರ್ ಬೌಲಿಂಗ್ ಮಾಡುವ ಕ್ಷಮತೆಯನ್ನು ದೀಪಕ್ ಹೂಡಾ ಹೊಂದಿದ್ದಾರೆ.
8. ಶಾರ್ದೂಲ್ ಠಾಕೂರ್: ಅನುಭವಿ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಕೂಡಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಸರೆಯಾಗಬಲ್ಲ ಕ್ಷಮತೆ ಹೊಂದಿದ್ದಾರೆ. ಶಾರ್ದೂಲ್ ಡೆತ್ ಓವರ್‌ನಲ್ಲಿ ಪರಿಣಾಮಕಾರಿ ದಾಳಿ ನಡೆಸಬಲ್ಲವರಾಗಿದ್ದಾರೆ.
9. ಉಮ್ರಾನ್ ಮಲಿಕ್: ಕಾಶ್ಮೀರ ಮೂಲದ ಮಾರಕ ವೇಗಿ ಉಮ್ರಾನ್ ಮಲಿಕ್, ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ವೇಗದ ದಾಳಿ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಲು ಎದುರು ನೋಡುತ್ತಿದ್ದಾರೆ. ಉಮ್ರಾನ್ ಮಲಿಕ್ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.
10. ಯುಜುವೇಂದ್ರ ಚಹಲ್: ಟೀಂ ಇಂಡಿಯಾಗೆ ಅಗತ್ಯ ಸಂದರ್ಭದಲ್ಲಿ ವಿಕೆಟ್ ಕಬಳಿಸಬಲ್ಲ ಅನುಭವಿ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್, ಟೀಂ ಇಂಡಿಯಾ ಬೌಲಿಂಗ್ ಅಸ್ತ್ರ ಎನಿಸಿಕೊಂಡಿದ್ದಾರೆ.
11. ಆರ್ಶದೀಪ್ ಸಿಂಗ್: ಟೀಂ ಇಂಡಿಯಾ ಮತ್ತೋರ್ವ ಪ್ರತಿಭಾನ್ವಿತ ವೇಗಿ ಆರ್ಶದೀಪ್ ಸಿಂಗ್ ಅದ್ಭುತ ಲಯದಲ್ಲಿದ್ದು, ಟಿ20 ಕ್ರಿಕೆಟ್‌ನಲ್ಲಿ ತೋರಿದ ಪ್ರದರ್ಶನ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.