Ind vs Aus: ಆಸೀಸ್ ಎದುರಿನ ಎರಡನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 3 ಮಹತ್ವದ ಬದಲಾವಣೆ..?
ನಾಗ್ಪುರ(ಸೆ.23): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಗ್ಪುರದಲ್ಲಿ ಹೈವೋಲ್ಟೇಜ್ ಪಂದ್ಯ ಜರುಗಲಿದೆ. 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲು ಅನುಭವಿಸಿರುವ ಭಾರತ ತಂಡವು, ಸರಣಿ ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ಎರಡನೇ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ಆಸ್ಟ್ರೇಲಿಯಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 3 ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
1. ಕೆ ಎಲ್ ರಾಹುಲ್:
ಬಲಗೈ ಆರಂಭಿಕ ಬ್ಯಾಟರ್ ರಾಹುಲ್, ಆಸೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಆಕರ್ಷಕ 55 ರನ್ ಬಾರಿಸುವ ಮೂಲಕ ತಮ್ಮ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದು, ತಮ್ಮ ಫಾರ್ಮ್ ಮುಂದುವರೆಸಿಕೊಂಡು ಹೋಗಲು ರೆಡಿಯಾಗಿದ್ದಾರೆ.
2. ರೋಹಿತ್ ಶರ್ಮಾ:
ನಾಯಕ ರೋಹಿತ್ ಶರ್ಮಾ ಕೂಡಾ ಉತ್ತಮ ಫಾರ್ಮ್‌ನಲ್ಲಿದ್ದು, ತಮಗೆ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾಗುತ್ತಿದ್ದಾರೆ. ಹಿಟ್‌ಮ್ಯಾನ್ ಅವರಿಂದ ಅಭಿಮಾನಿಗಳು ದೊಡ್ಡ ಇನಿಂಗ್ಸ್ ನಿರೀಕ್ಷಿಸುತ್ತಿದ್ದಾರೆ.
3. ವಿರಾಟ್ ಕೊಹ್ಲಿ:
ಏಷ್ಯಾಕಪ್ ಟೂರ್ನಿಯಲ್ಲಿ ಮಿಂಚಿದ್ದ ವಿರಾಟ್ ಕೊಹ್ಲಿ, ಆಸೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ವಿರಾಟ್ ಮತ್ತೆ ಫಾರ್ಮ್‌ಗೆ ಮರಳಲು ಹಾತೊರೆಯುತ್ತಿದ್ದಾರೆ.
4. ಸೂರ್ಯಕುಮಾರ್ ಯಾದವ್:
ಭಾರತ ಟಿ20 ತಂಡದ ಮಧ್ಯಮ ಕ್ರಮಾಂಕದ ಆಧಾರಸ್ತಂಭ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಕಳೆದ ಪಂದ್ಯದಲ್ಲಿ ಚುರುಕಿನ 45 ರನ್ ಸಿಡಿಸಿದ್ದರು. ಸೂರ್ಯನ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಯಿಟ್ಟಿದ್ದಾರೆ.
5. ರಿಷಭ್ ಪಂತ್:
ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯದಲ್ಲಿ ವಿಫಲರಾಗಿದ್ದರು. ಹೀಗಾಗಿ ಕಾರ್ತಿಕ್ ಬದಲಿಗೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಇಂದು ರಿಷಭ್ ಪಂತ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುವ ಸಾಧ್ಯತೆಯಿದೆ.
6. ಹಾರ್ದಿಕ್ ಪಾಂಡ್ಯ:
ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಮೊದಲ ಟಿ20 ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಅಜೇಯ 71 ರನ್ ಸಿಡಿಸಿ ಮಿಂಚಿದ್ದರು. ಬ್ಯಾಟಿಂಗ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಪಾಂಡ್ಯ, ಬೌಲಿಂಗ್‌ನಲ್ಲಿ ಲಯಕ್ಕೆ ಮರಳಬೇಕಿದೆ.
7. ಅಕ್ಷರ್ ಪಟೇಲ್:
ಮೊದಲ ಪಂದ್ಯದಲ್ಲಿ ಅಶ್ವಿನ್ ಅವರನ್ನು ಹಿಂದಿಕ್ಕಿ ಆಲ್ರೌಂಡರ್ ರೂಪದಲ್ಲಿ ಸ್ಥಾನ ಪಡೆದಿದ್ದ ಅಕ್ಷರ್ ಪಟೇಲ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಕ್ಷರ್ 4 ಓವರ್ ಬೌಲಿಂಗ್ ಮಾಡಿ ಕೇವಲ 17 ರನ್ ನೀಡಿ 3 ವಿಕೆಟ್ ಉರುಳಿಸಿದ್ದರು.
8. ರವಿಚಂದ್ರನ್ ಅಶ್ವಿನ್:
ಮೊದಲ ಟಿ20 ಪಂದ್ಯದಲ್ಲಿ ಅನುಭವಿ ಆಫ್‌ಸ್ಪಿನ್ನರ್ ಅಶ್ವಿನ್ ಬೆಂಚ್ ಕಾಯಿಸಿದ್ದರು. ಇದೇ ವೇಳೆ ಲೆಗ್‌ಸ್ಪಿನ್ನರ್ ಚಹಲ್ ದುಬಾರಿಯಾಗಿರುವುದರಿಂದ, ಎರಡನೇ ಪಂದ್ಯದಲ್ಲಿ ಅಶ್ವಿನ್‌ಗೆ ಮಣೆಹಾಕುವ ಸಾಧ್ಯತೆಯಿದೆ.
9. ಹರ್ಷಲ್ ಪಟೇಲ್:
ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಹರ್ಷಲ್ ಪಟೇಲ್, ಆಸೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ದುಬಾರಿಯಾಗಿದ್ದರು. ಎರಡನೇ ಪಂದ್ಯದಲ್ಲಿ ಲಯ ಕಂಡುಕೊಳ್ಳಲು ಪಟೇಲ್‌ಗೆ ಅವಕಾಶ ಸಿಗುವ ಸಾಧ್ಯತೆಯಿದೆ.
10. ಭುವನೇಶ್ವರ್ ಕುಮಾರ್:
ಟೀಂ ಇಂಡಿಯಾ ಮತ್ತೋರ್ವ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಕೂಡಾ ದುಬಾರಿಯಾಗಿದ್ದರು. ಆದರೆ ಇಂದಿನ ಪಂದ್ಯಕ್ಕೆ ಬುಮ್ರಾ ತಂಡ ಕೂಡಿಕೊಳ್ಳುವುದರಿಂದ ಬುಮ್ರಾ ಜತೆಗೆ ಭುವಿ ಹೊಸ ಚೆಂಡಿನೊಂದಿಗೆ ದಾಳಿ ನಡೆಸುವ ಸಾಧ್ಯತೆಯಿದೆ.
11. ಜಸ್ಪ್ರೀತ್ ಬುಮ್ರಾ:
ಮಾರಕ ವೇಗಿ ಬುಮ್ರಾ, ಫಿಟ್ನೆಸ್ ಸಮಸ್ಯೆಯಿಂದ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದಿದ್ದರು. ಇದೀಗ ಎರಡನೇ ಟಿ20 ಪಂದ್ಯಕ್ಕೆ ಬುಮ್ರಾ, ತಂಡ ಕೂಡಿಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಉಮೇಶ್ ಯಾದವ್ ಹೊರಗುಳಿಯಬೇಕಾಗುತ್ತದೆ.