- Home
- Sports
- Cricket
- ಸಂಜು ಸ್ಯಾಮ್ಸನ್ ಇನ್, ತಿಲಕ್ ವರ್ಮಾ ಔಟ್! ಇಂಗ್ಲೆಂಡ್ ಎದುರಿನ ಕೊನೆಯ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ, ಗಂಭೀರ್ ಮೇಲೆ ಎಲ್ಲರ ಕಣ್ಣು
ಸಂಜು ಸ್ಯಾಮ್ಸನ್ ಇನ್, ತಿಲಕ್ ವರ್ಮಾ ಔಟ್! ಇಂಗ್ಲೆಂಡ್ ಎದುರಿನ ಕೊನೆಯ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ, ಗಂಭೀರ್ ಮೇಲೆ ಎಲ್ಲರ ಕಣ್ಣು
ಸೌಥಾಂಪ್ಟನ್: ಭಾರತ ತಂಡವು ಕಳೆದ ಆರು ಪಂದ್ಯಗಳಿಂದ ಮೊದಲ ಗೆಲುವಿಗಾಗಿ ಹಪಹಪಿಸುತ್ತಿದೆ. ಇದೀಗ ಇಂಗ್ಲೆಂಡ್ ಎದುರು ಐದನೇ ಹಾಗೂ ಕೊನೆಯ ಟಿ20 ಪಂದ್ಯಕ್ಕೆ ಇಂದು ಸಜ್ಜಾಗಿದ್ದು, ಭಾರತ ಕೆಲವ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

ಭಾರತ ತಂಡದಲ್ಲಿಂದು ಮೇಜರ್ ಚೇಂಜ್
ಶ್ರೇಯಸ್ ಅಯ್ಯರ್ ಭಾರತ ಟಿ20 ನಾಯಕರಾಗಿ ಆರು ಪಂದ್ಯಗಳು ಕಳೆದಿವೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದರೇ, ಉಳಿದ ಐದು ಪಂದ್ಯಗಳಲ್ಲಿ ಭಾರತ ತಂಡವು ಸತತ ಸೋಲು ಅನುಭವಿಸಿದೆ. ಈಗಾಗಲೇ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರು ಟಿ20 ಸರಣಿ ಸೋತಿರುವ ಭಾರತ, ಇಂಗ್ಲೆಂಡ್ ಎದುರು ಕೊನೆಯ ಪಂದ್ಯ ಗೆದ್ದು, ಸೋಲಿನ ಸರಪಳಿಯಿಂದ ಪಾರಾಗಲು ಎದುರು ನೋಡುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಭಾರತ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಕಠಿಣ ನಿರ್ಧಾರ ಕೈಗೊಳ್ತಾರಾ ಗಂಭೀರ್-ಅಯ್ಯರ್ ಜೋಡಿ
ಸತತ ಸೋಲುಗಳಿಂದ ಕಂಗೆಟ್ಟಿರುವ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿಯ ಅಗತ್ಯವಿದ್ದು, ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದ್ದು, ಎಲ್ಲರ ಚಿತ್ತ ಗಂಭೀರ್-ಅಯ್ಯರ್ ಮೇಲಿದೆ. ಮೊದಲ ಪಂದ್ಯದ ಬಳಿಕ ಕಳೆದ ಮೂರು ಪಂದ್ಯಗಳಲ್ಲಿ ಬೆಂಚ್ ಕಾಯಿಸುತ್ತಾ ಬಂದಿರುವ ಸಂಜು ಸ್ಯಾಮ್ಸನ್ ಕಮ್‌ಬ್ಯಾಕ್ ಕುರಿತಂತೆ ಚರ್ಚೆ ಜೋರಾಗಿದೆ.
ತಿಲಕ್ ವರ್ಮಾಗೆ ರೆಸ್ಟ್, ಸಂಜು ಸ್ಯಾಮ್ಸನ್‌ಗೆ ಚಾನ್ಸ್
ಕೊನೆಯ ಟಿ20 ಪಂದ್ಯದಲ್ಲಿ ಮತ್ತೆ ಟೀಮ್ ಮ್ಯಾನೇಜ್‌ಮೆಂಟ್ ಸಂಜು ಸ್ಯಾಮ್ಸನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಮಣೆಹಾಕುವ ಸಾಧ್ಯತೆಯಿದೆ. ಹೀಗಾದಲ್ಲಿ ತಂಡದ ಉಪನಾಯಕ ತಿಲಕ್ ವರ್ಮಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ತಿಲಕ್ ವರ್ಮಾ ಮಂದಗತಿಯಲ್ಲಿ ರನ್ ಗಳಿಸುತ್ತಿದ್ದು, ದೊಡ್ಡ ಇನ್ನಿಂಗ್ಸ್ ಆಡಲು ಪದೇ ಪದೇ ವಿಫಲವಾಗುತ್ತಿದ್ದಾರೆ. ಹೀಗಾಗಿ ತಿಲಕ್ ವರ್ಮಾ ಇಂದು ಆಡುವ ಹನ್ನೊಂದರ ಬಳಗದಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.
ಸಂಜು ಸ್ಯಾಮ್ಸನ್‌ಗೆ ಮೂರನೇ ಕ್ರಮಾಂಕ
ಇನ್ನು ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆರಂಭಿಕರಾಗಿ ವೈಭವ್ ಸೂರ್ಯವಂಶಿಗೆ ಇಂದು ಮತ್ತೊಂದು ಅವಕಾಶ ದೊರೆಯುವ ಸಾಧ್ಯಯಿದೆ. ಹೀಗಾದಲ್ಲಿ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭಿಸಲಿದ್ದು, ಕೇರಳ ಮೂಲದ ಆಟಗಾರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು.
ವಾಷಿಂಗ್ಟನ್ ಸುಂದರ್‌ಗೆ ರೆಸ್ಟ್?
ಇನ್ನುಳಿದಂತೆ ನಾಲ್ಕನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಹಾಗೂ ಕಳೆದ ಪಂದ್ಯದಲ್ಲಿ ಅದ್ಭುತ ಅರ್ಧಶತಕ ಚಚ್ಚಿದ್ದ ನಾಯಕ ಶ್ರೇಯಸ್ ಅಯ್ಯರ್ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿಯುವ ನಿರೀಕ್ಷೆಯಿದೆ. ಇನ್ನು ಆಲ್ರೌಂಡರ್ ಶಿವಂ ದುಬೆ ಸ್ಥಾನ ಉಳಿಸಿಕೊಳ್ಳಲಿದ್ದು, ವಾಷಿಂಗ್ಟನ್ ಸುಂದರ್ ಬದಲಿಗೆ ಸೂರ್ಯಾನ್ಶ್ ಶೆಡ್ಗೆ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ.
ಐದನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ:
ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್(ನಾಯಕ) ಶಿವಂ ದುಬೆ, ಅಕ್ಷರ್ ಪಟೇಲ್, ಸೂರ್ಯಾನ್ಶ್ ಶೆಡ್ಗೆ, ಅರ್ಶದೀಪ್ ಸಿಂಗ್, ಪ್ರಸಿದ್ದ್ ಕೃಷ್ಣ, ಪ್ರಿನ್ಸ್ ಯಾದವ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

