Breaking: ಇದ್ದಕ್ಕಿದ್ದಂತೆ ಮೈದಾನ ತೊರೆದ ಶುಭ್‌ಮನ್ ಗಿಲ್..! ಯಾಕೆ? ಏನಾಯ್ತು?
ಮುಂಬೈ(ನ.15): 2023ರ ಐಸಿಸಿ ಏಕದಿನ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಉತ್ತಮ ಆರಂಭ ಪಡಿದಿದೆ. ಶತಕದತ್ತ ದಾಪುಗಾಲಿಡುತ್ತಿದ್ದ ಶುಭ್‌ಮನ್ ಗಿಲ್ ಇದ್ದಕ್ಕಿದ್ದಂತೆ ಮೈದಾನ ತೊರೆದಿದ್ದಾರೆ. ಅಷ್ಟಕ್ಕೂ ಗಿಲ್‌ಗೆ ಏನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ ಆತಿಥ್ಯವನ್ನು ವಹಿಸಿದೆ. ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡು ಉತ್ತಮ ಆರಂಭ ಪಡೆದಿದೆ.
ಮೊದಲ ವಿಕೆಟ್‌ಗೆ ಶುಭ್‌ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಕೇವಲ 8.2 ಓವರ್‌ಗಳಲ್ಲಿ 71 ರನ್‌ಗಳ ಜತೆಯಾಟವಾಡಿತು. ರೋಹಿತ್ ಶರ್ಮಾ ಕೇವಲ 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 49 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಶುಭ್‌ಮನ್ ಗಿಲ್ ಕೂಡಾ ಚುರುಕಾಗಿ ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ 86 ಎಸೆತಗಳಿಗೆ ಮುರಿಯದ 93 ರನ್ ಜತೆಯಾಟ ನಿಭಾಯಿಸಿತು.
ಕಿವೀಸ್ ಬೌಲರ್‌ಗಳ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಶುಭ್‌ಮನ್ ಗಿಲ್ ಕೇವಲ 65 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 79 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದರು.
ಈ ವೇಳೆ ಶುಭ್‌ಮನ್ ಗಿಲ್‌ಗೆ ಸ್ನಾಯು ಸೆಳೆತ ಕಂಡು ಬಂದಿದೆ. ತಕ್ಷಣವೇ ತಂಡದ ಫಿಸಿಯೋ ಮೈದಾನಕ್ಕೆ ಆಗಮಿಸಿ ಪ್ರಥಮ ಚಿಕಿತ್ಸೆ ನೀಡಿದರಾದರೂ, ಬ್ಯಾಟ್ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡ ಬಳಿಕ ಅನಿವಾರ್ಯವಾಗಿ ರಿಟೈರ್ಡ್ ಹರ್ಟ್ ಪಡೆದು ಗಿಲ್ ಮೈದಾನ ತೊರೆದರು.
ಗಿಲ್ ಮತ್ತೆ ಕ್ರೀಸ್ ಗಿಳಿಯುತ್ತಾರಾ? ರಿಟೈರ್ಡ್ ಹರ್ಟ್ ನಿಯಮವೇನು ಎನ್ನುವ ಕುತೂಹಲವಿದೆ. ಇದಕ್ಕೆ ಉತ್ತರ ಒಂದು ವೇಳೆ ಈ ಇನಿಂಗ್ಸ್ ಮುಗಿಯುವುದರೊಳಗಾಗಿ ಗಿಲ್ ಚೇತರಿಸಿಕೊಂಡು, ಬ್ಯಾಟ್ ಮಾಡಲು ಫಿಟ್ ಆದರೆ, ಗಿಲ್‌ಗೆ ಬ್ಯಾಟಿಂಗ್ ಮಾಡುವ ಅವಕಾಶವಿದೆ.
Shubman Gill
ಆದರೆ ಶುಭ್‌ಮನ್ ಗಿಲ್ ಕ್ರೀಸ್‌ಗಿಳಿಯಬೇಕಾದರೆ, ಬ್ಯಾಟಿಂಗ್ ಮಾಡುತ್ತಿರುವ ಯಾವುದಾದರೂ ಒಬ್ಬ ಬ್ಯಾಟರ್ ಔಟ್ ಆಗಬೇಕು ಅಥವಾ ಕ್ರೀಸ್‌ನಲ್ಲಿರುವ ಬ್ಯಾಟರ್ ರಿಟೈರ್ಡ್ ಹರ್ಟ್ ಪಡೆದು ಪೆವಿಲಿಯನ್‌ಗೆ ವಾಪಾಸ್ಸಾಗಬೇಕು. ಹಾಗಾದಲ್ಲಿ ಮಾತ್ರ ಗಿಲ್ ಕ್ರೀಸ್‌ಗಿಳಿಯಲು ಸಾಧ್ಯವಾಗಲಿದೆ.
ಸದ್ಯ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದು, ಮೊದಲ 30 ಓವರ್ ಅಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 214 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಕೊಹ್ಲಿ 65 ಹಾಗೂ ಶ್ರೇಯಸ್ ಅಯ್ಯರ್ 19 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.