ಏಕದಿನ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಸೊನ್ನೆ ಸುತ್ತಿರುವ ಬ್ಯಾಟರ್‌ಗಳಲ್ಲಿ ಸೂರ್ಯಕುಮಾರ್ ಯಾದವ್ ಮೊದಲೇನಲ್ಲ!
ಚೆನ್ನೈ(ಮಾ.23): ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್, ಮೂರು ಪಂದ್ಯಗಳಲ್ಲೂ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಹಾಗಂತ ಏಕದಿನ ಕ್ರಿಕೆಟ್‌ನಲ್ಲಿ ಸತತ 3 ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಭಾರತೀಯ ಆಟಗಾರರ ಪೈಕಿ ಸೂರ್ಯಕುಮಾರ್ ಯಾದವ್ ಅವರೇನು ಮೊದಲಿಗರಲ್ಲ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸೇರಿದಂತೆ ಒಟ್ಟು 6 ಮಂದಿ ಈವರೆಗೆ ಹ್ಯಾಟ್ರಿಕ್ ಶೂನ್ಯ ಸಂಪಾದನೆ ಮಾಡಿದ್ದಾರೆ. ಅಷ್ಟಕ್ಕೂ ಯಾರವರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
1. ಸಚಿನ್ ತೆಂಡುಲ್ಕರ್:
ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಪಂದ್ಯಗಳನ್ನಾಡಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿರುವ ಸಚಿನ್ ತೆಂಡುಲ್ಕರ್ 1994ರಲ್ಲಿ ಸತತ 3 ಏಕದಿನ ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದರು.
2. ಅನಿಲ್ ಕುಂಬ್ಳೆ:
ಕನ್ನಡಿಗ ಅನಿಲ್ ಕುಂಬ್ಳೆ ಕೂಡಾ ಏಕದಿನ ಕ್ರಿಕೆಟ್‌ನಲ್ಲಿ ದಶಕಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 1996ರಲ್ಲಿ ಅನಿಲ್ ಕುಂಬ್ಳೆ, ಸತತ ಮೂರು ಏಕದಿನ ಪಂದ್ಯದಲ್ಲಿ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ್ದರು.
3. ಜಹೀರ್ ಖಾನ್:
ಟೀಂ ಇಂಡಿಯಾ ಎಡಗೈ ವೇಗಿಯಾಗಿದ್ದ ಜಹೀರ್ ಖಾನ್, 2003-04ರ ಅವಧಿಯಲ್ಲಿ ಸತತ ಮೂರು ಏಕದಿನ ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪೆರೇಡ್ ನಡೆಸಿದ್ದರು.
4. ಇಶಾಂತ್ ಶರ್ಮಾ:
ಟೀಂ ಇಂಡಿಯಾ ನೀಳಕಾಯದ ವೇಗಿ ಇಶಾಂತ್ ಶರ್ಮಾ, 2010-11ರ ಅವಧಿಯಲ್ಲಿ ಭಾರತ ಪರ ಮೂರು ಏಕದಿನ ಪಂದ್ಯಗಳನ್ನಾಡಿ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು.
5. ಜಸ್ಪ್ರೀತ್ ಬುಮ್ರಾ:
ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ 2017-19ರ ಅವಧಿಯಲ್ಲಿ ಮೂರು ಏಕದಿನ ಪಂದ್ಯಗಳನ್ನಾಡಿ ಮೂರೂ ಪಂದ್ಯಗಳಲ್ಲೂ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದರು.
6. ಸೂರ್ಯಕುಮಾರ್ ಯಾದವ್:
ಮುಂಬೈ ಮೂಲದ ಪ್ರತಿಭಾನ್ವಿತ ಬ್ಯಾಟರ್ ಸೂರ್ಯಕುಮಾರ್ ಯಾದವ್, ಇದೀಗ ಆಸ್ಟ್ರೇಲಿಯಾ ಎದುರಿನ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆಗಿ ಅನಗತ್ಯ ದಾಖಲೆಗೆ ಭಾಜನರಾಗಿದ್ದಾರೆ.