ಭಾರತದ ಸೆಮಿಫೈನಲ್ ಹಾದಿ; ಇಲ್ಲಿದೆ ಟೀಂ ಇಂಡಿಯಾ ವಿಶ್ವಕಪ್ ಹೆಜ್ಜೆಗುರುತು
ಬೆಂಗಳೂರು(ನ.15): 2023ರ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಡಲಿವೆ. ಭಾರತ ತಂಡವು ಅಜೇಯವಾಗಿ ಸೆಮೀಸ್ ಪ್ರವೇಶಿಸಿದೆ. ವಿಶ್ವಕಪ್ ಲೀಗ್ ಹಂತದಲ್ಲಿ ಭಾರತ ತಂಡದ ಪ್ರದರ್ಶನ ಹೇಗಿತ್ತು ಎನ್ನುವುದನ್ನು ನಾವಿಂದು ನೋಡೋಣ ಬನ್ನಿ
ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗೆಲುವು
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 199 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಆರಂಭಿಕ ಆಘಾತದ ನಡುವೆಯೂ ವಿರಾಟ್ ಕೊಹ್ಲಿ(85) ಹಾಗೂ ಕೆ ಎಲ್ ರಾಹುಲ್(97*) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಭರ್ಜರಿ ಜಯ ಸಾಧಿಸಿತ್ತು.
ಅಫ್ಘಾನಿಸ್ತಾನ ವಿರುದ್ಧ 8 ವಿಕೆಟ್ ಜಯ
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ 272 ರನ್ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ ರೋಹಿತ್ ಶರ್ಮಾ(131) ಆಕರ್ಷಕ ಶತಕ ಹಾಗೂ ವಿರಾಟ್ ಕೊಹ್ಲಿ ಅಜೇಯ ಅರ್ಧಶತಕ(55) ನೆರವಿನಿಂದ 15 ಓವರ್ ಬಾಕಿ ಇರುವಂತೆಯೇ 8 ವಿಕೆಟ್ ಜಯ ಸಾಧಿಸಿತು.
ಪಾಕಿಸ್ತಾನ ವಿರುದ್ಧ 7 ವಿಕೆಟ್ ಗೆಲುವು
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ ಕೇವಲ 191 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ರೋಹಿತ್ ಶರ್ಮಾ 86 ರನ್ ಸಿಡಿಸಿ ಮಿಂಚಿದರು.
ಬಾಂಗ್ಲಾದೇಶ ವಿರುದ್ಧ 7 ವಿಕೆಟ್ ಜಯ
ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡವು 8 ವಿಕೆಟ್ ಕಳೆದುಕೊಂಡು 256 ರನ್ ಬಾರಿಸಿತು. ವಿರಾಟ್ ಕೊಹ್ಲಿ(103) ಅಜೇಯ ಶತಕ ಹಾಗೂ ಶುಭ್‌ಮನ್ ಗಿಲ್ ಅರ್ಧಶತಕದ ನೆರವಿನಿಂದ ಭಾರತ 7 ವಿಕೆಟ್ ಸುಲಭ ಗೆಲುವು ದಾಖಲಿಸಿತು.
ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಗೆಲುವು
ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 273 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಗುರಿ ಬೆನ್ನತ್ತಿದ ಟೀಂ ಇಂಡಿಯಾ, ವಿರಾಟ್ ಕೊಹ್ಲಿ(95) ದಿಟ್ಟ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶಮಿ 5 ವಿಕೆಟ್ ಗೊಂಚಲು ಪಡೆದರು.
ಇಂಗ್ಲೆಂಡ್ ವಿರುದ್ಧ 100 ರನ್ ಜಯಭೇರಿ
ಲಖನೌದ ಏಕಾನ ಮೈದಾನದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಎದುರು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 229 ರನ್‌ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನತ್ತಿದ ಇಂಗ್ಲೆಂಡ್, ಶಮಿ(4), ಬುಮ್ರಾ(3) ಮಾರಕ ದಾಳಿಗೆ ತತ್ತರಿಸಿ 129 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 100 ರನ್ ಭಾರತ 100 ರನ್ ಜಯ ಸಾಧಿಸಿತು.
ಶ್ರೀಲಂಕಾ ವಿರುದ್ಧ 302 ರನ್ ಗೆಲುವು
ಮುಂಬೈನ ವಾಂಖೇಡೆ ಮೈದಾನದಲ್ಲಿ ಲಂಕಾ ಎದುರು ಗಿಲ್(92), ಕೊಹ್ಲಿ(88), ಶ್ರೇಯಸ್(82) ದಿಟ್ಟ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್ ಕಳೆದುಕೊಂಡು 357 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಲಂಕಾ, ಶಮಿ(18/5) ಮಾರಕ ದಾಳಿಗೆ ತತ್ತರಿಸಿ 55 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಭಾರತ 302 ಅಂತರದ ಜಯ ದಾಖಲಿಸಿತು.
ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಗೆಲುವು
ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಆಕರ್ಷಕ ಶತಕ ಹಾಗೂ ಶ್ರೇಯಸ್ ಅಯ್ಯರ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 326 ರನ್ ಬಾರಿಸಿತು. ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ರವೀಂದ್ರ ಜಡೇಜಾ ಮಾರಕ ದಾಳಿಗೆ ತತ್ತರಿಸಿ ಕೇವಲ 83 ರನ್‌ಗಳಿಗೆ ಆಲೌಟ್ ಆಯಿತು. ಜಡೇಜಾ 5 ವಿಕೆಟ್ ಗೊಂಚಲು ಪಡೆದರು. ಈ ಮೂಲಕ ಟೀಂ ಇಂಡಿಯಾ 243 ರನ್ ಅಂತರದ ಗೆಲುವು ದಾಖಲಿಸಿತು.
ನೆದರ್‌ಲೆಂಡ್ಸ್ ವಿರುದ್ಧ 160 ರನ್ ಜಯ
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಶ್ರೇಯಸ್ ಅಯ್ಯರ್(128) ಹಾಗೂ ಕೆ ಎಲ್ ರಾಹುಲ್(102) ಭರ್ಜರಿ ಶತಕ ಹಾಗೂ ರೋಹಿತ್ ಶರ್ಮಾ(61), ಶುಭ್‌ಮನ್ ಗಿಲ್(51) ವಿರಾಟ್ ಕೊಹ್ಲಿ(51) ಭರ್ಜರಿ ಅರ್ಧಶತಕಗಳ ನೆರವಿನಿಂದ 4 ವಿಕೆಟ್ ಕಳೆದುಕೊಂಡು 410 ರನ್ ಬಾರಿಸಿತು. ಗುರಿ ಬೆನ್ನತ್ತಿದ ನೆದರ್‌ಲೆಂಡ್ಸ್ ತಂಡವು 250 ರನ್‌ಗಳಿಗೆ ಸರ್ವಪತನ ಕಂಡಿತು.
ಇದೀಗ ಮುಂಬೈನ ವಾಂಖೇಡೆ ಮೈದಾನದಲ್ಲಿಂದು ಭಾರತ ತಂಡವು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. 2019ರ ವಿಶ್ವಕಪ್ ಸೆಮೀಸ್ ಸೋಲಿಗೆ ಸೇಡು ತೀರಿಸಿಕೊಳ್ಳಲು ರೋಹಿತ್ ಶರ್ಮಾ ಪಡೆ ಸಜ್ಜಾಗಿದೆ.